ಕರ್ನಾಟಕ

ಸಚಿವ ಸ್ಥಾನದಿಂದ ರಮೇಶ್​ ಜಾರಕಿಹೊಳಿಯ ಕೈ ಬಿಟ್ಟಿದ್ದಕ್ಕೆ ಬೇಸರ; ಲಕ್ಷ್ಮೀ ಹೆಬ್ಬಾಳ್ಕರ್​

Pinterest LinkedIn Tumblr


ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ಮಾಡುವ ಮೂಲಕ ಇಬ್ಬರು ಸಚಿವರನ್ನು ಕೈ ಬಿಟ್ಟಿರುವ ಕಾಂಗ್ರೆಸ್​ ಕ್ರಮಕ್ಕೆ ನಾವು ತಲೆ ಬಾಗಬೇಕು. ಆದರೆ ರಮೇಶ್​ ಜಾರಕಿಹೊಳಿಯವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದಕ್ಕೆ ಬೇಸರವಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಪ್ರತಿಕ್ರಿಯಿಸಿದ್ದಾರೆ.

ಬೇರೆಯವರಿಗೆ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಸಂತೋಷವಿದೆ. ಆದರೆ, ಇಷ್ಟು ಬೇಗ ಸಂಪುಟದಿಂದ ರಮೇಶ್​ ಜಾರಕಿಹೊಳಿ ಸರ್ ಅವರನ್ನು​ ಕೈ ಬಿಡಬಾರದಾಗಿತ್ತು. ಅವರನ್ನು ಮಂತ್ರಿ ಪದವಿಯಿಂದ ಕೈ ಬಿಟ್ಟ ಕ್ರಮ ಸರಿ ಅಲ್ಲ. ಐದು ಬಾರಿ ಶಾಸಕರಾಗಿ ಆಯ್ಕೆಯಾದ ಅವರು ಪ್ರಭಾವಿ ನಾಯಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ತೆಗೆದುಹಾಕಿದ್ದಕ್ಕೆ ದುಃಖವಿದೆ ಎಂದರು.

ಸಚಿವ ಸ್ಥಾನಕ್ಕೆ ತಾವು ಕೂಡ ಪ್ರಬಲ ಆಕಾಂಕ್ಷಿ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಯಾವುತ್ತು ಮಂತ್ರಿಗಿರಿಯ ಆಕಾಂಕ್ಷಿಯಾಗಿರಲಿಲ್ಲ. ಹೈ ಕಮಾಂಡ್​ ನಿರ್ಧಾರವನ್ನು ಪಾಲಿಸುವವಳು ನಾನು. ಅವರು ಮಂತ್ರಿಗಿರಿ ಸ್ಥಾನಕೊಟ್ಟರು, ಕೊಡದಿದ್ದರು ನಾನು ಪಕ್ಷದ ನಿಷ್ಠಾವಂತೆ ಕಾರ್ಯಕರ್ತೆ. ಸಮ್ಮಿಶ್ರ ಸರ್ಕಾರವಿರುವುದರಿಂದ ಎಲ್ಲ ಶಾಸಕರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಪಕ್ಷಕ್ಕೆ ಇರುವ ಇತಿಮಿತಿಯಲ್ಲಿ ಎಲ್ಲರನ್ನು ಸಮಾಧಾನಪಡಿಸುವ ಕಾರ್ಯ ನಡೆಸಿದೆ. ಹೈ ಕಮಾಂಡ್​ ನಿರ್ಧಾರಕ್ಕೆ ತಲೆ ಬಾಗಬೇಕಿದೆ ಎಂದರು.

ಅತೃಪ್ತರಿಂದ ಯಾವುದೇ ಬಂಡಾಯ ವ್ಯಕ್ತವಾಗಿಲ್ಲ. ಸರ್ಕಾರ ಸುಭದ್ರವಾಗಿದೆ. ಪಕ್ಷದಲ್ಲಿ ಯಾರು ಅತೃಪ್ತರಿಲ್ಲ. ಹಾಗೇನಾದರೂ ಬಿಜೆಪಿ ನಾಯಕರು ಬಂಡಾಯ ಶಾಸಕರ ಸಂಪರ್ಕಕ್ಕೆ ಮುಂದಾದರೆ, ನಾವು ಬಿಜೆಪಿ ಶಾಸಕರ ಸಂಪರ್ಕಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಈ ಹಿಂದೆ ರಮೇಶ್​ ಜಾರಕಿಹೊಳಿ ಪಿಎಲ್​ಡಿ ಬ್ಯಾಂಕ್​ ವಿಚಾರದಲ್ಲಿ ರಮೇಶ್​ ಜಾರಕಿಹೊಳಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹೈಕಮಾಂಡ್​ ಮಟ್ಟದಲ್ಲಿ ದೂರು ಸಲ್ಲಿಸಿದ್ದರು. ಲಕ್ಷ್ಮೀ ಹೆಬ್ಬಾಳ್ಕರ್​ ಪರ ಡಿಕೆ ಶಿವಕುಮಾರ್​ ಬೆಂಬಲ ವ್ಯಕ್ತಪಡಿಸಿದ ಹಿನ್ನಲೆ ರಮೇಶ್​ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೂಡ ಮುಂದಾಗಿದ್ದರು.

ಈಗ ರಮೇಶ್​ ಜಾರಕಿಹೊಳಿ ಸಚಿವ ಸ್ಥಾನ ಕೈತಪ್ಪಿದ ಹಿನ್ನಲೆ ಲಕ್ಷ್ಮೀ ಹೆಬ್ಬಾಳ್ಕರ್​ ಬೇಸರ ವ್ಯಕ್ತಪಡಿಸಿರುವುದು ಗಮನ ಸೆಳೆದಿದೆ.

Comments are closed.