ಕರ್ನಾಟಕ

ನನ್ನ ಹಾಗೂ ಪರಮೇಶ್ವರ್ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವೂ ಇಲ್ಲ… ವರದಿ ಮಾಡುವ ಮೊದಲು ಪರಾಮರ್ಶಿಸಿ: ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಹಾಗೂ ಪರಮೇಶ್ವರ್ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳೂ ಬಂದಿಲ್ಲ. ಇಬ್ಬರ ನಡುವೆ ಯಾವುದೇ ರೀತಿಯ ಚರ್ಚೆ-ವಾಗ್ವಾದಗಳೂ ನಡೆದಿಲ್ಲ. ಇದನ್ನು ಹೇಳಿದವರು ಯಾರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಪರಮೇಶ್ವರ್ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯಗಳೇ ಇಲ್ಲ. ನಿನ್ನೆ ನಡೆದ ಸಭೆಯಲ್ಲಿ ಆ ರೀತಿಯ ಯಾವುದೇ ಚರ್ಚೆ-ವಾಗ್ವಾದಗಳೂ ನಡೆದಿಲ್ಲ. ಇದನ್ನು ಹೇಳಿದವರು ಯಾರು? ವಿರೋಧ ಪಕ್ಷಗಳ ಕೆಲವು ನಾಯಕರು ಹತಾಶರಾಗಿ ಹರಡುತ್ತಿರುವ ಸುದ್ದಿಗಳನ್ನು ಮಾಧ್ಯಮಗಳು ವರದಿ ಮಾಡುವ ಮೊದಲು ಪರಾಮರ್ಶಿಸಿದರೆ ಒಳ್ಳೆಯದು ಎಂದು ಹೇಳಿದ್ದಾರೆ.

ಸಚಿವ ಖಾತೆ ಮರುಹಂಚಿಕೆ ಬಗ್ಗೆ ನಿನ್ನೆಯ ಸಭೆಯಲ್ಲಿ ಸೌಹಾರ್ದಯುತವಾಗಿಯೇ ನಡೆದಿದೆ. ಸಭೆಯಲ್ಲಿದ್ದ ನಾಯಕರೆಲ್ಲರೂ ಹಿರಿಯರು, ಅನುಭವಿಗಳು. ಈ ರೀತಿ ಜಗಳವಾಡಲು ನಮ್ಮಲ್ಲಿ ಯಾರೂ ಮಕ್ಕಳಿಲ್ಲ. ಕಪೋಲ ಕಲ್ಪಿತ ಸುದ್ದಿಗಳನ್ನು ನಂಬಬೇಡಿ, ಹರಡಬೇಡಿ ಎಂದು ತಿಳಿಸಿದ್ದಾರೆ.

ಸಚಿವ ಖಾತೆ ಮರುಹಂಚಿಕೆ ಬಗ್ಗೆ ನಿನ್ನೆ ನಡೆಸ ಶಭೆಯಲ್ಲಿ ಎಲ್ಲಾ ನಾಯಕರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಕೆ.ಸಿ.ವೇಣುಗೋಪಾಲ್ ಅವರು ರಾಷ್ಟ್ರೀಯ ಅಧ್ಯಕ್ಷ ಗಮನಕ್ಕೆ ತರುತ್ತಾರೆ. ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೇ ಕೈಗೊಳ್ಳುತ್ತಾರೆ. ನಾನು ಮುಖ್ಯಮಂತ್ರಿಯಾಗಿದ್ದ 5 ವರ್ಷಗಳ ಕಾಲ ನನ್ನ ಮತ್ತು ಪರಮೇಶ್ವರ್ ಸಂಬಂಧ ಕೆಡಿಸುವ ಪ್ರಯತ್ನಗಳನ್ನು ವಿರೋಧ ಪಕ್ಷಗಳ ನಾಯಕರು ಮಾಡುತ್ತಲೇ ಇದ್ದರು. ಅದು ಈಗಲೂ ಮುಂದುವರೆದಿದೆ. ಅಂತಹ ಯಾವ ಪ್ರಯತ್ನವೂ ಯಶಸ್ವಿಯಾಗುವುದಿಲ್ಲ. ಇಂತಹ ಸುದ್ದಿಗಳನ್ನು ಕೇಳಿ ನಾವಿಬ್ಬರು ನಕ್ಕು ಸುಮ್ಮನಾಗುತ್ತೇವೆ.

ರಮೇಶ್ ಜಾರಕಿಹೊಳಿ ಮಾತ್ರವಲ್ಲ ಅವರ ಇಡೀ ಕುಟುಂಬ ಹಲವಾರು ವರ್ಷಗಳಿಂದ ನನಗೆ ಗೊತ್ತು. ರಮೇಶ್ ಅಪ್ಪಟ ಕಾಂಗ್ರೆಸ್ಸಿಗ. ಅವರು ಪಕ್ಷ ಬಿಟ್ಟು ಹೋಗುವುದಿಲ್ಲ. ಬಿಜೆಪಿ ಪ್ರಯತ್ನ ಯಶಸ್ವಿಯಾಗುವುದೂ ಇಲ್ಲ. ಶಾಸಕ ಉಮೇಶ್ ಕತ್ತಿಯವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು. ಅವರ ಅಧ್ಯಕ್ಷರಾದ ಯಡಿಯೂರಪ್ಪ ಅವರೇ ಕತ್ತಿಯವರಿಗೆ ಬುದ್ಧಿ ಹೇಳಿದ್ದಾರೆ. ಸರ್ಕಾರ ಪತನದ ಕನಸು ಕೈಬಿಟ್ಟು, ಮೊದಲು ಅವರೊಳಗಿನ ಭಿನ್ನಾಭಿಪ್ರಾಯವನ್ನು ಸರಿಮಾಡಿಕೊಳ್ಳಲಿ.

ರಾಜ್ಯದಲ್ಲಿರುವ ನಿಜವಾದ ಅತೃಪ್ತ ಆತ್ಮಗಳೆಂದರೆ ಅಧಿಕಾರವಿಲ್ಲದೆ ಹತಾಶರಾಗಿರುವ ಯಡಿಯೂರಪ್ಪ ಹಾಗೂ ಉಮೇಶ್ ಕತ್ತಿ, ಈಶ್ವರಪ್ಪ ಮೊದಲಾದವರು. ಈ ಅತೃಪ್ತಿ, ಹತಾಶೆಗಳಿಂದಲೇ ಇವರೆಲ್ಲಾ ಇತರರ ವಿರುದ್ಧ ಆರೋಪ ಮಾಡುತ್ತಿದ್ದಾರೆಂದಿದ್ದಾರೆ.

Comments are closed.