ಕರ್ನಾಟಕ

5 ವರ್ಷ ನನ್ನ ಪಿಆರ್​ಒ ಆಗಿದ್ದೆ: ಜಾರಕಿಹೊಳಿಗೆ ಲಕ್ಷ್ಮೀ ತಿರುಗೇಟು

Pinterest LinkedIn Tumblr


ಬೆಂಗಳೂರು(ಡಿ.10): ಐದು ವರ್ಷಗಳ ಕಾಲ ನನಗೆ ಪಿಆರ್​ಒ ಆಗಿ ಕೆಲಸ ಮಾಡಿದ್ದವರೂ, ಈಗ ಏಕೆ ಆಗಿಲ್ಲ? ಎಂದು ಪ್ರಶ್ನಿಸುವ ಮೂಲಕ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿಯವರು, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ತಿರುಗೇಟು ನೀಡಿದ್ದಾರೆ. ಅಲ್ಲದೇ ನಾನು ಶೋ ಕೊಡಲು ಉಸ್ತುವಾರಿ ಸಚಿವನಾಗಿಲ್ಲ. ನಾನು ಪ್ರಚಾರ ಪ್ರಿಯ ಕೂಡ ಅಲ್ಲ. ಮಾಜಿ ಸಿಎಂ ಸಿದ್ದರಾಮಯನ್ನವರೇ ಬಂದಾಗ ನಾನು ಸ್ವಾಗತಿಸಲು ಹೋಗಿಲ್ಲ. ಯಾರೇ ಬೆಳಗಾವಿಗೆ ಬಂದರೂ ನಾನು ಸ್ವಾಗತಿಸಿಲ್ಲ, ಈಗ ಸಿಎಂ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲು ಆಗಲಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಚಿವ ರಮೇಶ್​ ಜಾರಕಿಹೊಳಿಯವರು ಗರಂ ಆಗಿದ್ದಾರೆ.

ಬೆಳಗಾವಿಯಲ್ಲಿ ವಿಧಾನಸಭಾ ಪರಿಷತ್​​ ಕಲಾಪ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಎಚ್.ಡಿ. ಕುಮಾರಸ್ವಾಮಿ ಬೆಳಗಾವಿಗೆ ಆಗಮಿಸಿದ್ದರು. ಸಿಎಂ ಅವರನ್ನು ಸ್ವಾಗತಿಸಲು ಬಾರದಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್​ ಜಾರಕಿಹೊಳಿಯವರ ಬಗ್ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಪ್ರಶ್ನಿಸಲಾಯ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ನಾನೇನು ರಮೇಶ್ ಜಾರಕಿಹೊಳಿ ಅವರ ಪಿಆರ್‌ಒನಾ? ಅವರು ಸಿಎಂ ಸ್ವಾಗತಕ್ಕೆ ಬರಬೇಕಿತ್ತು, ಯಾಕೊ ಬಂದಿಲ್ಲ ಎಂದು ಗರಂ ಆದರು.

ಇಂದು ಸುದ್ದಿಗಾರರ ಜತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ನಾನು ನನ್ನ ಕ್ಷೇತ್ರದ ಬಗ್ಗೆ 80 ಪ್ರಶ್ನೆಗಳನ್ನ ಇಟ್ಟುಕ್ಕೊಂಡಿದ್ದೇನೆ. ರಮೇಶ್​ ಜಾರಕೊಹೊಳಿಯವರ ಆಗಮನದ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ನೀವು ಅವರನ್ನೇ ಕೇಳಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೆ ತೀರುಗೇಟು ನೀಡಿರುವ ಸಚಿವ ರಮೇಶ್​ ಜಾರಕಿಹೊಳಿ ಅವರು, ಇಷ್ಟು ದಿನ ನನ್ನ ಪಿಆರ್​ಒ ಆಗಿದ್ದರು. ಈಗ ಯಾಕೇ ಆಗಿಲ್ಲ ಎಂದು ಅವರನ್ನೇ ಪ್ರಶ್ನಿಸಿ. ನಾನು ಪ್ರಚಾರ ಪ್ರಿಯ ಕೂಡ ಅಲ್ಲ. ಮಾಜಿ ಸಿಎಂ ಸಿದ್ದರಾಮಯನ್ನವರೇ ಸ್ವಾಗತಿಸಲು ಹೋಗಿಲ್ಲ, ಹಾಗೆಯೇ ಸಿಎಂ ಕುಮಾರಸ್ವಾಮಿಯರನ್ನು ಸ್ವಾಗತಿಸಲು ಆಗಲಿಲ್ಲ ಎಂದರು. ಇನ್ನು ನಗರದಲ್ಲಿ ಎಲ್ಲೆಡೆ ಬ್ಯಾನರ್​ಗಳು ರಾರಾಜಿಸುತ್ತಿವೆ. ಇಲ್ಲಿ ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕ ಸತೀಶ್ ಜಾರಕಿಹೊಳಿ ಭಾವಚಿತ್ರಗಳನ್ನು ಹಾಕದೇ ತಮ್ಮ ಮೈನಸ್ಸನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಮುಂದುವರೆಸಿದ್ಧಾರೆ ಎನ್ನಲಾಗಿದೆ.

ಮತ್ತೆ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ. ಐದು ವರ್ಷ ಯಾವ ಪಿಆರ್​ಒ, ಯಾವುದಕ್ಕೆ ಪಿಆರ್​ಒ ಆಗಿದ್ದೆ? ಎಂದು ಉತ್ತರ ನೀಡಲಿ. ಐದು ವರ್ಷದಿಂದ ನಾನು ಅವರ ಪಿಆರ್​​ಒ ಆಗಿದೀನಿ ಅಂದಿದಾರೆ. ನಾನೇನು ಸರ್ಕಾರಿ ಅಧಿಕಾರಿನಾ ಅವರ ಪಿಆರ್​​ಒ ಆಗಲಿಕ್ಕೆ? ಎಂದರು. ಜೊತೆಗೆ ನಾನೂ ಒಬ್ಬ ಶಾಸಕಿ. ರಾಜಕೀಯ ಶಾಶ್ವತ ಅಲ್ಲ. ಶತ್ರುಗಳಾಗಿರುವಾಗ ನಡೆದ ಪ್ರಸಂಗಗಳನ್ನು ಈಗ ಬಿಟ್ಟು ಬಿಡಬೇಕು. ನಾನು ಹಳೇ ಕಹಿ ನೆನಪುಗಳನ್ನು ಮರೆತಿದ್ದೇನೆ ಎಂದರು.

ಹಾಗೆಯೇ ಮಾತು ಮುಂದುವರೆಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ನಾವು ಈಗ ಅಭಿವೃದ್ಧಿ ಬಗ್ಗೆ ಮಾತಾಡಬೇಕು. ನಾವು ಒಂದೇ ಪಕ್ಷದಲಿದೀವಿ. ನಾ‌ನು ನನ್ನ ಕ್ಷೇತ್ರದ ಮತದಾರ ಪಿಆರ್​ಒ ಆಗಿದ್ದೇನೆ. ಮಾನ ಮರ್ಯಾದೆ ಇದ್ದವರು ಹಾಗೆಲ್ಲ ಮಾತಾಡಬಾರದು. ನಾನು ಸಹಿಸಿ ಸಹಿಸಿ ಸಾಕಾಗಿ ಹೋಗಿದೆ. ನನ್ನನ್ನ ಪಿಆರ್​ಒ ಅಂತ ಹೇಳೋದು ಸರಿಯಲ್ಲ. ಇದನ್ನು ಇಲ್ಲಿಗೇ ನಿಲ್ಲಿಸಿ ಬಿಡೋಣ. ಪದೇ ಪದೇ ಹೀಗೆ ಮಾತಾಡಬಾರದು ಎಂದು ಜರಿದರು.

Comments are closed.