
ಬೆಳ್ಳಂದೂರು ಕೆರೆ ಮಾಲಿನ್ಯ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್ಜಿಟಿ) ಡಿಸೆಂಬರ್ 6 ರಂದು ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರಕ್ಕೆ 50 ಕೋಟಿ ಬಿಬಿಎಂಪಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿತ್ತು.
ನ್ಯಾ. ಆದರ್ಶ ಕುಮಾರ್ ಗೊಯಲ್ ನೇತೃತ್ವದ ಪೀಠ, ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಿಧಿಸಿದ ದಂಡವನ್ನು ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಬೇಕು. ಅಲ್ಲದೆ 500 ಕೋಟಿ ಬೆಳ್ಳಂದೂರು, ವರ್ತೂರು ಹಾಗೂ ಅಗರ ಕೆರೆ ಅಭಿವೃದ್ಧಿಗೆ ಮೀಸಲು ನಿಧಿಗೆ ನೀಡಲು ಸೂಚಿಸಿದ್ದು ಆ ಹಣವನ್ನು ಕೆರೆ ಸಂರಕ್ಷಣೆಗೆ ಬಳಸಿಕೊಳ್ಳಲು ಆದೇಶಿಸಿದೆ.
ಇನ್ಮುಂದೆ ಕೆರೆ ಮತ್ತೆ ಕಲುಷಿತಗೊಂಡರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಅಲ್ಲದೆ, ಆ ವಿಷಯವನ್ನು ಅಧಿಕಾರಿಗಳ ಕೆರಿಯರ್ ರೆಕಾರ್ಡ್ ನಲ್ಲಿ ಬರೆಯಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶದಲ್ಲಿ ತಿಳಿಸಿತ್ತು.
ಬೆಳ್ಳಂದೂರು ಕೆರೆ ರಕ್ಷಣೆ ಆಗಿಲ್ಲ. ರಾಜ್ಯ ಸರ್ಕಾರ, ಬಿಬಿಎಂಪಿಯಿಂದ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ರಾಜಕಾಲುವೆ ಅತಿಕ್ರಮಣ ತಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಜಲಮಾಲಿನ್ಯ ಮಾಡುವುದು ಅಪರಾಧವಾಗಿದೆ. ಘನತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತದ ಕರ್ತವ್ಯವಾಗಿದೆ. ಇದನ್ನು ಸಂವಿಧಾನದಲ್ಲಿ ಕೂಡ ಹೇಳಲಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ, ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಅಂತ ಅಧಿಕಾರಿಗಳ ಮೇಲೂ ಎನ್ ಜಿಟಿ ಕಿಡಿಕಾರಿತ್ತು.
ಜವಾಬ್ದಾರಿ ನಿಭಾಯಿಸದಿದ್ದರೆ ಮುಂದೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಉನ್ನತ ಸಮಿತಿ ನೀಡಿರುವ ಶಿಫಾರಸ್ಸು ಪಾಲಿಸಬೇಕು. ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು. ಕೆರೆಗಳ ಅಭಿವೃದ್ಧಿ ಸಂಬಂಧ ಎನ್ ಜಿಟಿ ಆದೇಶ ಪಾಲನೆಗಾಗಿ ನಿವೃತ್ತಿ ನ್ಯಾ. ಸಂತೋಷ್ ಹೆಗಡೆ ನೇತೃತ್ವದ ಸಮಿತಿ ರಚನೆ ಮಾಡುವಂತೆ ಸೂಚಿಸಲಾಗಿದೆ. ವೆಬ್ಸೈಟ್ ರಚಿಸಲು ಸಮಿತಿಗೆ ನಿರ್ದೇಶನ ನೀಡಲಾಗಿದೆ. ಈ ಮೂಲಕ ಜನರು ವೆಬ್ ಸೈಟ್ ನಲ್ಲಿ ದೂರು, ಸಲಹೆ ನೀಡಬಹುದು ಎಂದು ಆದೇಶದಲ್ಲಿ ತಿಳಿಸಿತ್ತು.
Comments are closed.