ಕರ್ನಾಟಕ

ಶಕ್ತಿಸೌಧದ ಬಳಿ ಪ್ರತಿಭಟನೆಗಳ ಮಹಾಪೂರ

Pinterest LinkedIn Tumblr


ಬೆಳಗಾವಿ: ವಿವಿಧ ಬೇಡಿಕೆಗಳನ್ನು ಹೊತ್ತು ಗಡಿ ಕನ್ನಡಿಗರ ಶಕ್ತಿ ಕೇಂದ್ರ ಸುವರ್ಣ ವಿಧಾನಸೌಧದ ಬಳಿಯ ಪ್ರತಿಭಟನಾ ವೇದಿಕೆಗೆ ಗುರುವಾರ ಹತ್ತಾರು ಸಂಘಟನೆಗಳು ಧಾವಿಸಿ ಬೇಡಿಕೆ ಮಂಡಿಸಿದ್ದು, ಇಡೀ ದಿನ ಪ್ರತಿಭಟನೆ ದಿನವಾಗಿ ಮಾರ್ಪಟ್ಟಿತು. ಇಡೀ ದಿನ ಪ್ರತಿಭಟನೆಗಳ ಸುರಿಮಳೆ ಸುರಿದಿದ್ದರಿಂದ ಭದ್ರತೆಗೆ ನಿಯೋಜನೆಗೊಂಡ ಪೊಲೀಸರು ಹೈರಾಣಾಗಿ ಹೋದರು.

ಕಬ್ಬು ಬೆಳೆಗಾರ ರೈತರು ಕೊಂಡಸಕೊಪ್ಪ ಬಳಿ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ. ಗುರುವಾರದ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ, ಹಾವೇರಿ ಜಿಲ್ಲಾ ಪ್ರೌಢಶಾಲಾ ಮಂಡಳಿ, ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ, ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ, ರಾಜ್ಯ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘ ಸೇರಿ ಹತ್ತು ಹಲವು ಶಿಕ್ಷಕರ ಸಂಘಟನೆಗಳು ಧರಣಿ ನಡೆಸಿದವು.

ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟದ ಕಾರ್ಯಕರ್ತರು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಕಾರ್ಯಕರ್ತರು, ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ನೌಕರರ ಸಂಘ (ಕೆಜಿಬಿವಿ)ದ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಅಂಗವಿಕಲರ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಕಾರ್ಯಕರ್ತರು, ಕುಸ್ತಿ ಪೈಲ್ವಾನರ ಸಂಘ, ಅಂಗವಿಕಲರ ಶಿಕ್ಷಕರ ಸಂಘ, ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ ಸೇರಿ ಹಲವಾರು ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಪ್ರತಿಭಟನೆ ನಡೆಸಿದರು.

ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಭೋಜರಾಜ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ.ಜಾರ್ ಅವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಶಿಕ್ಷಕರ ಸಂಘಟನೆಗಳು ಹೋರಾಟ ಹಿಂದಕ್ಕೆ ಪಡೆದವು.

ಧರಣಿ ಮುಂದುವರಿಕೆ: ಹೈದರಾಬಾದ್ ಕರ್ನಾಟಕ ವಿಭಾಗದ (6-8ನೇ ತರಗತಿ) ಪದವೀಧರ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ 371 ಜೆ ಮೀಸಲಾತಿ ಅಡಿ ಜ್ಯೇಷ್ಠತೆ ಆಧಾರದಲ್ಲಿ 2ನೇ ಪಟ್ಟಿ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಕಲಬುರಗಿ ಮೂಲದ ಹೈದರಾಬಾದ್ ಕರ್ನಾಟಕ ಪದವೀಧರ ನಿರುದ್ಯೋಗ ಶಿಕ್ಷಕರ ಸಂಘವು ಬುಧವಾರದಿಂದ ನಡೆಸುತ್ತಿರುವ ಧರಣಿಯನ್ನು ಗುರುವಾರ ಮುಂದುವರಿಸಿತು. ಈ ನೇಮಕಾತಿಯಲ್ಲಿ ನಮಗೆ ಅನ್ಯಾಯವಾಗಿರುವುದಾಗಿ ಅವರು ಅಳಲು ತೋಡಿಕೊಂಡರು.

Comments are closed.