ಮುಂಬೈ

ಊರ್ಜಿತ್ ರಾಜೀನಾಮೆ: ಮೋದಿ ಸರಕಾರದೊಂದಿಗೆ ಏನಿತ್ತು ಪಟೇಲ್ ಜಟಾಪಟಿ?

Pinterest LinkedIn Tumblr


ನವದೆಹಲಿ: ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಡುವಣ ತಿಕ್ಕಾಟ ಮುಗಿದೆ ಹೋಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಜೊತೆಗೆ ಎಂದಿನಂತೆಯೆ ಕೇಂದ್ರ ಹಾಗೂ ಆರ್​ಬಿಐ ನಡುವೇ ಯಾವುದೆ ತಗಾದೆ ಇಲ್ಲದೇ ಕಾರ್ಯಗಳು ನಡೆಯಲಿವೆ. ಯುಪಿಎ ಸರ್ಕಾರದ ಅವಧಿಯಲ್ಲಿಯೂ ಇಂತಹ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಿದ್ದವು. ಇದೀಗ ಎಲ್ಲವೂ ಸರಿ ಹೋಗಿದ್ದು, ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುತ್ತಿವೆ ಎನ್ನಲಾಗುತ್ತಿತ್ತು. ಆದರೆ, ಈ ಬೆನ್ನಲ್ಲೇ ಆರ್​​ಬಿಐ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡಿರುವೆ. ಕೇಂದ್ರ ಅಂಗೀಕರಿಸಬೇಕೆಂದು ಹೇಳಿಕೆ ನೀಡಿದ ಊರ್ಜಿತ್​​ ಪಟೇಲ್​​ರ ನಡೆ ಭಾರೀ ಅಚ್ಚರಿ ಮೂಡಿಸಿದೆ.

ಆರ್​​ಬಿಐ ಮತ್ತು ಕೇಂದ್ರ ಸರ್ಕಾರ ನಡುವೇ ಮುಸುಕಿನ ಗುದ್ದಾಟ ಮುಂದುವರೆಯುತ್ತಿತ್ತು. ಒಂದು ವೇಳೆ ಹೀಗೆಯೇ ಮುಂದುವರಿದಲ್ಲಿ, ಕೇಂದ್ರ ಬ್ಯಾಂಕಿನ ಮುಂದಿನ ಮಂಡಳಿ ಸಭೆಯಲ್ಲಿ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು. ಸರ್ಕಾರದ ಹಗೆತನದಿಂದ ನಾನು ಹೈರಾಣಾಗಿದ್ದೇನೆ. ಇದರಿಂದ ಮಾನಸಿಕ ನೆಮ್ಮದಿಯಿಲ್ಲದೇ ಅನಾರೋಗ್ಯಕ್ಕೀಡಾಗಿದ್ದೇನೆ ಎಂದು ಊರ್ಜಿತ್ ಪಟೇಲ್ ಹೇಳಿಕೊಂಡಿರುವುದಾಗಿ ವರದಿಯಾಗಿತ್ತು.

ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಸಾಲ ಸೌಲಭ್ಯ ನೀಡಬೇಕೆಂದು ಕೇಂದ್ರ ಆರ್​ಬಿಐಗೆ ಮನವಿ ಮಾಡಿತ್ತು. ಅಲ್ಲದೇ ಆರ್​​ಬಿಐ ನಿರ್ದಿಷ್ಟ ಉಳಿತಾಯದ ಹಣವನ್ನು ಸಾರ್ವಜನಿಕ ಕಾರ್ಯಗಳಿಗೆ ಮೀಸಲಿಡಬೇಕೆಂದು ಕೂಡ ಹೇಳಲಾಗಿತ್ತು. ಇದರಿಂದ ಬೇಸತ್ತ ಆರ್​​ಬಿಐ ಗವರ್ನರ್ ಊರ್ಜಿತ್​​ ಪಟೇಲ್​​ ಸರ್ಕಾರದ ವಿರುದ್ಧ ನೇರವಾಗಿಯೇ ಹರಿಹಾಯ್ದಿದ್ದರು. ಅದರ ಬಳಿಕ ಕೇಂದ್ರ ಮತ್ತು ಆರ್​ಬಿಐ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿತ್ತು.

ಆರ್​​ಬಿಐ ಕಾರ್ಯಕ್ಕೆ ಕೇಂದ್ರ ಅಡ್ಡಿಪಡಿಸುತ್ತಿದೆ. ಇದರಿಂದ ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ. ಬಳಿಕ ಆರ್ಥಿಕ ವ್ಯವಸ್ಥೆಯಲ್ಲಿ ಭಾರಿ ಅನಾಹುತಕ್ಕೆ ಕಾರಣವಾಗಲಿದೆ ಎಂದು ಆರ್​ಬಿಐ ಎಚ್ಚರಿಕೆ ನೀಡಿತ್ತು. ಈ ಎಲ್ಲಾ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಗವರ್ನರ್​​ ಹುದ್ದೆ ತೊರೆಯಲು ಊರ್ಜಿತ್​​ ಪಟೇಲ್​​ರು ನಿರ್ಧರಿಸಿದ್ದಾರೆ.ಹಲವು ದಿನಗಳಿಂದ ಕೇಂದ್ರ ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಇದರಿಂದಾಗಿ ನಮ್ಮ ಸ್ವಾಯತ್ತತೆ ಎಷ್ಟರ ಮಟ್ಟಿಗೆ ಉಳಿದಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಕೇಂದ್ರ ಹೀಗೆ ನಮ್ಮ ಕೆಲಸಕ್ಕೆ ಅಡ್ಡಿಪಡಿಸಿದರೇ, ರಾಜೀನಾಮೆ ನೀಡುವೆ ಎಂದು ಊರ್ಜಿತ್​​ ತಮ್ಮ ಆಪ್ತರೊಡನೆ ಹೇಳಿಕೊಂಡಿದ್ದರು.

ಊರ್ಜಿತ್​​ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ತನ್ನ ನಡೆಯನ್ನು ಬದಲಿಸಿಕೊಂಡಿದೆ ಎಂಬ ಚರ್ಚೆಯೂ ನಡೆಯುತ್ತಿತ್ತು. ಆದರೆ, ಈ ಎಲ್ಲಾ ಬೆಳವಣೆಗೆಗಳ ನಡುವೆಯೂ ಎಚ್ಚೆತ್ತುಕೊಳ್ಳದ ಕೇಂದ್ರ ಸರ್ಕಾರ ಆರ್ ಬಿಐ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಿದೆ. ಇದರಿಂದ ಬೇಸೆತ್ತ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಸಮಸ್ಯೆಗಳನ್ನು ಬಗೆಹರಿಸಲು ಆರ್​​ಬಿಐ ಕೂಡ ಸಹಕರಿಸುತ್ತಿಲ್ಲ. ತನ್ನ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಆರ್​​ಬಿಐ ನಿರಾಕರಿಸಿದೆ. ಹೀಗಾಗಿ ಆರ್​​ಬಿಐ ವರ್ತನೆಯಿಂದ ನಾವು ಬೇಸತ್ತಿದ್ದೇವೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ತಿರುಗೇಟು ನೀಡಿದ್ದ ಆರ್​ಬಿಐ ಹಣಕಾಸು ಮುಗ್ಗಟ್ಟಿನ ಸಂದರ್ಭಕ್ಕೆ ಉಪಯೋಗವಾಗುವಂತೆ ಹಣ ಉಳಿಸಿಕೊಂಡಿದ್ದೇವೆ. ಈ ಹಣವನ್ನು ತನಗೆ ಒಪ್ಪಿಸುವಂತೆ ಕೇಂದ್ರ ಸರ್ಕಾರ ನಮ್ಮ ಮೇಲೆ ಒತ್ತಡ ಹೇರುತ್ತಿದೆ. ಬಿಜೆಪಿಯಿಂದ ತಮ್ಮ ಅಧಿಕಾರದ ಅವಧಿಯಲ್ಲಿಯೇ ‘ಇದಕ್ಕೆ ವಿನಾಯಿತಿ ನೀಡಿ, ಅದಕ್ಕೆ ವಿನಾಯಿತಿ ನೀಡಿ’ ಎಂದು ಲೆಕ್ಕವಿಲ್ಲದಷ್ಟು ಪತ್ರಗಳು ಬಂದಿವೆ. ಇದು ಆರ್ಥಿಕ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಕೇಂದ್ರ ಬೇಡಿಕೆಗಳನ್ನು ತಿರಸ್ಕರಿಸಿದ್ದೇವೆ ಎಂದು ಆರ್​ಬಿಐ ತಿಳಿಸಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರ್ಕಾರದ ನಡುವಿನ ಶೀತಲಸಮರ ತಾರಕಕ್ಕೇರಿದ್ದರೂ, ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆ ಪಡೆಯುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿತ್ತು. ಆದರೀಗ ದೇಶದ ಉನ್ನತ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಸಂಘರ್ಷ ನಿಂತಿಲ್ಲ ಎಂಬುದು ಬಹಿರಂಗವಾಗಿದೆ. ಹೀಗಾಗಿಯೇ ಊರ್ಜಿತ್​ ಪಟೇಲ್​​ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡಿದ್ದೇನೆಂದು ಹಳುವ ಮೂಲಕ ಊರ್ಜಿತ್​​ ಅವರು, ಮುಸುಕಿನ ಗುದ್ದಾಟವನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ ಎನ್ನುತ್ತಿವೆ ಮೂಲಗಳು.

ರಾಜೀನಾಮೆ ನಂತರ ಊರ್ಜಿತ್​​ ಹೇಳಿದ್ದೇನು?:

ವೈಯಕ್ತಿಕ ಕಾರಣಗಳಿಂದ ನಾನು ನನ್ನ ವೃತ್ತಿಯಿಂದ ಕೆಳಗಿಳಿಯುತ್ತಿದ್ದೇನೆ. ಸುಯಮಾರು ವರ್ಷಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್​ನಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿಬಂದಿದೆ. ಇದು ನನ್ನ ಸೌಭಾಗ್ಯ. ನನ್ನ ಕರ್ತವ್ಯವನ್ನು ಗೌರವದಿಂದ ನಿಭಾಯಿಸಿದ್ದೇನೆ. ಆದರೆ ಈಗ ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡುತ್ತಿರುವೆ ಎಂದು ತಿಳಿಸಿದ್ಧಾರೆ.

ಊರ್ಜಿತ್​​ ಹಿನ್ನೆಲೆ: ರಿಸರ್ವ್ ಬ್ಯಾಂಕಿನ 24ನೇ ಗವರ್ನರ್ ಆಗಿ ಉರ್ಜಿತ್ ಪಟೇಲ್ ಅಧಿಕಾರ ಸ್ವೀಕರಿಸಿದ್ದರು. ಸದಾ ಪ್ರಚಾರದಿಂದ ದೂರ ಉಳಿಯುವ ಇವರು, 2013ರಿಂದ ಆರ್​ಬಿನಲ್ಲಿ 2016 ರವರೆಗೂ ಉಪ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಈಗಾಗಲೇ ಊರ್ಜಿತ್​​ರಿಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ, ಹಣ ಮಾರುಕಟ್ಟೆ, ಬ್ಯಾಂಕಿಂಗ್ ವಲಯ ಸುಧಾರಣೆ, ಪಿಂಚಣಿ ನಿಧಿ ಸುಧಾರಣೆ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ನಿರ್ವಹಿಸಿದ್ದಾರೆ. ಇದರಲ್ಲಿ ಅನುಭವ ಹೊಂದಿದ್ದಾರೆ. ಇನ್ನು 1998ರಿಂದ 2001ರವರೆಗೆ ಹಣಕಾಸು ಸಚಿವಾಲಯದಲ್ಲಿ ಸಲಹೆಗಾರರಾಗಿದ್ದರು ಎನ್ನುತ್ತಿವೆ ಮೂಲಗಳು.

ಇನ್ನು ಊರ್ಜಿತ್ ಪಟೇಲ್ ಹಲವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತ ಮಟ್ಟದ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ಕೇಲ್ಕರ್ ಸಮಿತಿಯ ನೇರ ತೆರಿಗೆಗಳ ಕಾರ್ಯಪಡೆ, ನಾಗರಿಕ ಮತ್ತು ರಕ್ಷಣಾ ಸೇವೆ ಪಿಂಚಣಿ ವ್ಯವಸ್ಥೆಯ ಪರಾಮರ್ಶೆಗಿರುವ ಉನ್ನತ ಮಟ್ಟದ ತಜ್ಞರ ಸಮಿತಿ, ಪ್ರಧಾನ ಮಂತ್ರಿಗಳ ಮೂಲಭೂತ ಸೌಕರ್ಯಗಳ ಕಾರ್ಯಪಡೆ, ಟೆಲಿಕಾಂ ಮ್ಯಾಟರ್ಸ್ ನ ಸಚಿವರ ಗುಂಪು, ನಾಗರಿಕ ವಿಮಾನಯಾನ ಸುಧಾರಣೆಯ ಸಮಿತಿ, ಇಂಧನ ತಜ್ಞರ ಗುಂಪಿನ ಸಚಿವಾಲಯ ಮೊದಲಾದ ಇಲಾಖೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ.

Comments are closed.