ಕರ್ನಾಟಕ

ಕೇಬಲ್‌, ಡಿಟಿಎಚ್‌: ಜ.1ರಿಂದ ಹೊಸ ದರ ನೀತಿ ಜಾರಿ, ಚಾನೆಲ್‌ ಆಯ್ಕೆ ಗ್ರಾಹಕರದ್ದು

Pinterest LinkedIn Tumblr


ಬೆಂಗಳೂರು : ಹೊಸವರ್ಷದಿಂದ ನಿಮ್ಮ ಮನೆಯ ಕೇಬಲ್‌, ಡಿಟಿಎಚ್‌ ಮಾಸಿಕ ದರ ಬದಲಾವಣೆಯಾಗಲಿದೆ. ಕೇಂದ್ರ ಸರಕಾರ ಹೊಸ ನೀತಿ ಜಾರಿಗೊಳಿಸಲಿದ್ದು, ಇನ್ನು ಮುಂದೆ ಡಿಟಿಎಚ್‌ ಮತ್ತು ಕೇಬಲ್‌ನಲ್ಲಿ ಚಾನೆಲ್‌ಗಳ ಆಯ್ಕೆ ಗ್ರಾಹಕರದ್ದೇ ಆಗಲಿದೆ. ಎಷ್ಟು ಚಾನೆಲ್‌ ಆಯ್ಕೆ ಮಾಡಿಕೊಳ್ಳೂತ್ತೀರೊ ಅಷ್ಟು ದರ ಪಾವತಿಸಬೇಕಾಗುತ್ತದೆ.ಇದರಿಂದ ಅನಗತ್ಯ ಚಾನೆಲ್‌ಗಳ ಕಿರಿಕಿರಿ ತಪ್ಪಲಿದೆ.

ಡಿ.29ಕ್ಕೆ ಹಳೆಯ ದರ ಅಂತ್ಯವಾಗಲಿದ್ದು, ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಜ.1ರಿಂದ ಜಾರಿಗೆ ಬರುವಂತೆ ದೇಶಾದ್ಯಂತ ಕೇಬಲ್‌ ದರ ಹಾಗೂ ಡಿಟಿಎಚ್‌ ಎರಡಕ್ಕೂ ಹೊಸ ದರ ನಿಗದಿ ಮಾಡಿದೆ.

ಗ್ರಾಹಕರಿಗೆ ಅನಗತ್ಯ ಚಾನೆಲ್‌ ನೀಡುವುದನ್ನು ತಪ್ಪಿಸಲು ಹಾಗೂ ಅಂತಿಮವಾಗಿ ಅವರ ಇಷ್ಟದ ವಾಹಿನಿ ನೋಡಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಹೊಸ ದರ ಜಾರಿಗೊಳಿಸುತ್ತಿದೆ. ಆದರೆ ಇದರಿಂದ ಸಹಜವಾಗಿಯೇ ಈಗ ನೀಡುತ್ತಿರುವ ಕೇಬಲ್‌ ಹಾಗೂ ಡಿಟಿಎಚ್‌ ದರ ಸ್ವಲ್ಪ ಹೆಚ್ಚೂ ಆಗಬಹುದು, ಇಲ್ಲವೇ ಕಡಿಮೆಯೂ ಆಗಬಹುದು.

ಈಗ ಕೇವಲ 300-350ರೂಪಾಯಿಗಳಿಗೆ ಕೇಬಲ್‌ ಆಪರೇಟರ್‌ಗಳು ಎಲ್ಲ ಸುಮಾರು 400 ಚಾನೆಲ್‌ಗಳನ್ನು ನೀಡುತ್ತಿದ್ದಾರೆ. ಆದರೆ ಹೊಸ ದರ ಜಾರಿ ನಂತರ ಸಹಜವಾಗಿಯೇ ದರ ವ್ಯತ್ಯಾಸವಾಗಲಿದ್ದು, ಆ ರೀತಿ ಎಲ್ಲ ಚಾನೆಲ್‌ ಬೇಕೆಂದರೆ ಕನಿಷ್ಠ 500ರಿಂದ ಗರಿಷ್ಠ 1500 ರೂ. ಪಾವತಿಸಬೇಕಾಗುತ್ತದೆ. ಈ ದರ ವ್ಯತ್ಯಯ ಡಿಟಿಎಚ್‌ಗೂ ಅನ್ವಯವಾಗಲಿದೆ.

ಕನಿಷ್ಠ ದರ 130, ಪ್ಲಸ್‌ ಶೇ.18 ತೆರಿಗೆ

ಹೊಸ ದರ ಜಾರಿ ನಂತರ ಸೆಟ್‌ ಟಾಪ್‌ಬಾಕ್ಸ್‌ ಸಂಪರ್ಕ ಹೊಂದಿರುವ ಗ್ರಾಹಕರು ಕನಿಷ್ಠ 130 ರೂ. ಮತ್ತು ಶೇ.18ರಷ್ಟು ಜಿಎಸ್‌ಟಿ ತೆರಿಗೆ ಪಾವತಿಸಿ 100 ಉಚಿತ ಚಾನೆಲ್‌ ಪಡೆಯಬಹುದು. ಇದರಲ್ಲಿ ದೂರದರ್ಶನದ ಎಲ್ಲ ವಾಹಿನಿಗಳು, ಜೊತೆಗೆ ನ್ಯೂಸ್‌ ಚಾನೆಲ್‌ಗಳು ಲಭ್ಯವಿರುತ್ತವೆ. ಉಳಿದಂತೆ ಕನ್ನಡದ ವಾಹಿನಿಗಳು ಬೇಕೆಂದರೆ ಅವುಗಳನ್ನು ಆಯ್ದುಕೊಂಡು ಅವುಗಳಿಗೆ ಪ್ರತ್ಯೇಕ ಹಣ ಪಾವತಿಸಬೇಕಾಗುತ್ತದೆ. ಅದೇ ರೀತಿ ನಿಮಗೆ ತೆಲುಗು, ತಮಿಳು, ಹಿಂದಿ ಅಥವಾ ಇನ್ಯಾವುದೇ ಭಾಷೆಯ ಅಥವಾ ಕ್ರೀಡಾ ಚಾನೆಲ್‌ ಬೇಕೆಂದರೆ ಆಯಾ ಚಾನೆಲ್‌ಗಳಿಗೆ ತಗುಲುವ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ ಎನ್ನುತ್ತಾರೆ ಕೇಬಲ್‌ ಆಪರೇಟರ್‌.

ಕಾಸಿಗೆ ತಕ್ಕಂತೆ ಕಜ್ಜಾಯ

ಹೊಸ ದರ ಹೇಗೆಂದರೆ ‘ಕಾಸಿಗೆ ತಕ್ಕ ಕಜ್ಜಾಯ’ ಪಡೆದುಕೊಂಡಂತೆ, ಒಂದು ವೇಳೆ ಗ್ರಾಹಕರಿಗೆ ಎಲ್ಲ ಚಾನೆಲ್‌ ಬೇಕೆಂದರೆ ಈಗ ಪಾವತಿಸುವುದಕ್ಕಿಂತ ತುಸು ಹೆಚ್ಚು ಪಾವತಿಸಬೇಕಾಗುತ್ತದೆ. ಇಲ್ಲ ನನಗೆ ಕೇವಲ ಕನ್ನಡ ಹಾಗೂ ಫ್ರೀ ಟು ಏರ್‌ ಚಾನೆಲ್‌ ಸಾಕು ಎಂದರೆ ಬಹುತೇಕ ಈಗ ನೀಡುತ್ತಿರುವ ದರದಲ್ಲಿಯೇ 20 ರಿಂದ 30 ರೂ. ಕಡಿಮೆ ಆಗಲಿದೆ ಎನ್ನುತ್ತಾರೆ ಉದ್ಯಮದ ಹಿರಿಯರು.

”ಮೊದಲ ಒಂದೆರಡು ತಿಂಗಳು ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವವರೆಗೆ ಸ್ವಲ್ಪ ಕಷ್ಟವಾಗಬಹುದು, ಗೊಂದಲಗಳೂ ಉಂಟಾಗಬಹುದು.ಆದರೆ ದೀರ್ಘಕಾಲದಲ್ಲಿ ಇದರಿಂದ ಗ್ರಾಹಕರಿಗೆ ಒಳ್ಳೆಯದಾಗಲಿದೆ”ಎನ್ನುತ್ತಾರೆ ಅವರು

ಕಾರ್ಪೋರೇಟ್‌ಗೆ ಮಣೆ ಹಾಕುವ ಉದ್ದೇಶ
ಎರಡು ವರ್ಷಗಳ ಹಿಂದೆ ನೋಟ್‌ ಬ್ಯಾನ್‌ ಮಾಡಿದಂತೆ ಈಗ ಕೇಬಲ್‌ ಬಂದ್‌ ಮಾಡುತ್ತಿದೆ ಕೇಂದ್ರ ಸರಕಾರ. ಗ್ರಾಹಕರ ಹಿತರಕ್ಷಣೆ ಹೆಸರಿನಲ್ಲಿ ಕಾರ್ಪೋರೇಟ್‌ಗೆ ಮಣೆ ಹಾಕಲು ದರವನ್ನು ಯರ್ರಾಬಿರ್ರಿ ಏರಿಕೆ ಮಾಡಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆ ಇದೆ.
ಎಸ್‌.ಪ್ಯಾಟ್ರಿಕ್‌ ರಾಜು, ಅಧ್ಯಕ್ಷರು ಕರ್ನಾಟಕ ರಾಜ್ಯಕೇಬಲ್‌ ಆಪರೇಟರ್‌ ಅಸೋಸಿಯೇಷನ್‌

ಲೆಕ್ಕಾಚಾರ ಹೇಗೆ ?

130 ರೂ. (100 ಫ್ರೀ ಟು ಏರ್‌ ಚಾನಲ್‌)

+ಶೇ.18 ತೆರಿಗೆ

+ ಕನ್ನಡದ ಎಲ್ಲ ವಾಹಿನಿಗಳು (ಬೇಸಿಕ್‌ ಪ್ಯಾಕ್‌ 91 ರೂ. (ಕಲರ್ಸ್‌, ಸ್ಟಾರ್‌, ಜೀ ಮತ್ತು ಸನ್‌ ನೆಟ್‌ವರ್ಕ್‌ ಚಾನೆಲ್‌)

+ನೆಟ್‌ವರ್ಕ್‌ ಕೆಪಾಸಿಟಿ ಫೀ- 20 ರೂ.

ಒಟ್ಟು ಎಲ್ಲ ಸೇರಿ-280 ರಿಂದ 300 ರೂ.

ಕೇಬಲ್‌ ಬಂದ್‌ ಆಗದು

ಕೇಬಲ್‌ ಬಂದ್‌ ಆಗುವುದಿಲ್ಲ. ಬದಲಿಗೆ ನಿಮ್ಮ ಸಮೀಪದ ಕೇಬಲ್‌ ಆಪರೇಟರ್‌ ನಿಮ್ಮ ಮನೆಗೆ ಬಂದು ನಿಮಗೆ ಯಾವ ಚಾನೆಲ್‌ ಬೇಕು ಎಂದು ಪಟ್ಟಿ ಕೇಳುತ್ತಾರೆ. ನೀವು ಒಪ್ಪಿದ ಚಾನೆಲ್‌ ನೀಡುತ್ತಾರೆ, ಅದಕ್ಕೆ ನೀವು ಪಾವತಿಸಬೇಕಾಗುತ್ತದೆ. ಹೊಸ ದರ ಪಟ್ಟಿ ಹಾಗೂ ಚಾನೆಲ್‌ಗಳಿಗೆ ನಿಗದಿಪಡಿಸಿರುವ ಪ್ರತ್ಯೇಕ ದರಪಟ್ಟಿಯನ್ನು ವೆಬ್‌ಸೈಟ್‌ಗಳಲ್ಲಿ ನೋಡಬಹುದಾಗಿದೆ.

Comments are closed.