ಕರ್ನಾಟಕ

ಗರ್ಲ್‌ಫ್ರೆಂಡ್‌ಗಳಿಗೆ ಹೋಲಿಕೆ: ಪತಿ ವಿರುದ್ಧ ಪತ್ನಿ ದೂರು

Pinterest LinkedIn Tumblr


ಬೆಂಗಳೂರು : ಪದೇ ಪದೆ ತನ್ನ ಗರ್ಲ್‌ಫ್ರೆಂಡ್‌ಗಳಿಗೆ ತನ್ನನ್ನು ಹೋಲಿಕೆ ಮಾಡಿ ಅವರಂತೆ ಬಟ್ಟೆ ಹಾಕು, ಅವರಂತೆ ಬೋಲ್ಡ್‌ ಆಗಿರು ಅಂತೆಲ್ಲಾ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಪತಿ ವಿರುದ್ಧ ಮಹಿಳಾ ಠಾಣೆಗೆ ದೂರು ದಾಖಲಿಸಿದ್ದಾರೆ.

”ನಿನಗೆ ಮಕ್ಕಳು ಬೇಕಿದ್ದರೆ ಬೇರೆ ಗಂಡಿನ ಜತೆಗೆ ಹೋಗು, ಇಲ್ಲದಿದ್ದರೆ ನನಗೆ ಡೈವೋರ್ಸ್‌ ನೀಡಿ ಆನಂತರ ನನ್ನ ಬಳಿ ಬಾ ಎಂದು ಅವಮಾನಿಸಿ ಟೀಕಿಸುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನನ್ನಿಂದ ವಿಚ್ಛೇದನ ಪಡೆದು ಅವರ ಮಾಜಿ ಪ್ರೇಯಸಿಯ ಜತೆ ಹೋಗುವುದಕ್ಕಾಗಿಯೇ ನನಗೆ ಕಿರುಕುಳ ನೀಡುತ್ತಿದ್ದಾರೆ”ಎಂದು 30 ವರ್ಷದ ಪತಿ ವಿರುದ್ಧ ಮಹಿಳೆ ಬಾಣಸವಾಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ತುಮಕೂರು ರಸ್ತೆಯಲ್ಲಿ ಪೋಷಕರ ಜತೆ ನೆಲೆಸಿರುವ ಮಹಿಳೆ 2014 ರಲ್ಲಿ ವಿವಾಹವಾಗಿದ್ದರು. ವಿವಾಹದ ಮರು ದಿನವೇ ಪತಿಯ ಮಾಜಿ ಪ್ರೇಯಸಿ ಸೀದಾ ಮನೆಗೆ ಬಂದು ಆಕೆಯನ್ನೂ ಮದುವೆ ಆಗುವಂತೆ ಪತಿಯ ಬಳಿ ಹಠ ಹಿಡಿದಿದ್ದರು. ನಂತರ ಆಕೆಗೆ 3.5 ಲಕ್ಷ ರೂ ಕೊಟ್ಟು ಬಾಯಿ ಮುಚ್ಚಿಸಿ ವಿಷಯ ತಣ್ಣಗಾಗಿಸಲಾಗಿತ್ತು. ಕೆಲ ದಿನಗಳ ನಂತರ ಪತಿ ದುಬೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರಿಂದ ದಂಪತಿ ಅಲ್ಲಿಗೇ ಶಿಫ್ಟ್‌ ಆಗಿದ್ದರು. ದುಬೈಗೆ ತೆರಳಿದ ಮೇಲಾದರೂ ಹಳೆ ಘಟನೆಗಳನ್ನು ಕರೆತು ಹೊಸ ಜೀವನ ಕಟ್ಟಿಕೊಳ್ಳಲು ಸಾಧ್ಯ ಎನ್ನುವುದು ಪತ್ನಿಯ ಕನಸಾಗಿತ್ತು. ಆದರೆ, ದುಬೈಗೆ ತೆರಳಿದ ಬಳಿಕವೂ ಪದೇಪದೆ ಮಾಜಿ ಪ್ರೇಯಸಿಯನ್ನು ನೆನಪಿಸಿಕೊಳ್ಳುತ್ತಿದ್ದ ಪತಿ, ಪ್ರತಿಯೊಂದು ವಿಚಾರಕ್ಕೂ ತನಗೂ ಆಕೆಗೂ ಹೋಲಿಕೆ ಮಾಡುವ ಚಟ ಮುಂದುವರಿಸಿದರು. ದುಬೈನ ಈಜುಕೊಳಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಮಹಿಳೆಯರ ರೀತಿ ಉಡುಪು ಧರಿಸುವಂತೆ ತಾಕೀತು ಮಾಡುತ್ತಿದ್ದರು. ಕಳೆದ 2 ವರ್ಷಗಳಿಂದ ತನ್ನ ಜತೆ ದೈಹಿಕ ಸಂಪರ್ಕವನ್ನೇ ಇಟ್ಟುಕೊಳ್ಳದ ಪತಿ ಪಾರ್ಟಿಗಳಲ್ಲಿ ಎಲ್ಲರೊಟ್ಟಿಗೆ ಬೆರೆಯುವಂತೆ ಒತ್ತಡ ಹೇರುತ್ತಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.

”ದುಬೈನ ಸ್ನೇಹಿತರ ಜತೆಗೇ ಹೆಚ್ಚಿನ ಸಮಯ ಕಳೆಯುತ್ತಿದ್ದ ಪತಿ, ಮನೆ ಬದಲಾಯಿಸುವ ನೆಪದಲ್ಲಿ ನನ್ನನ್ನು ಬೆಂಗಳೂರಿನ ತಾಯಿ ಮನೆಗೆ ವಾಪಸ್‌ ಕಳುಹಿಸಿದರು. ಆನಂತರ ಮತ್ತೆ ನನ್ನನ್ನು ಕರೆಸಿಕೊಳ್ಳಲೇ ಇಲ್ಲ. ಇತ್ತೀಚಿಗೆ ಬೆಂಗಳೂರಿಗೆ ಬಂದಿದ್ದಾಗಲೂ ವಿಚ್ಛೇದನ ನೀಡುವಂತೆ ಹಿಂಸಿಸಿದ್ದಾರೆ ”ಎಂದು ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments are closed.