ಕರ್ನಾಟಕ

ವಿಷಪ್ರಸಾದ ಪ್ರಕರಣ: ವಿಷ ಬೆರೆಸಲು ಹೇಳಿದ್ದೇ ಇಮ್ಮಡಿ ಸ್ವಾಮೀಜಿ

Pinterest LinkedIn Tumblr


ಚಾಮರಾಜನಗರ: ರಾಜ್ಯವನ್ನೇ ಬೆಚ್ಚಿಬೀಳಿಸಿದ “ವಿಷಪ್ರಸಾದ’ ಪ್ರಕರಣ ಅಂತೂ ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬಂದುನಿಂತಿದೆ. ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್‌ಗುತ್‌ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ನಾಲ್ವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ದೇವಾಲಯದ ಟ್ರಸ್ಟ್‌ ಅಧ್ಯಕ್ಷ, ಮಹದೇಶ್ವರ ಬೆಟ್ಟ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿಯೇ ಪ್ರಕರಣದ ಕಿಂಗ್‌ಪಿನ್‌ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ.

ಇಮ್ಮಡಿ ಮಹದೇವಸ್ವಾಮಿ (52), ಮಾರ್ಟಳ್ಳಿ ಗ್ರಾಮದ ಅಂಬಿಕಾ (35), ಟ್ರಸ್ಟ್‌ನ ವ್ಯವಸ್ಥಾಪಕ ಮಾರ್ಟಳ್ಳಿ ಮಾದೇಶ (ಅಂಬಿಕಾಳ ಪತಿ /46), ಸುಳ್ವಾಡಿ ಗ್ರಾಮದ ನಾಗರ ಕಲ್ಲಿನ ಅರ್ಚಕ ದೊಡ್ಡಯ್ಯ ತಂಬಡಿ (35) ಪ್ರಮುಖ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ಜಿಲ್ಲಾ ನ್ಯಾಯಾಧೀಶರ ಮುಂದೆ ಒಪ್ಪಿಸಿ, ಹೆಚ್ಚಿನ ತನಿಖೆಗಾಗಿ ಡಿ.22ರ ತನಕ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ.

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬುಧವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಲಯ ಐಜಿಪಿ ಶರತ್‌ಚಂದ್ರ ಮಾತನಾಡಿ, ಡಿ. 14ರಂದು ಜಿಲ್ಲೆಯ ರಾಮಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಸುಳ್ವಾಡಿ ಕಿಚ್‌ಗುತ್‌ ಮಾರಮ್ಮ ದೇವಸ್ಥಾನದಲ್ಲಿ ರಾಜಗೋಪುರ ನಿರ್ಮಾಣ ಮಾಡಲು ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗೆ ರೈಸ್‌ಬಾತ್‌ ತಿಂಡಿ ವ್ಯವಸ್ಥೆಯನ್ನು ಟ್ರಸ್ಟ್‌ನಿಂದ ಮಾಡಲಾಗಿತ್ತು. ಇದನ್ನು ತಿಂದ 15 ಮಂದಿ ಮೃತಪಟ್ಟು 100ಕ್ಕೂ ಹೆಚ್ಚು ಭಕ್ತಾದಿಗಳು ಅಸ್ವಸ್ಥಗೊಂಡಿದ್ದಾರೆ. ಇದೊಂದು ಘೋರ ಪ್ರಕರಣವಾಗಿದ್ದು, ದೇವಾಲಯದ ಟ್ರಸ್ಟ್‌ ಹಾಗೂ ಅಡುಗೆಯವರ ವಿರುದ್ಧ ರಾಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು.

ವಿಷ ಬೆರೆಸಿದ್ದೇಕೆ?:
ಕಿಚ್‌ಗುತ್‌ ಮಾರಮ್ಮ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಹಾಗೂ ಇನ್ನಿತರ ಟ್ರಸ್ಟಿಗಳಾದ ನೀಲಕಂಠ ಶಿವಾಚಾರಿ, ಶಶಿಬಿಂಬ, ಚಿನ್ನಪ್ಪಿ ಮತ್ತಿತರರ ನಡುವೆ ಹಣಕಾಸು ವ್ಯವಹಾರದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದವು. ಇಮ್ಮಡಿ ಮಹದೇವಸ್ವಾಮಿ ವಿರೋಧದ ನಡುವೆಯೂ ಚಿನ್ನಪ್ಪಿ ಮತ್ತು ಇತರ ಟ್ರಸ್ಟಿಗಳಿಂದ ದೇವಸ್ಥಾನದ ಟ್ರಸ್ಟ್‌ ನೋಂದಣಿ ಮಾಡಲಾಗಿತ್ತು. ಇದರಿಂದ ಟ್ರಸ್ಟಿನ ಹಣಕಾಸು ವ್ಯವಹಾರದ ಮೇಲೆ ಮಹದೇವಸ್ವಾಮಿ ಹಿಡಿತ ತಪ್ಪಿತ್ತು. ಚಿನ್ನಪ್ಪಿ ಹಾಗೂ ಆತನ ಬೆಂಬಲಿತ ಟ್ರಸ್ಟಿಗಳ ಹಿಡಿತ ಟ್ರಸ್ಟ್‌ನ ಮೇಲೆ ಹೆಚ್ಚಾಗುತ್ತಿದ್ದುದು ಇಮ್ಮಡಿ ಮಹದೇವಸ್ವಾಮಿ ಮತ್ತು ಆತನ ಹಿಂಬಾಲಕರು ಸಹಿಸಿಕೊಳ್ಳದ ಸ್ಥಿತಿಗೆ ತಲುಪಿದ್ದರು. ಟ್ರಸ್ಟಿನಲ್ಲಿ ಇಮ್ಮಡಿ ಮಹದೇವಸ್ವಾಮಿ ಪರವಾದ ಒಂದು ಗುಂಪು ಹಾಗೂ ಚಿನ್ನಪ್ಪಿ ಪರವಾದ ಇನ್ನೊಂದು ಗುಂಪುಗಳಾಗಿ ತೀವ್ರ ವೈಮನಸ್ಸಿಗೆ ಕಾರಣವಾಗಿತ್ತು ಎಂದು ಮಾಹಿತಿ ನೀಡಿದರು.

ಗೋಪುರಕ್ಕಾಗಿ ಅತೃಪ್ತಿ ಸ್ಫೋಟ:
ದೇವಸ್ಥಾನಕ್ಕೆ ರಾಜಗೋಪುರ ನಿರ್ಮಿಸುವ ವಿಚಾರವಾಗಿ ಎರಡೂ ಬಣಗಳಿಗೂ ಭಿನ್ನಾಭಿಪ್ರಾಯಗಳಿದ್ದವು. ಚಿನ್ನಪ್ಪಿ ನೇತೃತ್ವದ ಟ್ರಸ್ಟ್‌ನ ಸದಸ್ಯರು ಇಮ್ಮಡಿ ಮಹದೇವಸ್ವಾಮಿ ಮತ್ತು ಆತನ ತಂಡವನ್ನು ಕಡೆಗಣಿಸಿ ತಾವೇ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ಸಿದ್ಧತೆ ನಡೆಸಿದರು. ಇದರಿಂದ ಕೋಪಗೊಂಡ ಇಮ್ಮಡಿ ಮಹದೇವಸ್ವಾಮಿ ತನ್ನ ವಿರೋಧಿ ಚಿನ್ನಪ್ಪಿ ಬಣದವರಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ ಇವರನ್ನೆಲ್ಲಾ ಕ್ರಿಮಿನಲ್‌ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದ. ಟ್ರಸ್ಟ್‌ ಮತ್ತು ಇದರ ಹಣಕಾಸು ವ್ಯವಹಾರದಲ್ಲಿ ಸಂಪೂರ್ಣ ಹಿಡಿತ ಸಾಧಿಸುವುದರ ಜೊತೆ ಗೋಪುರ ನಿರ್ಮಾಣದ ಜವಾಬ್ದಾರಿ ಮತ್ತೆ ಪಡೆದುಕೊಳ್ಳುವುದೇ ಉದ್ದೇಶವಾಗಿತ್ತು ಎಂದು ಐಜಿಪಿ ವಿವರಿಸಿದರು.

ರೈಸ್‌ಬಾತ್‌ ವಿಷವಾಗಿದ್ದು ಹೇಗೆ?
ಅಂಬಿಕಾ ತಮ್ಮ ಸಂಬಂಧಿಯಾದ ಕೃಷಿ ಅಧಿಕಾರಿಯೊಬ್ಬರಿಂದ ಕೈತೋಟದಲ್ಲಿರುವ ಗಿಡಗಳಿಗೆ ಯಾವುದೋ ರೋಗ ಬಂದಿದೆ ಎಂದು ಸುಳ್ಳು ಹೇಳಿ ಎರಡು ಬಾಟಲಿ ಮೊನೊಕ್ರೋಟೋಫಾಸ್‌ ಕ್ರಿಮಿನಾಶಕ ತರಿಸಿಕೊಂಡಿದ್ದಳು. ತನ್ನ ಬಣಕ್ಕೆ ಸೇರಿದ ನಾಗರಕಲ್ಲಿನ ಅರ್ಚಕ ದೊಡ್ಡಯ್ಯ ತಂಬಡಿಯನ್ನು ಕರೆದು ರಾಜಗೋಪುರ ಶಂಕುಸ್ಥಾಪನೆ ದಿನ ರೈಸ್‌ಬಾತ್‌ನಲ್ಲಿ ಬೆರೆಸುವಂತೆ ಸೂಚಿಸಿದ್ದಳು. ಅಲ್ಲದೆ, ಆತನ ಪತಿ ಮಾದೇಶ್‌ ಸಹ ಇದಕ್ಕೆ ನೆರವು ನೀಡುವುದಾಗಿ ತಿಳಿಸಿದ್ದ. 14ರಂದು ಅನ್ನಸಂತರ್ಪಣೆಗಾಗಿ ರೈಸ್‌ಬಾತ್‌ ತಯಾರಿಸುವಾಗ, ಅಡುಗೆಯವರನ್ನು ಬೇರೆ ಕೆಲಸಕ್ಕೆಂದು ಕಳುಹಿಸಿ ವಿಷ ಬೆರೆಸಿದ್ದಾರೆ. ಪ್ರಸಾದ ತಿಂದ ಕೆಲ ಭಕ್ತರು ಏನೋ ವಾಸನೆ ಬರುತ್ತಿದೆ ಎಂದಾಗ, ಪಚ್ಚ ಕರ್ಪೂರ ಹಾಕಲಾಗಿದೆ. ಇದು ಅದರ ಪರಿಮಳ, ಏನಿಲ್ಲ ತಿನ್ನಿ ಎಂದು ಮಾದೇಶ ಹೇಳಿದ್ದಾನೆ. ಟ್ರಸ್ಟ್‌ನ ಪದಾಧಿಕಾರಿಗಳು ಮಾತ್ರ ತಮ್ಮ ಮನೆಯಿಂದಲೇ ತಿಂಡಿ ತಂದು ತಿಂದಿದ್ದರು ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಐಜಿಪಿ ತಿಳಿಸಿದರು. ಕೃಷಿ ಅಧಿಕಾರಿಯ ಜೀವಕ್ಕೆ ತೊಂದರೆಯಾಗಬಹುದೆಂಬ ಕಾರಣದಿಂದ ಅವರ ಹೆಸರು ಬಹಿರಂಗಪಡಿಸಲಾಗದು ಎಂದು ಐಜಿಪಿ ಶರತ್‌ ಚಂದ್ರ ಹೇಳಿದ್ದಾರೆ.

ಕ್ರಿಮಿನಾಶಕ ತಂದಿದ್ದು ಅಂಬಿಕಾ:
ಇಮ್ಮಡಿ ಮಹದೇವಸ್ವಾಮಿಯ ಬೆಂಬಲಿಗನಾದ ವ್ಯವಸ್ಥಾಪಕ ಮಾದೇಶ ಹಾಗೂ ಆತನ ಹೆಂಡತಿ ಅಂಬಿಕಾ ತನ್ನ ಸಂಬಂಧಿಯಾದ ಕೃಷಿ ಅಧಿಕಾರಿಯಿಂದ ಸುಳ್ಳು ಕಾರಣ ನೀಡಿ ಎರಡು ಮೊನೊಕ್ರೋಟೋಫಾಸ್‌ ಎಂಬ ಕ್ರಿಮಿನಾಶಕ ಬಾಟಲ್‌ಗ‌ಳನ್ನು ಪಡೆದಿದ್ದಳು. ಡಿ. 14ರಂದು ರೈಸ್‌ಬಾತ್‌ಗೆ ಬೆರೆಸುವಂತೆ, ದೊಡ್ಡಯ್ಯ ತಂಬಡಿಗೆಗೆ ನೀಡಿದ್ದಳು. ಅಡುಗೆಯವರಿಗೆ ಗೊತ್ತಾಗದಂತೆ ದೊಡ್ಡಯ್ಯ ಹಾಗೂ ಮಾದೇಶ ಸಮಯ ಸಾಧಿಸಿ ರೈಸ್‌ಬಾತ್‌ನಲ್ಲಿ ಬೆರೆಸಿದ್ದರು. ಇದನ್ನು ಅರಿಯದ ಅಡುಗೆಯವರು ಪೂಜಾ ಕಾರ್ಯಕ್ರಮದ ಬಳಿಕ ಭಕ್ತರಿಗೆ ರೈಸ್‌ಬಾತ್‌ ಅನ್ನು ವಿತರಿಸಿದ್ದಾರೆ ಎಂದು ಐಜಿಪಿ ಪ್ರಕರಣದ ಬಗ್ಗೆ ವಿವರಿಸಿದರು.

Comments are closed.