ಬೆಂಗಳೂರು: ಸಾಲು ಸಾಲು ಉದ್ಯಮಿಗಳು ದೇಶ ತೊರೆದ ನಂತರ ಈಗ ಸನ್ಯಾಸಿಯ ಸರದಿ ಬಂದಿದೆ. ವಿವಾದಾತ್ಮಕ ‘ದೇವಮಾನವ’ ಸ್ವಾಮಿ ನಿತ್ಯಾನಂದ ದೇಶ ತೊರೆದಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಮದ್ಯ ದೊರೆ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಬಳಿಕ ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂಬ ಮಾತುಗಳು ಉನ್ನತ ಮೂಲಗಳಿಂದ ಕೇಳಿ ಬರುತ್ತಿದೆ.
ನಿತ್ಯಾನಂದ ಕಳೆದ ಸೆಪ್ಟೆಂಬರ್ನಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ದೇಶದಲ್ಲಿ ಎಲ್ಲಿಯೂ ಕಾಣಸಿಕೊಂಡಿಲ್ಲ ಎನ್ನಲಾಗಿದೆ. ತನ್ನ ಮೇಲಿನ ಕೋರ್ಟ್ ಕೇಸ್ಗಳಿಗೆ ಹೆದರಿ ಪಲಾಯನ ಮಾಡಿದ್ದಾರೆ ಎಂಬ ಅನುಮಾನ ಮೂಲಗಳಿಂದ ವ್ಯಕ್ತವಾಗಿದೆ. ಅತ್ಯಾಚಾರದ ಆರೋಪ ಹೊತ್ತು ಜೈಲು ಪಾಲಾಗಿದ್ದ ಈತನ ವಿರುದ್ದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ನಿತ್ಯಾನಂದ ಓಡಿ ಹೋಗಿದ್ದಾರೆ ಎಂದು ತನಿಖಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಕಳೆದ 3 ತಿಂಗಳಿಂದ ಕಾಣೆ:
ಕಳೆದ 3 ತಿಂಗಳಿಂದ ಯಾರ ಕಣ್ಣಿಗೂ ಕಾಣಿಸಿಲ್ಲ, ಬಿಡದಿ ಮಠದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ವಾರಣಾಸಿಯಲ್ಲಿ ಚಾತುರ್ಮಾಸದ ಪರಿಕ್ರಮದಲ್ಲಿ ಇದ್ದಾರೆ ಎಂದು ಆಶ್ರಮದ ಸನ್ಯಾಸಿಗಳು ಹೇಳುತ್ತಿದ್ದಾರೆ. ಆದರೆ ಅಲ್ಲಿಯೂ ಇಲ್ಲ ಎಂಬುದು ಪೊಲೀಸರ ಅನುಮಾನ. ಸಿಐಡಿ ಅಧಿಕಾರಿಗಳಿಗೂ ಈ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ರಾಮನಗರ ಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆಗೂ ಹಾಜರಾಗುತ್ತಿಲ್ಲ. ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾಗಿದ್ದರೂ ನಿತ್ಯಾನಂದನಿಗೆ ವಾರೆಂಟ್ ಜಾರಿ ಮಾಡಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಎಷ್ಟೇ ಹುಡುಕಾಟ ನಡೆಸಿದರೂ ನಿತ್ಯಾನಂದ ಸಿಕ್ಕಿಲ್ಲ. ಬಂಧನ ವಾರೆಂಟ್ ಪ್ರಶ್ನಿಸಿ ಆತನ ಪರ ವಕೀಲರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 3 ತಿಂಗಳಿಂದ ವಾದ ಪ್ರತಿವಾದ ನಡೆದು ಆದೇಶ ಕಾಯ್ದಿರಿಸಿದೆ. ಹೈಕೋರ್ಟ್ ಆದೇಶ ಬರುವ ಮುನ್ನವೇ ನಿತ್ಯಾನಂದ ದೇಶ ಬಿಟ್ಟು ಓಡಿ ಹೋಗಿದ್ದಾರೆ ಎನ್ನಲಾಗಿದೆ.
ನೇಪಾಳ ಮಾರ್ಗವಾಗಿ ಪಲಾಯನ:
ನಿತ್ಯಾನಂದ ದೇಶದ ಯಾವುದೇ ಏರ್ಪೋರ್ಟ್ನಿಂದ ದೇಶ ಬಿಟ್ಟು ಹೋಗಿರುವ ಬಗ್ಗೆ ಸಾಕ್ಷಿಗಳು ಇಲ್ಲ. ಏಕೆಂದರೆ ಆತನ ಪಾಸ್ಪೋರ್ಟ್ ಅವಧಿ ಕಳೆದ 3 ತಿಂಗಳ ಹಿಂದೆಯೇ ಮುಗಿದು ಹೋಗಿದೆ ಎಂದು ವಿದೇಶಾಂಗ ಇಲಾಖೆ ಖಚಿತಪಡಿಸಿದೆ. ಹೀಗಾಗಿ ಆತ ವಿಮಾನದ ಮೂಲಕ ಹೋಗಲು ಸಾಧ್ಯವಿಲ್ಲ. ಭಾರತದಿಂದ ನೇಪಾಳಕ್ಕೆ ರಸ್ತೆ ಮಾರ್ಗವಾಗಿ ಹೋಗಿ, ಅಲ್ಲಿಂದ ಬೇರೆ ಕಡೆಗೆ ಹಾರಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.
ದ್ವೀಪದಲ್ಲಿರುವ ಶಂಕೆ:
ಬಲ್ಲ ಮೂಲಗಳ ಪ್ರಕಾರ ನೀರವ್ ಮೋದಿಯಂತೆಯೇ ನಿತ್ಯಾನಂದ ಕೂಡ ಐಷಾರಾಮಿ ದ್ವೀಪದಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಕೆರೆಬಿಯನ್ ದ್ವೀಪ ಸಮೂಹದಲ್ಲಿ ದೊಡ್ಡ ಮೊತ್ತದ ಹಣ ನೀಡಿದರೆ ಅಲ್ಲಿನ ಪೌರತ್ವ ಸಿಗುತ್ತದೆ. ಹೀಗಾಗಿ ಕೆಮ್ಯಾನ್ ಐಲ್ಯಾಂಡ್ನಲ್ಲಿ ಆಶ್ರಯ ಪಡೆದು ಅಲ್ಲಿಂದಲೇ ಆನ್ಲೈನ್ನಲ್ಲಿ ಧರ್ಮೋಪದೇಶ ಮಾಡುತ್ತಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿವೆ.
Comments are closed.