ಕರ್ನಾಟಕ

ಎಸ್‍ಪಿ ನಿವಾಸದಲ್ಲಿ ಪೇದೆ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು!

Pinterest LinkedIn Tumblr


ಬಾಗಲಕೋಟೆ: ಎಸ್‍ಪಿ ನಿವಾಸದ ಎದುರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಪೇದೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಿಟ್ಟಲಕೋಡಯ ಪೇದೆ ಮಂಜುನಾಥ್ ಹರಿಜನ್ (28) ಆತ್ಮಹತ್ಯೆ ಮಾಡಿಕೊಂಡಿದ್ದರು. ಮಂಜುನಾಥ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಅವರ ಜೇಬಿನಲ್ಲಿ ಡೆತ್ ನೋಟ್ ಸಿಕ್ಕಿದೆ. ಹನಮಪ್ಪ ಮಾದರ್ ಹಾಗೂ ಮರಿಯಪ್ಪ ಮಾದರ್ ಎಂಬರ ಹೆಸರನ್ನು ಉಲ್ಲೇಖಿಸಿ ಅವರಿಂದಾಗಿಯೇ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

ಪತ್ರವನ್ನು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಹೆಸರಿಗೆ ಬರೆದಿದ್ದು, ಇಲಾಖೆಯ ಅಧಿಕಾರಿಗಳಿಂದ ಯಾವುದೇ ಕಿರುಕುಳವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಾನು ಜೀವ ಬೆದರಿಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ ಎಂದು ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?:
ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ. ಬಂದು ಹೋಗುವ ನಡುವೆ ಬರೀ ಕತ್ತಲೆ. ನನಗೆ ನಾನೇ ವೈರಿಯಾಗಿ ಗುಂಡು ಹಾರಿಸಿಕೊಂಡಿದ್ದೇನೆ. ಪೊಲೀಸ್ ಇಲಾಖೆಯಲ್ಲಿ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳು ಎಲ್ಲ ರೀತಿಯಿಂದಲೂ ಸಹಕಾರ ನೀಡಿದ್ದರು. ನನ್ನ ಮುಗ್ಧ ಮನಸ್ಥಿಯ ತಂದೆ ತಾಯಿಗೆ ಕ್ಷಮೆ ಕೋರುತ್ತೇನೆ.

ನನಗೆ ಶನಿಯಾಗಿ ಕಾಡಿದ್ದು ಹನಮಪ್ಪ ಮಾದರ್ ಹಾಗೂ ಮರಿಯಪ್ಪ ಮಾದರ್. ಇವರು ನನ್ನ ಜೀವನದಲ್ಲಿ ಆಟವಾಡಿದರು. ನನ್ನ ತಂದೆಯ ಆಸ್ತಿಯನ್ನು ಪಡೆಯಲು ಕೊಲೆ ಬೆದರಿಕೆ ಹಾಕಿದ್ದರು. ಇದರಿಂದಾಗಿ ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ.

ಏನಿದು ಪ್ರಕರಣ?:
ಆತ್ಮಹತ್ಯೆ ಮಾಡಿಕೊಂಡಿರುವ ಮಂಜುನಾಥ್ ಹರಿಜನ್ ಅವರು ಕಳೆದ ಒಂದೂವರೆ ವರ್ಷದಿಂದ ಬಾಗಲಕೋಟೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬಾಗಲಕೋಟೆಯ ಎಸ್‍ಪಿ ಸಿ.ಬಿ ರಿಷ್ಯಂತ್ ನಿವಾಸಕ್ಕೆ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ಎಸ್‍ಪಿ ಅವರ ಮನೆ ಎದುರೇ ಕರ್ತವ್ಯಕ್ಕೆಂದು ಇಂದು ರೈಫಲ್ 303 ನೀಡಲಾಗಿತ್ತು. ಈ ವೇಳೆ ಮಂಜುನಾಥ್ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಡೆತ್ ನೋಟ್‍ನಲ್ಲಿ ಗೊಂದಲ:
ಹನುಮಪ್ಪ, ಮರಿಯಪ್ಪ ಹಾಗೂ ಮಂಜುನಾಥ್ ತಂದೆ ಮೂಲತಃ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಿಟ್ಟಲಕೋಡಯ ಗ್ರಾಮದವರು. ಆದರೆ ಅಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡಿ ಗೂಡುರಿನಲ್ಲಿ ಆಸ್ತಿಯನ್ನು ಮಾಡಿದ್ದರು. ಮಂಜುನಾಥ್ ಪಾಲಿಗೆ ಬರುತ್ತಿದ್ದ ಆಸ್ತಿಯನ್ನು ಕೊಡಲು ಚಿಕ್ಕಪ್ಪರಾದ ಹನಮಪ್ಪ, ಮರಿಯಪ್ಪ ನಿರಾಕರಿಸಿದ್ದರಂತೆ. ಇತ್ತ ಮಂಜುನಾಥ್ ಕೂಡ ಮಾನಸಿಕವಾಗಿ ಅಸ್ವಸ್ಥವಾಗಿದ್ದರು ಎನ್ನುಲಾಗಿದ್ದು, ಅವರ ತಂದೆ ಹೆಸರು ಹನುಮಪ್ಪ. ಆದರೂ ಪತ್ರದಲ್ಲಿ ಚಿಕ್ಕಪ್ಪ ಎಂದು ಬರೆದಿದ್ದಾರೆ ಎಂದು ತನಿಖೆಯ ವೇಳೆ ತಿಳಿದು ಬಂದಿಗೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Comments are closed.