ಕರ್ನಾಟಕ

ವಾಟ್ಸ್​​ಆ್ಯಪ್​ ಸುರಕ್ಷಿತವಲ್ಲ

Pinterest LinkedIn Tumblr


ಬೆಂಗಳೂರು: ಜಗತ್ತಿನಾದ್ಯಂತ ತಂತ್ರಜ್ಞಾನ ಶರವೇಗದಲ್ಲಿ ಸಾಗುತ್ತಿದೆ. ತಂತ್ರಜ್ಞಾನದ ಉನ್ನತಿಯ ಜತೆಜತೆಗೆ ಮಾನವನ ಖಾಸಗೀಯತೆ ಕ್ಷೀಣಿಸುತ್ತಾ ಸಾಗಿದೆ. ಇವತ್ತಿನ ಡಿಜಿಟಲ್​ ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಖಾಸಗಿ ವಿಚಾರಗಳು ಸಾರ್ವಜನಿಕ ಆಸ್ತಿಯಾಗುತ್ತಾ ಸಾಗುತ್ತಿದೆ.

ದಿನೇದಿನೇ ಹ್ಯಾಕರ್​​ಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಹಳ್ಳಿ ಹೈದನಿಂದ ಹಿಡಿದು ನಗರದ ಪ್ರತಿಷ್ಠಿತ ಶ್ರೀಮಂತರವರೆಗೂ ಫೇಸ್ಬುಕ್​​​, ವಾಟ್ಸ್​ಆ್ಯಪ್​​​ ಬಳಸುತ್ತಿದ್ದಾರೆ. ಬಳಕೆದಾರರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರೈಮ್​​ಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇವೆ. ಆದರೆ ಇಷ್ಟು ದಿನಗಳ ಕಾಲ ಎಲ್ಲರಲ್ಲೂ ಇದ್ದ ಒಂದೇ ಒಂದು ನಂಬಿಕೆ ಎಂದರೆ, ವಾಟ್ಸ್​ಆ್ಯಪ್​ ಕಾಲ್​ ಮತ್ತು ವಾಟ್ಸ್​ಆ್ಯಪ್​ ಚಾಟ್​ಗಳನ್ನು ಹ್ಯಾಕ್​ ಮಾಡಲು ಸಾಧ್ಯವಿಲ್ಲ. ಆದರೆ ಈ ನಂಬಿಕೆಯೂ ಈಗ ಹುಸಿಯಾಗಿದೆ.

ಇಷ್ಟು ದಿನ ಫೇಸ್‌ಬುಕ್ ಅನ್ನು ಬೆನ್ನು ಬಿಡದಂತೆ ಕಾಡಿದ್ದ ಹ್ಯಾಕರ್‌ಗಳ ಕಾಟ ಈಗ ವಾಟ್ಸ್‌ಆ್ಯಪ್ ಮೇಲೆ ಬಿದ್ದಂತಿದೆ. ಇದರಿಂದ ಆಘಾತಕ್ಕೊಳಗಾದ ಜನರಲ್ಲಿ ವಾಟ್ಸ್‌ಆ್ಯಪ್ ನಮಗೆ ಸೇಫ್ ಇದೆಯೇ, ಇಲ್ಲವೇ? ಎಂಬ ಪ್ರಶ್ನೆ ಹುಟ್ಟಿಸಿದೆ. ಈ ವಿಚಾರದ ಬಗ್ಗೆ ಮಾಧ್ಯಮಗಳು ನಿರಂತರವಾಗಿ ಸುದ್ದಿ ಮಾಡುತ್ತಲೇ ಬಂದಿವೆ. ಈ ಬೆನ್ನಲ್ಲೇ ಇದೀಗ ವಾಟ್ಸ್​ಆ್ಯಪ್​​​​ ಹ್ಯಾಕಿಂಗ್​​​ ಬಗ್ಗೆ ಇಸ್ರೇಲ್​​ ಸರ್ಕಾರ ಇಷ್ಟು ದಿನ ಯಾರಿಗೂ ತಿಳಿಯದ ರಹಸ್ಯ ಸಂಗತಿಗಳನ್ನು ಬೆಳಕಿಗೆ ತಂದಿದೆ.

ವಾಟ್ಸ್‌ಆ್ಯಪ್ ಹ್ಯಾಕಿಂಗ್​​ ವಿಚಾರದ ಸುತ್ತ ಚರ್ಚೆ ನಡೆಯುತ್ತಿದಂತೆಯೇ​ ಇಸ್ರೇಲ್ ರಾಷ್ಟ್ರೀಯ ಸೈಬರ್ ಭದ್ರತಾ ಪ್ರಾಧಿಕಾರ ಎಚ್ಚೆತ್ತುಕೊಂಡಿತ್ತು. ಬಳಿಕ ಇಸ್ರೇಲ್​​ ಅಧಿಕಾರಿಗಳು ಹ್ಯಾಕಿಂಗ್​​​ ಜಾಲವನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಈ ವೇಳೆ ಹ್ಯಾಕರ್​​​ಗಳು ಹೇಗೆ ವಾಟ್ಸ್​ಆ್ಯಪ್​​​​ ಹ್ಯಾಕ್​​ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ವಿದೇಶಿ ನ್ಯೂಸ್​​ ವೆಬ್​​ ಪೋರ್ಟಲ್​​​ವೊಂದು​ ವರದಿ ಮಾಡಿದೆ.

ವಾಟ್ಸ್‌ಆ್ಯಪ್ ಹ್ಯಾಕ್ ಬಗ್ಗೆ ವರದಿ:

‘ZDNet’ ಎಂಬ ವೆಬ್​​ ಪೋರ್ಟಲ್​​​ ಮಾಡಿದ ವರದಿ ಪ್ರಕಾರ, ಮೊಬೈಲ್ ಸರ್ವೀಸ್​ ಪ್ರೊವೈಡರ್​ಗಳನ್ನು ಬಳಸಿ ವಾಟ್ಸ್‌ಆ್ಯಪ್​ ಅನ್ನು ಹ್ಯಾಕ್​ ಮಾಡಲಾಗುತ್ತಿದೆ. ಹ್ಯಾಕರ್​ಗಳು ಮೊದಲು ವಾಯ್ಸ್​ಮೇಲ್​ಗಳನ್ನು ಟಾರ್ಗೆಟ್​​ ಮಾಡುತ್ತಾರೆ. ಬಳಿಕ ಅದನ್ನೇ ಗುರಿಯಾಗಿಸಿಕೊಂಡು, ಯಾರು ಡಿಫಾಲ್ಟ್​ ಸೆಕ್ಯುರಿಟಿ ಕೋಡ್​​ ಬದಲಿಸಿರುವುದಿಲ್ಲವೋ, ಅಂತವರಿಗೇ ಗಾಳ ಹಾಕುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹ್ಯಾಕ್ ಆಗುತ್ತಿರುವುದು ಹೇಗೆ?:

ವಾಟ್ಸ್‌ಆ್ಯಪ್ ಬಳಕೆದಾರರ ಫೋನ್ ನಂಬರ್‌ ಕದಿಯುವ ಹ್ಯಾಕರ್‌ಗಳು, ತುಂಬಾ ಸಿಂಪಲ್​​ ಆಗಿ ಎಲ್ಲವನ್ನು ಮುಗಿಸಿಬಿಡುತ್ತಾರೆ. ಮೊದಲು ಬಳಕೆದಾರರ ನಂಬರ್‌ನಿಂದ ಮತ್ತೊಂದು ಖಾತೆಗೆ ವೆರಿಫೈ ಮಾಡಲು ಯತ್ನಿಸುತ್ತಾರೆ. ಈ ವೇಳೆ, ಹ್ಯಾಕರ್ ತಪ್ಪಾದ ಕೋಡ್​ವೊಂದನ್ನು ನಮೂದಿಸುತ್ತಾರೆ. ಹಲವಾರು ಬಾರಿ ತಪ್ಪು ಕೋಡ್​ಗಳನ್ನು ಟೈಪ್​​ ಮಾಡಿದ ಕೂಡಲೇ ವಾಟ್ಸ್‌ಆಪ್ ವಾಯ್ಸ್ ಮೇಲ್​ ಮೂಲಕ ಪಾಸ್​ವರ್ಡ್​ ಕದಿಯಬಹುದಾಗಿದೆ.

ರಾತ್ರಿ ವೇಳೆ ಹ್ಯಾಕಿಂಗ್​ ಸಾಧ್ಯತೆ ಹೆಚ್ಚು:

ನೀವು ಸಾಮಾನ್ಯವಾಗಿ ಮಲಗಿರುವಾಗ ಹ್ಯಾಂಕಿಗ್​​ ಸಾಧ್ಯತೆ ಹೆಚ್ಚು. ಹ್ಯಾಕರ್​​ಗಳು ಹಲವು ಬಾರಿ ತಪ್ಪಾದ ಕೋಡ್​ವೊಂದನ್ನು ನಮೂದಿಸುತ್ತಾರೆ. ಇದು ಸುಲಭವಾಗಿ ಹ್ಯಾಕ್​​ ಮಾಡಲು ಸಹಕಾರಿಯಾಗುತ್ತದೆ. ಸರಿಯಾದ ಕೋಡ್ ಒತ್ತಿದರೆ​ ನಿಮಗೆ ಗೊತ್ತಾಗುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ನೀವು ಮೊಬೈಲ್​ ಎತ್ತಿಟ್ಟು ಮಲಗಿರುವಾಗಲೇ ವಾಯ್ಸ್​ಮೇಲ್ ಮೂಲಕ ಪಾಸ್​ವರ್ಡ್​ನ್ನು ಸುಲಭವಾಗಿ ಪಡೆಯುತ್ತಾರೆ.

ಡಿಫಾಲ್ಟ್​ ಪಿನ್ ಹ್ಯಾಕ್: ಹ್ಯಾಕರ್​ಗಳು ಈ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಡಿಫಾಲ್ಟ್​ನಲ್ಲಿರುವ ಬಳಕೆದಾರರ ಖಾತೆಯ ಪಿನ್​ಗಳನ್ನು ಹ್ಯಾಕ್ ಮಾಡುತ್ತಾರೆ. ​ಸಾಮಾನ್ಯವಾಗಿ 0000 ಅಥವಾ 1234 ಪಾಸ್​ವರ್ಡ್​ ಇರುತ್ತದೆ. ಈ ರೀತಿಯ ಪಾಸ್​ವರ್ಡ್​ ಅನ್ನು ರಿಕವರ್​ ಮಾಡುವ ಮೂಲಕ ವಾಟ್ಸ್‌ಆ್ಯಪ್​ಗಳನ್ನು ಹ್ಯಾಕ್ ಮಾಡಬಹುದಾಗಿದೆ ಎನ್ನಲಾಗಿದೆ.

ಹ್ಯಾಕಿಂಗ್​ನಿಂದ ಏನು ಲಾಭ?:

ಹ್ಯಾಕರ್​ಗಳು ನಿಮ್ಮ ಅಕೌಂಟ್​ಗಳನ್ನು ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಬಳಕೆದಾರರ ಖಾಸಗಿ ಮಾಹಿತಿಗಳು ಕದಿಯುತ್ತಾರೆ. ಈ ಮೂಲಕ ನಿಮಗೆ ಬೆದರಿಕೆ ಹಾಕುತ್ತಾರೆ. ವಾಟ್ಸ್‌ಆ್ಯಪ್‌ನಲ್ಲಿ ನಿಮ್ಮ ಮಾಹಿತಿ ಅವರಿಗೆ ಸಿಕ್ಕರೆ ಮತ್ತಷ್ಟು ಸಂಕಷ್ಟವನ್ನು ನೀವು ಅನುಭವಿಸಬೇಕಾಗುತ್ತದೆ.

ಸುರಕ್ಷತೆಗಾಗಿ ಇದನ್ನು ಫಾಲೋ ಮಾಡಿ:

ನಿಮ್ಮ ವಾಟ್ಸ್​ಆ್ಯಪ್​​​ ಅನ್ನು ಎಚ್ಚರಿಕೆಯಿಂದ ಬಳಸಿ. ಪ್ರತಿ ವಾರಕ್ಕೊಮ್ಮೆ ಡಿಫಾಲ್ಟ್​ ಸೆಕ್ಯೂರಿಟಿ ಕೋಡ್​​ ಬದಲಾಯಿಸಿ. ಮಲಗುವಾಗ ಮೊಬೈಲ್​​ ನಿಮ್ಮ ಬಳಿಯೇ ಇರಲಿ. ಇದೆಲ್ಲದರ ಹೊರತಾಗಿ ಯಾರ ಕೈಗೂ ನಿಮ್ಮ ಮೈಬೈಲ್​​ ಕೊಡಬೇಡಿ. ಹಾಗಿದ್ದಲ್ಲಿ ಮಾತ್ರ ವಾಟ್ಸ್​ಆ್ಯಪ್​​ ಹಾಕಿಂಗ್​ನಿಂದ ಪಾರಾಗಬಹುದು.

Comments are closed.