ರಾಷ್ಟ್ರೀಯ

ಬಿಹಾರ, ಉ.ಪ್ರ ವಲಸಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಿಎಂ ಕಮಲನಾಥ್​​

Pinterest LinkedIn Tumblr


ನವದೆಹಲಿ: ಮಧ್ಯಪ್ರದೇಶದ ನೂತನ ಸಿಎಂ ಕಮಲನಾಥ್​ ಅವರು ಬಿಹಾರ ಮತ್ತು ಉತ್ತರ ಪ್ರದೇಶ ಮೂಲದ ವಲಸಿಗರ ಬಗ್ಗೆ ನೀಡಿರುವ ಹೇಳಿಕೆ ಭಾರೀ ವಿವಾದಕ್ಕೀಡಾಗಿದೆ. ಕಮಲ್​​ ನಾಥ್​ರ ಹೇಳಿಕೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಜೊತೆಗೆ ಮೈತ್ರಿಯಾಗಬೇಕೆಂದಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​​ ಯಾದವರ ಕಣ್ಣನ್ನು ಕೆಂಪಾಗಿಸಿದೆ. ಹೀಗಾಗಿ ಸಿಎಂ ಕಮಲ ನಾಥ್ ವಿರುದ್ಧ ಮಾಜಿ ಸಿಎಂ ಅಖಿಲೇಶ್​​ ಯಾದವ್​​ ಕೆಂಡಮಂಡಲರಾಗಿದ್ದಾರೆ.

ಸ್ಥಳೀಯರು ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳಲು ಇತರ ರಾಜ್ಯಗಳ ‘ಹೊರಗಿನವರು’ ಕಾರಣ ಎಂದಿದ್ದರು. ಅಲ್ಲದೇ ನಮ್ಮಲಿನ ಕಂಪನಿಗಳು ಸ್ಥಳೀಯರಿಗೆ ಆದ್ಯತೆ ನೀಡುತ್ತಿಲ್ಲ. ಬದಲಿಗೆ ಬಿಹಾರ ಹಾಗೂ ಉತ್ತರಪ್ರದೇಶ ಮೂಲದ ವಲಸಿಗರಿಗೆ ಕೆಲಸ ಕೊಡುತ್ತಿದ್ದಾರೆ. ಇದರ ಪರಿಣಾಮ ನಮ್ಮ ಮಧ್ಯಪ್ರದೇಶದಲ್ಲಿಯೇ ನಮಗೆ ಕೆಸಲ ಸಿಗದಂತಾಗಿದೆ. ಹೀಗಾಗಿ ಸ್ಥಳೀಯ ಕಂಪನಿಗಳಲ್ಲಿ ಶೇ.70 ರಷ್ಟು ಮೀಸಲಾತಿ ಸ್ಥಳೀಯರಿಗೆ ನೀಡಬೇಕೆಂದು ಆದೇಶ ಹೊರಡಿಸುತ್ತೇನೆ ಎಂದು ಕಮಲನಾಥ್​ ಹೇಳಿಕೆ ನೀಡಿದ್ದರು.

ಕಮಲನಾಥ್ ಅವರ ಈ ವಿವಾದಾತ್ಮಕ​ ಹೇಳಿಕೆಗೆ ಪ್ರತಿಕ್ರಿಯಿಸಿದ ಅಖಿಲೇಶ್​ ಯಾದವ್​, ಈ ರೀತಿ ಮಾತನಾಡುವುದು ಸರಿಯಲ್ಲ. ಉತ್ತರ ಭಾರತೀಯರಿಂದ ನಮಗೆ ಕೆಲಸ ಸಿಗುತ್ತಿಲ್ಲ ಎಂಬ ಮಾತುಗಳು ಕೇವಲ ಮಹರಾಷ್ಟ್ರ ಮತ್ತು ದೆಹಲಿಯಿಂದ ಕೇಳಿ ಬರುತ್ತಿದ್ದವು. ಈಗ ನೀವು ಕೂಡ ಇದೇ ಮಾತನ್ನು ಹೇಳುತ್ತಿದ್ದೀರಿ. ಒಂದು ವೇಳೆ ಉತ್ತರ ಭಾರತದವರು ಬೆಂಬಲ ನೀಡದೆ, ಹೋದಲ್ಲಿ ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಪ್ರಶ್ನಿಸಿದರು.

ಅಖಿಲೇಶ್​​ ಯಾದವ್​​ ಹಾಗೆಯೇ ಬಿಜೆಪಿ ನೇತಾರ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಅವರು ಕೂಡ ಕಾಂಗ್ರೆಸ್​ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಮಲ ನಾಥ್​ ಅವರು ಕೂಡಲೇ ತಮ್ಮ ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕು. ಅಂತಹ ಅಪ್ರಬುದ್ಧ ನಾಯಕರನ್ನು ಮುಖ್ಯಮಂತ್ರಿಯನ್ನಾಗಿಸಿದ ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​ ಗಾಂಧಿಯವರು ಕೂಡ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ನಿನ್ನೆಯಷ್ಟೇ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಕಮಲನಾಥ್​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಒಂದೆಡೆ ನೂತನ ಮುಖ್ಯಮಂತ್ರಿಯಾಗಿ ಕಮಲ್​ ನಾಥ್​ ಸಂತಸದಲ್ಲಿದ್ದರೆ, ಇನ್ನೊಂದೆಡೆ ಸಿಖ್​ ಗಲಭೆಯ ಆರೋಪ ಸುತ್ತಿಕೊಂಡಿತ್ತು. ಈ ಆರೋಪವನ್ನು ಬಿಜೆಪಿ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿತ್ತು. ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ಕೂಡ ಬಿಜೆಪಿ ರಾಜಕೀಯ ಅಸ್ತ್ರವಾಗಿದೆ.

Comments are closed.