ಕರ್ನಾಟಕ

ಇನ್ನೂ ಒಂದು ತಿಂಗಳ ಅವಧಿಗೆ ವಿಸ್ತರಿಸಿದ ಟಿವಿ ಚಾನೆಲ್ ಗಳ ಹೊಸ ದರ ಪಟ್ಟಿ!

Pinterest LinkedIn Tumblr


ಬೆಂಗಳೂರು: ದೇಶಾದ್ಯಂತ ಡಿ.29ರಿಂದ ಜಾರಿಗೆ ಬರಬೇಕಿದ್ದ ಕೇಬಲ್‌ ಟಿ.ವಿ ಸೇವೆಗಳ ಹೊಸ ದರ ನಿಯಂತ್ರಣ ವ್ಯವಸ್ಥೆಯನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) 2019ರ ಜ.31ರವರೆಗೆ ವಿಸ್ತರಿಸಿದೆ. ಇದರಿಂದಾಗಿ ಗ್ರಾಹಕರು ಹೊಸ ವ್ಯವಸ್ಥೆಗೆ ವರ್ಗಾವಣೆಗೊಳ್ಳಲು ತಿಂಗಳು ಕಾಲಾವಕಾಶ ದೊರಕಿದ್ದು, ಕೇಬಲ್‌ ಆಪರೇಟರ್‌ಗಳು ಹಾಗೂ ಎಂಎಸ್‌ಒಗಳು ಸ್ವಲ್ಪ ನಿರಾಳರಾಗಿದ್ದಾರೆ.

ಏಕಾಏಕಿ ಹೊಸ ವ್ಯವಸ್ಥೆಗೆ ವರ್ಗಾವಣೆ ಮಾಡಲು ಹೋದರೆ ಗೊಂದಲ ಸೃಷ್ಟಿಯಾಗಿ ಸೇವೆಯಲ್ಲಿ ವ್ಯತ್ಯಯವಾದರೆ ಗ್ರಾಹಕರಿಗೆ ತೊಂದರೆ ಆಗಲಿದೆ ಎಂದು ಟ್ರಾಯ್‌, ಕೇಬಲ್‌ ಆಪರೇಟರ್‌ ಮತ್ತು ಮಲ್ಟಿ ಸಿಸ್ಟಂ ಆಪರೇಟರ್‌(ಎಂಎಸ್‌ಒ)ಗಳ ಜೊತೆ ಸರಣಿ ಸಭೆಗಳನ್ನು ನಡೆಸಿದ ಬಳಿಕ ಅವಧಿಯನ್ನು ಜ.31ರವರೆಗೆ ವಿಸ್ತರಿಸಲು ತೀರ್ಮಾನಿಸಿದೆ ಎಂದು ಟ್ರಾಯ್‌ನ ಕಾರ‍್ಯದರ್ಶಿ ಎಸ್‌.ಕೆ.ಗುಪ್ತಾ ಶುಕ್ರವಾರ ಪ್ರಕಟಿಸಿದರು.

”ಹಳೆಯ ವ್ಯವಸ್ಥೆಯಿಂದ ಹೊಸ ವ್ಯವಸ್ಥೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಸುಗಮಗೊಳಿಸುವ ಉದ್ದೇಶದಿಂದ ಮೂರು ಹಂತಗಳಲ್ಲಿ ಜಾರಿಗೊಳಿಸಲಾಗುವುದು. ಗ್ರಾಹಕರು ಹೊಸ ವ್ಯವಸ್ಥೆಗೆ ವರ್ಗಾವಣೆಯಾಗುವವರೆಗೆ ಹಳೆಯ ದರವನ್ನೇ ವಿಧಿಸಬೇಕು,” ಎಂದೂ ಸಹ ಟ್ರಾಯ್‌ ತನ್ನ ಆದೇಶದಲ್ಲಿ ತಿಳಿಸಿದೆ.

ದರ ಪಟ್ಟಿ ಬಹುತೇಕ ಸಿದ್ಧ

ಎಂಎಸ್‌ಒಗಳ ಬಹುತೇಕ ದರ ಪಟ್ಟಿಯನ್ನು ಸಿದ್ದಪಡಿಸಿದ್ದು, ಅವುಗಳನ್ನು ಕೇಬಲ್‌ ಆಪರೇಟರ್‌ ಮೂಲಕ ಗ್ರಾಹಕರಿಗೆ ನೀಡಲಾಗುವುದು. ಗ್ರಾಹಕರು ಯಾವ ಚಾನೆಲ್‌, ಎಷ್ಟು ಚಾನೆಲ್‌ ಕೇಳುತ್ತಾರೋ ಅದಕ್ಕೆ ತಕ್ಕಂತೆ ದರ ಏರಿಳಿಕೆಯಾಗುತ್ತದೆ. ಕನಿಷ್ಠ ದರ 130 ರೂ. ನೀಡಲೇಬೇಕು. ಅದರ ಜೊತೆಗೆ ಶೇ.18 ಜಿಎಸ್‌ಟಿ ತೆರಿಗೆ. ಇದರಲ್ಲಿ ದೂರದರ್ಶನದ ಎಲ್ಲ ವಾಹಿನಿಗಳು, ಜೊತೆಗೆ ನ್ಯೂಸ್‌ ಚಾನಲ್‌ಗಳು ಲಭ್ಯವಿರುತ್ತವೆ. ಉಳಿದಂತೆ ಕನ್ನಡದ ವಾಹಿನಿಗಳು ಬೇಕೆಂದರೆ ಅವುಗಳನ್ನು ಆಯ್ದುಕೊಂಡು ಅವುಗಳಿಗೆ ಪ್ರತ್ಯೇಕ ಹಣ ಪಾವತಿಸಬೇಕಾಗುತ್ತದೆ. ಅದೇ ರೀತಿ ತೆಲುಗು, ತಮಿಳು, ಹಿಂದಿ ಅಥವಾ ಇನ್ಯಾವುದೇ ಭಾಷೆಯ ಅಥವಾ ಕ್ರೀಡಾ ಚಾನಲ್‌ ಬೇಕೆಂದರೆ ಅಯಾ ಚಾನಲ್‌ಗಳಿಗೆ ತಗುಲುವ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ ಎನ್ನುತ್ತಾರೆ ಕೇಬಲ್‌ ಆಪರೇಟರ್‌.
“ಒಮ್ಮೆಲೆ ಹೊಸ ವ್ಯವಸ್ಥೆಗೆ ವರ್ಗಾವಣೆಗೊಳ್ಳುವುದು ಕಷ್ಟವೆಂದು ವ್ಯಾಪಕ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಟ್ರಾಯ್‌ 2019ರ ಜ.31ರವರೆಗೆ ಹೊಸ ವ್ಯವಸ್ಥೆಗೆ ವರ್ಗಾವಣೆಗೊಳ್ಳಲು ಕಾಲಾವಕಾಶ ನೀಡಿದೆ. ಇದೀಗ ಎಂಎಸ್‌ಒಗಳ ಜೊತೆ ಮಾತನಾಡಿಕೊಂಡು ದರಪಟ್ಟಿ ಸಿದ್ದಪಡಿಸಿ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುವುದು.”
— ಎಸ್‌.ಪ್ಯಾಟ್ರಿಕ್‌ ರಾಜು, ಅಧ್ಯಕ್ಷರು, ಕರ್ನಾಟಕ ರಾಜ್ಯಕೇಬಲ್‌ ಆಪರೇಟರ್‌ ಅಸೋಸಿಯೇಷನ್‌

ದರ ಏಷ್ಟಾಗಬಹುದು?

– 130 ರೂ. (100 ಫ್ರೀ ಟು ಏರ್‌ ಚಾನಲ್‌) +ಶೇ.18 ತೆರಿಗೆ -154 ರೂ.+ ಕನ್ನಡದ ಎಲ್ಲ ವಾಹಿನಿಗಳು (ಬೇಸಿಕ್‌ ಪ್ಯಾಕ್‌ 91 ರೂ.-ಕಲರ್ಸ್‌, ಸ್ಟಾರ್‌, ಜೀ ಮತ್ತು ಸನ್‌ ನೆಟ್‌ವರ್ಕ್‌ ಚಾನಲ್‌) +ನೆಟ್‌ವರ್ಕ್‌ ಕ್ಯಾಪ್ಯಾಸಿಟಿ ಫೀ- 20 ರೂ.

ಒಟ್ಟು ಎಲ್ಲ ಸೇರಿ-280 ರಿಂದ 300 ರೂ.

– ಆನಂತರ ಎಷ್ಟು ಚಾನಲ್‌ ಆಯ್ಕೆ ಮಾಡಿಕೊಳ್ಳುತ್ತೀರೋ ಅಷ್ಟಕ್ಕೆ ಹಣ ಪಾವತಿಸಬೇಕು.

ಗ್ರಾಹಕರಿಗೇನು ಅನುಕೂಲ?

– ತಮಗೆ ಎಷ್ಟು ಚಾನೆಲ್‌ ಬೇಕು,ಯಾವ ಚಾನೆಲ್‌ ಬೇಕು ಎಂಬುದನ್ನು ನಿರ್ಧರಿಸಿಕೊಳ್ಳಬಹುದು.

– ಬೇಡವಾದ/ಅನಗತ್ಯ ಚಾನೆಲ್‌ಗಳ ಕಿರಿಕಿರಿ ಇರುವುದಿಲ್ಲ.

– ಫ್ರೀ ಟು ಏರ್‌ ಚಾನಲ್‌(ಎಫ್‌ಟಿಎ)ಪಡೆದ ನಂತರ ಗ್ರಾಹಕರು ತಮಗಿಷ್ಟವಾದ ಚಾನೆಲ್‌/ಚಾನೆಲ್‌ ಗುಚ್ಛವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ.

– ಸೇವಾ ಪೂರೈಕೆದಾರರು ಚಾನಲ್‌ ದರಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವುದು ಕಡ್ಡಾಯ.

– ಮೊದಲಿದ್ದಂತೆ ಸೇವಾ ಪೂರೈಕೆದಾರರು ಸ್ಮಾರ್ಟ್‌ ಪ್ಯಾಕೇಜ್‌ ಮೂಲಕ ತಪ್ಪಿಸಿಕೊಳ್ಳಲಾಗದು.

ಡಿಟಿಎಚ್‌ ದರವೂ ಏರಿಕೆ

ಹೊಸ ದರ ವ್ಯವಸ್ಥೆ ಡಿಟಿಎಚ್‌ಗೂ ಅನ್ವಯವಾಗಲಿದೆ. ಅದರಲ್ಲೂ ಪ್ಯಾಕೇಜ್‌ ದರ ವ್ಯತ್ಯಯವಾಗಲಿದೆ. ಚಾನಲ್‌ಗಳು ತಮ್ಮ ವಾಹಿನಿಗಳ ಸಂಪರ್ಕಕ್ಕೆ ದರ ನಿಗದಿಪಡಿಸಿರುವುದರಿಂದ ಡಿಟಿಎಚ್‌ ಸಂಪರ್ಕ ಪಡೆದಿರುವ ಗ್ರಾಹಕರು ತಮಗೆ ಬೇಕಾಗಿರುವ ಚಾನಲ್‌ ಪಡೆಯಬೇಕಾದರೆ ಅದಕ್ಕೆ ತಕ್ಕಂತೆ ಹಣ ಪಾವತಿಸಬೇಕಾಗುತ್ತದೆ.

ಹಂತ ಹಂತವಾಗಿ ಜಾರಿ

– ಮೊದಲ ಹಂತ: ಜ.7, 2019ರೊಳಗೆ ಶೇ.30ರಷ್ಟು

– ಎರಡನೇ ಹಂತ: ಜ.14, 2019ರೊಳಗೆ ಶೇ.60ರಷ್ಟು

– ಮೂರನೇ ಹಂತ: ಜ.21, 2019ರೊಳಗೆ ಶೇ.100ರಷ್ಟು

Comments are closed.