ಕರ್ನಾಟಕ

ಬೆಳಗಾವಿ ಅಧಿವೇಶನ​; 1 ಲಕ್ಷ ರೈತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲು ಬಿಜೆಪಿ ಯೋಜನೆ

Pinterest LinkedIn Tumblr


ಬೆಂಗಳೂರು: ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷ ಬಿಜೆಪಿ ಸಕಲ ರೀತಿಯಲ್ಲೂ ಸಜ್ಜಾಗಿದೆ.

ನಾಳೆ ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಬಿಜೆಪಿ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದ್ದು, ಬಿಎಸ್​ವೈ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ. ಈ ಕುರಿತು ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿರುವ ಯಡಿಯೂರಪ್ಪ ಅವರು, ರೈತ ವಿರೋಧಿ ಸರ್ಕಾರದ ವಿರುದ್ಧ 1 ಲಕ್ಷ ಜನ ರೈತರನ್ನು ಸೇರಿಸಿ ಸಮಾವೇಶ ಮಾಡುತ್ತೇವೆ. ರಾಜ್ಯದಾದ್ಯಂತ ಬಿಜೆಪಿ 5 ತಂಡಗಳಲ್ಲಿ ಬರ ಪ್ರವಾಸ ಅಧ್ಯಯನ ನಡೆಸಿದೆ. ನಮ್ಮ ಬರ ಪ್ರವಾಸದ ಬಗ್ಗೆ ಸಿಎಂ ಕುಮಾರಸ್ವಾಮಿ ಲಘುವಾಗಿ ಮಾತನಾಡಿದ್ದಾರೆ. ಹೀಗಾಗಿ ನಾಳೆ ಸರ್ಕಾರದ ನೈತಿಕತೆಯನ್ನು ಹರಾಜು ಹಾಕಲಿದ್ದೇವೆ ಎಂದು ಹೇಳಿದರು.

ಸರ್ಕಾರ ಸತ್ತಿದೆ, ಹಣಕಾಸು ಸಂಗ್ರಹ ಆದರೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳನ್ನು ತಲುಪುತ್ತಿಲ್ಲ. ಕಬ್ಬು ಬೆಳೆಗಾರರ ಬಾಕಿ ಹಣ ವಿಚಾರದಲ್ಲಿ ರೈತ ಮಹಿಳೆ ಪ್ರತಿಭಟನೆ ಮಾಡಿದರೆ, ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ಎಂದು ಸಿಎಂ ಲಘುವಾಗಿ ಮಾತನಾಡುತ್ತಾರೆ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯುವ ನೈತಿಕತೆ ಇಲ್ಲ ಎಂದು ಬಿಎಸ್​ವೈ ಹೇಳಿದ್ದಾರೆ.

ಸುವರ್ಣ ವಿಧಾನಸೌಧ ನಿರ್ವಹಣೆಗೆ ಐದಾರು ಕೋಟಿ ಖರ್ಚು ಆಗುತ್ತಿದೆ. ನಾನು ಸಿಎಂ ಆಗಿ ಸ್ವಲ್ಪ ಸಮಯ ಸಿಕ್ಕಿದ್ರೆ ಹಲವು ಇಲಾಖೆಯನ್ನು ಸುವರ್ಣ ವಿಧಾನಸೌಧಕ್ಕೆ ಶಿಫ್ಟ್ ಮಾಡುತ್ತಿದ್ದೆ. ಆದರೆ ಸಿಎಂ ಕುಮಾರ ಸ್ವಾಮಿ ಅವರು ಕೆಲವು ಇಲಾಖೆ ಕಚೇರಿ ಶಿಫ್ಟ್ ಮಾಡ್ತೀವಿ ಎಂದು ಹೇಳಿದ್ದಾರೆ. ಏನು ಮಾಡ್ತಾರೆ ನೋಡೊಣ ಎಂದು ಹೇಳಿದರು.

Comments are closed.