ಕರ್ನಾಟಕ

ಜಯಪ್ರದಾ ಕೆಂಡಾಮಂಡಲ; ದರ್ಶನ್ ಕೋಪತಾಪ

Pinterest LinkedIn Tumblr


ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ಅವರು ಅನಿರೀಕ್ಷಿತವಾಗಿ ಸಾವನ್ನಪ್ಪಿದ ಕ್ಷಣದಿಂದ ಹಿಡಿದು ಅವರ ಅಂತ್ಯಕ್ರಿಯೆವರೆಗೂ ಸರಕಾರ ಅಚ್ಚುಕಟ್ಟಾಗಿ ಪರಿಸ್ಥಿತಿ ನಿಭಾಯಿಸಿತು. ಎಲ್ಲಿಯೂ ಅವಘಡವಾಗದಂತೆ ಎಚ್ಚರ ವಹಿಸಿತು. ಅಷ್ಟಾದರೂ ಅಲ್ಲಲ್ಲಿ ಒಂದಷ್ಟು ಪ್ರತಿಭಟನೆ, ನೋವಿನ, ಕೋಪದ ಕ್ಷಣಗಳು ಉದ್ಭವಿಸಿದವು. ಕಂಠೀರವ ಸ್ಟುಡಿಯೋದ ಆವರಣ ಹಾಗೂ ಸುತ್ತಮುತ್ತ ಅಂಬರೀಷ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬರೋಬ್ಬರಿ 15 ಸಾವಿರದಷ್ಟು ಅಭಿಮಾನಿಗಳು ನೆರೆದಿದ್ದರು. ದೇಶಾದ್ಯಂತ ಅಂಬಿ ಗೆಳೆಯರು, ಬಂಧು-ಬಳಗ, ಹಿತೈಷಿ, ಅಭಿಮಾನಿಗಳು ನೆರೆದಿದ್ದರು. ಎಲ್ಲವೂ ಸರಾಗವಾಗಿ ಅಂತ್ಯಗೊಂಡು ಜನರು ತಮ್ಮ ಮನೆಗಳಿಗೆ ವಾಪಸ್ಸಾಗ ತೊಡಗಿದಾಗ ಒಂದಷ್ಟು ಗದ್ದಲ, ಗೋಜಲು ಪ್ರಸಂಗಗಳು ಎದುರಾದವು. ಈ ವೇಳೆ, ಅಂಬರೀಷ್ ಅವರ ಜೊತೆ ನಾಯಕಿಯಾಗಿ ನಟಿಸಿದ್ದ ಬಹುಭಾಷಾ ತಾರೆ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರು ಡಿಸಿಪಿ ಅಣ್ಣಾಮಲೈ ಮೇಲೆ ಕೆಂಡಾಮಂಡಲವಾದ ಪ್ರಸಂಗ ಗಮನ ಸೆಳೆಯಿತು.

ಸಾವಿರಾರು ಜನರು ಒಮ್ಮೆಲೇ ಜಾಗ ಖಾಲಿ ಮಾಡುವಾಗ ನೂಕು ನುಗ್ಗಲು ಇರುವುದು ಸಹಜ. ಈ ವೇಳೆ, ಜಯಪ್ರದಾ ಅವರು ತಮ್ಮ ಕಾರಿನಿಂದ ಹೊರಬಂದಿದ್ದಾರೆ. ಆಗ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಜಯಪ್ರದಾಗೆ ಕಾರಿನಲ್ಲಿ ಕೂರುವಂತೆ ಕೇಳಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಜಯಪ್ರದಾ, ಮಾಜಿ ಸಂಸದೆಯಾಗಿರುವ ತನ್ನತ್ತ ಒಬ್ಬ ಡಿಸಿಪಿ ಕೈಮಾಡಿ ತಿಳಿಸುವುದು ಎಷ್ಟು ಸರಿ ಎಂದು ವ್ಯಗ್ರಗೊಂಡಿದ್ದಾರೆ. ಅಣ್ಣಾಮಲೈ ಮೇಲೆ ಜಯಪ್ರದಾ ಕೂಗಾಡಿದ್ದೂ ಆಯಿತು.

ಇನ್ನು, ನಟ ದರ್ಶನ್ ಕೂಡ ಪೊಲೀಸರ ಮೇಲೆ ಕೋಪಗೊಂಡ ಘಟನೆಯೂ ನಡೆಯಿತು. ಪೊಲೀಸರು ಸರಿಯಾಗಿ ಟ್ರಾಫಿಕ್ ನಿಭಾಯಿಸುತ್ತಿಲ್ಲ, ವಾಹನ ಸಂಚಾರಕ್ಕೆ ಸರಿಯಾಗಿ ದಾರಿ ಮಾಡಿಕೊಡುತ್ತಿಲ್ಲವೆಂದು ಚಾಲೆಂಜಿಂಗ್ ಸ್ಟಾರ್ ಕೂಗಾಡಿದರು.

ಅಂಬರೀಷ್ ಅಂತ್ಯಕ್ರಿಯೆಗೂ ಮುನ್ನ ಅವರ ದರ್ಶನ ಮಾಡಿ ಅಂತಿಮ ನಮನ ಸಲ್ಲಿಸಲು ಕೆಲ ನಟರಿಗೆ ಅವಕಾಶ ಸಿಗಲಿಲ್ಲ. ಇದರಿಂದ ಕೋಪಗೊಂಡ ಗೋಲ್ಡನ್ ಸ್ಟಾರ್ ಗಣೇಶ್, ಜೈಜಗದೀಶ್, ರಂಗಾಯಣ ರಘು, ರವಿಶಂಕರ್ ಅವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಘಟನೆಯೂ ಆಯಿತು. ಸಾವಿರಾರು ಜನರು, ಅದರಲ್ಲೂ ಅಭಿಮಾನಿಗಳು ಸೇರುವ ಇಂತಹ ಸಂದರ್ಭಗಳಲ್ಲಿ ಈ ರೀತಿಯ ಘಟನೆಗಳನ್ನು ತಡೆಯಲು ಬಹುತೇಕ ಅಸಾಧ್ಯ.

ಅಂತ್ಯಕ್ರಿಯೆ ವೇಳೆ ಜನರ ತಳ್ಳಾಟ, ಕೂಗಾಟದ ನಡುವೆ ಕೆಲವರು ನಿತ್ರಾಣಗೊಂಡರು. ಸಾವಾದಾಗಿನಿಂದಲೂ ದುಃಖತಪ್ತರಾಗಿದ್ದ ಅಂಬರೀಷ್ ಅವರ ಪತ್ನಿ ಸುಮಲತಾ ಅವರಂತೂ ಅಂತ್ಯಕ್ರಿಯೆ ಹೊತ್ತಿಗೆ ಅಸ್ವಸ್ಥಗೊಂಡು ಕುಸಿದರು. ಅಂಬಿ ಕುಟುಂಬದ ಒಂದಿಬ್ಬರು ಮಹಿಳೆಯರೂ ನಿತ್ರಾಣಗೊಂಡು ಕುಸಿದ ಘಟನೆ ನಡೆಯಿತು.

ಜನರ ತಳ್ಳಾಟದಲ್ಲಿ ಕಂಠೀರವ ಸ್ಟುಡಿಯೋದ ಕಟ್ಟಡದ ಮೇಲಿಂದ ಅಂಬರೀಷ್ ಅಭಿಮಾನಿಯೊಬ್ಬರು ಬಿದ್ದು ತೀವ್ರ ಗಾಯಗೊಂಡರು. ಹಾಗೆಯೇ, ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕಾಲಿಗೆ ಪೆಟ್ಟು ಬಿದ್ದಿತು.

ಅಂಬಿ ಅಭಿಮಾನಿಗಳ ಒತ್ತಾಯ:

ಅಂಬರೀಷ್ ಮತ್ತು ವಿಷ್ಣುವರ್ಧನ್ ಕುಚುಕು ಗೆಳೆಯರಾದ್ದರಿಂದ ವಿಷ್ಣು ಸಮಾಧಿ ಪಕ್ಕದಲ್ಲೇ ಅಂಬಿ ಅಂತ್ಯಕ್ರಿಯೆ ನೆರವೇರಿಸಿ ಸಮಾಧಿ ನಿರ್ಮಿಸಬೇಕೆಂಬುದು ಅಂಬಿ ಅಭಿಮಾನಿಗಳ ಒತ್ತಾಯವಾಗಿತ್ತು. ಆದರೂ ಸರಕಾರ ಬೇರೆ ಬೇರೆ ಕಾರಣದಿಂದ ರಾಜ್​ಕುಮಾರ್ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲೇ ರೆಬೆಲ್ ಸ್ಟಾರ್ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಿತು. ಇದು ಅಂಬಿ ಅಭಿಮಾನಿಗಳಿಗೆ ತುಸು ಬೇಸರ ತಂದಿದ್ದು ಹೌದು. ವಿಷ್ಣು ಸಮಾಧಿ ಸ್ಥಳ ಇರುವ ಅಭಿಮಾನ್ ಸ್ಟುಡಿಯೋದಲ್ಲೇ ಅಂಬಿ ಅವರನ್ನೂ ಸಮಾಧಿ ಮಾಡಬೇಕೆಂಬುದು ಅವರ ಬಯಕೆಯಾಗಿತ್ತು. ಆದರೆ, ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದ ಒಂದಾಗಿದ್ದ ಕುಚುಕು ಗೆಳೆಯರು ಸಾವಿನಲ್ಲಿ ಮಾತ್ರ ಬೇರೆಯಾದಂತಾಯಿತು.

Comments are closed.