ಕರ್ನಾಟಕ

ಬಾಯಿ ಕ್ಯಾನ್ಸರ್‌ ಪತ್ತೆಗೆ ವಿಶೇಷ ಆ್ಯಪ್‌

Pinterest LinkedIn Tumblr


ಬೆಂಗಳೂರು: ಗ್ರಾಮೀಣ ಭಾಗದ ಜನರಿಗೆ ಬಾಯಿ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುವ ಜತೆಗೆ ಅವರನ್ನು ಬಾಯಿ ಕ್ಯಾನ್ಸರ್‌ ಪರೀಕ್ಷೆಗೆ ಒಳಪಡಿಸಲು ಆಮ್ಟೋ 360 ಸ್ಟಾರ್ಟ್‌ಆಪ್‌ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ದೇಶದಲ್ಲಿ ಪ್ರತಿ ಒಂದು ಗಂಟೆಗೆ 10 ಜನರು ಬಾಯಿ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದು, ಗ್ರಾಮೀಣದ ಭಾಗದವರೆ ಹೆಚ್ಚು ಬಾಯಿ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ.

ಆ ಹಿನ್ನೆಲೆಯಲ್ಲಿ ಮೊಬೈಲ್‌ ಮೂಲಕವೇ ಅವರನ್ನು ಬಾಯಿ ಕ್ಯಾನ್ಸರ್‌ ಪತ್ತೆ ಪರೀಕ್ಷೆಗೆ ಒಳಪಡಿಸುವ ಮೂಲಕ ಅವರು ಬಾಯಿ ಕ್ಯಾನ್ಸರ್‌ಗೆ ಒಳಗಾಗಿದ್ದಾರೆಯೇ ಎಂಬುದನ್ನು ಕೆಲವೇ ನಿಮಿಷಗಳಲ್ಲಿ ತಿಳಿಸಲಾಗುತ್ತದೆ.

ಬಾಯಿ ಕ್ಯಾನ್ಸರ್‌ ಪತ್ತೆಗಾಗಿಯೇ ವಿಶೇಷವಾಗಿ ಮೊಬೈಲ್‌ ಆ್ಯಪ್‌ನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಆ್ಯಪ್‌ನಲ್ಲಿ ತಿಳಿಸುವ ಸೂಚನೆಗಳಂತೆ ಬಾಯಿಯ ಒಳ ಭಾಗದ ಚಿತ್ರಗಳನ್ನು ಕ್ಲಿಕ್ಕಿಸಿದರೆ, ಆ ಚಿತ್ರಗಳ ಆಧಾರದ ಮೇಲೆ ಕೇವಲ ಒಂದೆರಡು ನಿಮಿಷಗಳಲ್ಲಿ ಬಾಯಿ ಕ್ಯಾನ್ಸರ್‌ ಇದೆಯೇ ಇಲ್ಲವೆ ಎಂಬುದನ್ನು ತಿಳಿಸಲಾಗುತ್ತದೆ.

ರಾಜ್ಯದಲ್ಲಿ ಬಾಯಿ ಕ್ಯಾನ್ಸರ್‌ ರೋಗ ಕಾಣಿಸಿಕೊಳ್ಳುವ ಮೊದಲೇ ಸ್ಕ್ಯಾನಿಂಗ್‌ ಮಾಡಿ ರೋಗ ಪತ್ತೆ ಮಾಡುವ ತಂತ್ರಜ್ಞಾನ ಬೆರಳೆಣಿಕೆ ಆಸ್ಪತ್ರೆಗಳಲ್ಲಿ ಮಾತ್ರವೇ ಲಭ್ಯವಿದೆ. ಜತೆಗೆ ನಿಯಮಿತವಾಗಿ ಈ ಪರೀಕ್ಷೆಯನ್ನು ಮಾಡಿಸಬೇಕಾಗುತ್ತದೆ. ಆದರೆ, ಗ್ರಾಮೀಣ ಭಾಗದ ಜನರು ಸಾವಿರಾರು ರೂಪಾಯಿ ವೆಚ್ಚ ಮಾಡಿ ಇಂತಹ ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಆದರೆ, ಆಮೊrà 360 ಸ್ಟಾರ್ಟ್‌ಆಪ್‌ ಅಭಿವೃದ್ಧಿಪಡಿಸುವ ಆ್ಯಪ್‌ ಮೂಲಕ ಕೇವಲ 50-100 ರೂ.ಗಳಲ್ಲಿ ಬಾಯಿ ಕ್ಯಾನ್ಸರ್‌ ಇರುವುದು ತಿಳಿಯಲಿದೆ. ಸರ್ಕಾರ ಸಹಭಾಗಿತ್ವದಲ್ಲಿ ಈ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆಗಳಿದ್ದು, ಸರ್ಕಾರದೊಂದಿಗೆ ಒಪ್ಪಂದವಾದರೆ ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ಈ ಪರೀಕ್ಷೆ ದೊರೆಯಲಿದೆ.

ಗ್ರಾಮೀಣ ಭಾಗಗಳಲ್ಲಿ ಜನರು ತಂಬಾಕು, ಗುಟ್ಕ, ಬೀಡಿ, ಮದ್ಯಪಾನದಂತಹ ಅಭ್ಯಾಸಗಳಿಗೆ ಒಳಗಾದ ಪರಿಣಾಮ ಬಾಯಿ ಕ್ಯಾನ್ಸರ್‌ ಹೆಚ್ಚು ಕಾಣಿಸಿಕೊಳ್ಳುತ್ತದೆ. ಆದರೆ, ಆರಂಭಿಕ ಹಂತದಲ್ಲಿ ಅದು ತಿಳಿಯುವುದಿಲ್ಲ. ಬದಲಿಗೆ ಕೊನೆಯ ಹಂತದಲ್ಲಿ ನೋವು ಕಾಣಿಸಿಕೊಂಡ ಆಸ್ಪತ್ರೆಗೆ ಹೋದಾಗ ಕ್ಯಾನ್ಸರ್‌ ಇರುವುದು ತಿಳಿಯುತ್ತದೆ.

ಈ ಹಂತದಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಜತೆಗೆ ಚಿಕಿತ್ಸೆ ಯಶಸ್ವಿಯಾದರೂ ಮುಖ ವಿಕಾರವಾಗುತ್ತದೆ. ಆ ಹಿನ್ನೆಲೆಯಲ್ಲಿ ಕಡಿಮೆ ದರದಲ್ಲಿ ಗ್ರಾಮೀಣ ಭಾಗದ ಜನರಿಗೆ ಪರೀಕ್ಷೆ ನಡೆಸಲು ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸ್ಥೆಯ ಸಹ ಸಂಸ್ಥಾಪಕಿ ರಿಝ್ಮಾ ತಿಳಿಸಿದರು.

Comments are closed.