ಕರ್ನಾಟಕ

ಟಾಂಗ್​ ನೀಡಿದ ಸಂಸದ ಪ್ರತಾಪ್​ ಸಿಂಹಗೆ ವೇದಿಕೆಯಲ್ಲೇ ಕುಮಾರಸ್ವಾಮಿ ಆವಾಜ್​

Pinterest LinkedIn Tumblr


ಮಡಿಕೇರಿ: ಕೊಡಗು ಪ್ರವಾಹ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮ, ಸಂಸದ ಪ್ರತಾಪ್​ ಸಿಂಹ ಹಾಗೂ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ರಾಜಕೀಯ ಕಚ್ಚಾಟಕ್ಕೆ ವೇದಿಕೆಯಾಯಿತು. ಕೊಡಗು ಸಂತ್ರಸ್ಥರಿಗೆ ಕೇಂದ್ರ ಸರ್ಕಾರ ನೆರವು ನೀಡಿದೆ ಎಂದು ಹೇಳಿದ ಪ್ರತಾಪ್​ ಸಿಂಹ ವಿರುದ್ಧ ಕುಮಾರಸ್ವಾಮಿ ವೇದಿಕೆಯಲ್ಲೇ ಗುಡುಗಿದ್ದಾರೆ. ಬಾಯಿಗೆ ಬಂದಂತೆ ಸುಳ್ಳು ಹೇಳಬೇಡಿ ಎಂದು ಸಿಎಂ ರೇಗಿದ್ದಾರೆ ಎನ್ನಲಾಗಿದೆ.

ನಿರಾಶ್ರಿತರ ಮನೆ ನಿರ್ಮಾಣ ಯೋಜನೆಗೆ ಮಡಿಕೇರಿಯ ಜಂಬೂರಿನಲ್ಲಿ ಚಾಲನೆ ನೀಡಲಾಯಿತು. ಡಿಸಿಎಂ ಡಾ. ಜಿ. ಪರಮೇಶ್ವರ್, ಉಸ್ತುವಾರಿ ಸಚಿವ ಸಾ ರಾ ಮಹೇಶ್​ ಶಾಸಕ ಅಪ್ಪಚ್ಚು ರಂಜನ್, ಕೆ ಜಿ ಬೋಪಯ್ಯ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಈ ವೇದಿಕೆಯನ್ನು ರಾಜಕೀಯ ಕಚ್ಚಾಟಕ್ಕಾಗಿ ಬಳಸಿಕೊಂಡ ನಾಯಕರು, ಕೊಡಗಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವ ನೆರವು ನೀಡಿದೆ ಎಂಬ ಲೆಕ್ಕಾಚಾರ ಹಿಡಿದು ಮಾತಿನ ಚಕಮಕಿ ನಡೆಸಿದರು.

ರಾಜ್ಯದ ನೆರವು

ಶಂಕುಸ್ಥಾಪನೆ ಬಳಿಕ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್​, ಕೊಡಗಿಗೆ ಕೇಂದ್ರ ಸರ್ಕಾರ ಯಾವುದೇ ಅನುದಾನ ನೀಡಲಿಲ್ಲ. ರಾಜ್ಯ ಸರ್ಕಾರವೇ ಜಿಲ್ಲೆಯ ಅಭಿವೃದ್ಧಿಗೆ ಮುಂದಾಯಿತು. ಪ್ರತಿಯೊಬ್ಬರಿಗೂ 1 ಲಕ್ಷಕ್ಕಿಂತ ಹೆಚ್ಚಿನ ಹಣ ನೀಡಿದ್ದೇವೆ. ಸಾಮಾಗ್ರಿ ನಷ್ಟವಾಗಿದ್ದಕ್ಕೆ 50 ಸಾವಿರ ರೂಪಾಯಿ ಸರ್ಕಾರ ನೀಡಿದೆ.

ಸರ್ಕಾರ ಕೊಡಗಿನ ಸಂತ್ರಸ್ಥರನ್ನ ನಿರ್ಲಕ್ಷ್ಯ ಮಾಡಿಲ್ಲ. ಕೆಲವರು ಪ್ರಚಾರಕೋಸ್ಕರ ವಿಳಂಬ ಆಗಿದೆ ಅಂತಾ ಆರೋಪಿಸಿದ್ದಾರೆ. ಸರ್ಕಾರ ಸ್ಪಂದನೆ ಮಾಡ್ತಿರೋದನ್ನ ದಯವಿಟ್ಟು ಅರ್ಥ ಮಾಡಿಕೊಳ್ಳಿ. ಹಂತ ಹಂತವಾಗಿ ಸರ್ಕಾರ ಸಂತ್ರಸ್ಥರ ನೆರವಿಗೆ ಬಂದಿದೆ ಎಂದರು.

ಟಾಂಗ್​ ನೀಡಿದ ಪ್ರತಾಪ್​ ಸಿಂಹ

ಸಾರಾ ಮಹೇಶ್​ ಹೇಳಿಕೆಗೆ ಟಾಂಗ್​ ನೀಡಿ ಮಾತನಾಡಿದ ಸಂಸದ ಪ್ರತಾಪ್​ ಸಿಂಹ, ಕೇಂದ್ರ ಸರ್ಕಾರ ಕೂಡ ಜಿಲ್ಲೆಯ ಜನರಿಗೆ ಸ್ಪಂದಿಸಿದೆ. ಕೇರಳಕ್ಕೆ ಮಾತ್ರ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್​ ನೀಡಿದೆ. ಕೊಡಗನ್ನು ನಿರ್ಲಕ್ಷ್ಯ ಮಾಡಿದೆ ಎಂದು ಸುಳ್ಳು ಪ್ರಚಾರ ಮಾಡಲಾಗಿದೆ ಎಂದು ದೂರಿದರು.

ಕೇಂದ್ರ ಕೇರಳಕ್ಕೆ ಯಾವುದೇ ವಿಶೇಷ ಪ್ಯಾಕೇಜ್ ಕೊಟ್ಟಿಲ್ಲ, ಅದು ಎನ್ ಡಿ ಆರ್ ಎಫ್ ಭಾಗವಾಗಿ ಆ ಹಣ ನೀಡಲಾಗಿದೆ. ಈ ವಿಷಯವನ್ನು ಯಾಕೆ ಪ್ರಸ್ತಾಪ ಮಾಡಿದೆ ಎಂದರೆ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಅಪ್ಪ ಅಮ್ಮ ಯಾರು ಅಂತ ಕೇಳುತ್ತಾರೆ. ಮಕ್ಕಳಿಗೆ ಅಪ್ಪ ಯಾರು ಅಮ್ಮ ಯಾರು ಗೊತ್ತಿರಬೇಕು. ಅದಕ್ಕಾಗಿ ಕೇಂದ್ರ ಎಷ್ಟು ಕೊಟ್ಟಿದೆ ಅಂತ ಹೇಳಿದೀನಿ ಎಂದರು.

ವೇದಿಕೆ ಮೇಲೆ ಸಿಟ್ಟಾದ ಸಿಎಂ

ಸಾರಾ ಮಹೇಶ್​, ಪರಮೇಶ್ವರ್​ ಹೇಳಿಕೆಗೆ ಟಾಂಗ್​ ನೀಡಿದ ಪ್ರತಾಪ್​ ಸಿಂಹ ಹೇಳಿಕೆಯಿಂದ ಗರಂ ಆದ ಸಿಎಂ ವೇದಿಕೆಯಲ್ಲಿಯೇ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಏನೇನೋ ಹೇಳಿ ಜನರ ದಾರಿ ತಪ್ಪಿಸಬೇಡಿ. ಇರುವ ವಾಸ್ತವತೆಯನ್ನು ಹೇಳಿ ಎಂದು ಆವಾಜ್​ ಹಾಕಿದರು. ಸಿಎಂ ಮಾತಿಗೆ ಬೆದರಿದ ಸಂಸದ ಪ್ರತಾಪ್​ ಸಿಂಹ ಸಮ್ಮನಾದರು ಎನ್ನಲಾಗಿದೆ.

Comments are closed.