ಕರ್ನಾಟಕ

ಬಳ್ಳಾರಿ ರೈತರಿಗೆ ಭತ್ತ ಬೆಳೆಯಬೇಡಿ ಎಂದು’ ಡಂಗುರ ಹೊಡೆಸಿದ ತುಂಗಭದ್ರ ಜಲಾಶಯ ಮಂಡಳಿ: ಕಾವಲು ನಿಂತ ಆಂಧ್ರ ಪೊಲೀಸ್

Pinterest LinkedIn Tumblr


ಬಳ್ಳಾರಿ: ಕಳೆದ ಮೂರು ವರುಷಗಳ ಬರಗಾಲದಿಂದ ಬಸವಳಿದಿರುವ ಬಳ್ಳಾರಿ ರೈತರಿಗೆ ಇದೀಗ ಮತ್ತೊಂದು ಬರೆ ಎಳೆಯಲಾಗಿದೆ. ತುಂಗಭದ್ರ ಜಲಾಶಯದ ನೀರನ್ನೇ ನೆಚ್ಚಿಕೊಂಡು ಭತ್ತ ಬೆಳೆಯುತ್ತಿದ್ದ ರೈತರಿಗೆ ಇನ್ನಷ್ಟು ಸಂಕಷ್ಟ ಶುರುವಾಗಿದೆ. ನಮ್ಮ ರಾಜ್ಯದ ರೈತರಿಗೆ ನೆರೆಯ ಆಂಧ್ರ ಪೊಲೀಸರು ಬಂದು ಎಚ್ಚರಿಕೆ ನೀಡುತ್ತಿದ್ದಾರೆ. ಸಾಲದಕ್ಕೆ ಭತ್ತ ಬೆಳೆಯಬೇಡಿ ಎಂದು ಡಂಗೂರು ಹೊಡೆಸುತ್ತಿದ್ದಾರೆ.

ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ತುಂಗಭದ್ರ ಜಲಾಶಯವನ್ನು ನಂಬಿದ ಅಚ್ಚುಕಟ್ಟು ರೈತರ ಮೇಲೆ ನೆರೆಯ ಆಂಧ್ರ ಪೊಲೀಸರು ದರ್ಪ ಮೆರೆಯುತ್ತಿದ್ದಾರೆ. ನಮ್ಮ ರಾಜ್ಯದ ರೈತರಿಗೆ ನಮ್ಮ ಪೊಲೀಸರು ರಕ್ಷಣೆ ನೀಡೋದು ನೋಡಿದಿವಿ. ಆದರೆ ನಮ್ಮ ರೈತರಿಗೆ ನೆರೆಯ ಆಂಧ್ರಪ್ರದೇಶದ ಸರ್ಕಾರದ ಪೊಲೀಸರು ಬಳ್ಳಾರಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಓಡಾಡುತ್ತಿದ್ದಾರೆ.

ಬಳ್ಳಾರಿ, ಕಂಪ್ಲಿ ಹಾಗೂ ಸಿರುಗುಪ್ಪ ತಾಲೂಕಿನ ಅಚ್ಚುಕಟ್ಟು ಭಾಗದ ರೈತರಿಗೆ ಭತ್ತ ಬೆಳೆಯಬೇಡಿ ಎಂದು ತುಂಗಭದ್ರ ಜಲಾಶಯ ಮಂಡಳಿ ಡಂಗುರು ಹೊಡೆಸಿದ್ದಾರೆ. ಡಂಗೂರು ಹೊಡೆಯುವವನ ರಕ್ಷಣೆಗೆ ನೆರೆಯ ಆಂಧ್ರ ಪೊಲೀಸರು ಟೊಂಕ ಕಟ್ಟಿಕೊಂಡು ನಿಂತಿದ್ದಾರೆ. ಇಷ್ಟು ಮಾತ್ರವಲ್ಲ ಹರಿಯುವ ಎಲ್​ಎಲ್ ಸಿ ಕಾಲುವೆ ನೀರು ಗಸ್ತು ತಿರುಗುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನಮಗೇನು ಗೊತ್ತಿಲ್ಲ, ಎರಡನೇ ಬೆಳೆಗೆ ಭತ್ತ ಬೆಳೆಯಬೇಡಿ ಎಂದು ಡಂಗೂರ ಹೊಡೆಸುತ್ತಿದ್ದಾರಂತೆ.

ತುಂಗಭದ್ರ ಜಲಾಶಯದ ನೀರನ್ನು ಕರ್ನಾಟಕ, ನೆರೆಯ ತೆಲುಗು ರಾಜ್ಯಗಳಾದ ಆಂಧ್ರ ಹಾಗೂ ತೆಲಂಗಾಣ ಹಂಚಿಕೊಳ್ಳುತ್ತಾರೆ. ಶೇ. 65 ರಾಜ್ಯದವರು ಬಳಸಿದರೆ, ಶೇ.35ರಷ್ಟು ನೀರನ್ನು ತೆಲುಗು ದೇಶದ ರೈತರು ಬಳಸುತ್ತಾರೆ. ಕಳೆದ ಮೂರು ವರುಷಗಳಿಂದ ತುಂಗಭದ್ರ ಜಲಾಶಯ ತುಂಬಿದ್ದಿಲ್ಲ. ಆದರೆ ಈ ವರುಷ ಮಲೆನಾಡಿನಲ್ಲಿ ಉತ್ತಮ ಮಳೆ ಕಾರಣ ಜಲಾಶಯ ಭರ್ತಿಯಾಗಿ ಹೆಚ್ಚುವರಿಯಾಗಿ ನೂರಕ್ಕೂ ಹೆಚ್ಚು ಟಿಎಂಸಿ ನೆರೆಯ ಆಂಧ್ರಕ್ಕೆ ನದಿ ಹಾಗೂ ಕಾಲುವೆ ಮೂಲಕ ಹರಿಬಿಡಲಾಗಿದೆ.

ಸದ್ಯ ಜಲಾಶಯದಲ್ಲಿ 52 ಟಿಎಂಸಿ ನೀರಿದ್ದು, ಲಭ್ಯವಿರುವ ನೀರಿನಲ್ಲಿ ಬೇಸಿಗೆ ಕಾಲದ ಎರಡನೇ ಭತ್ತ ಬೆಳೆ ಬೆಳೆಯಲು ಆಗುವುದಿಲ್ಲ ಎಂದು ಐಸಿಸಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಸತತ ಬರಗಾಲ ಅನುಭವಿಸಿರುವ ಅಚ್ಚುಕಟ್ಟು ರೈತರು ಕಳೆದ ವರ್ಷ ಭತ್ತವನ್ನೇ ಬೆಳೆಯಲು ಆಗಿದ್ದಿಲ್ಲ. ಈ ವರ್ಷವಾದರೂ ಎರಡು ಬೆಳೆ ಬೆಳೆಯೋಣವೆಂದರೆ ಐಸಿಸಿ ಸಭೆ ನಿರ್ಣಯ ಹಾಗೂ ನಮ್ಮ ರಾಜ್ಯದ ಹಳ್ಳಿಗಳಿಗೆ ಟಿ ಬಿ ಬೋರ್ಡ್ ಡಂಗೂರ ಹೊಡೆಸಿ, ಅವರ ರಕ್ಷಣೆಗೆ ಆಂಧ್ರ ಪೊಲೀಸರು ಓಡಾಡುತ್ತಿರುವುದು ರಾಜ್ಯದ ರೈತರು ಆಕ್ರೋಶಕ್ಕೆ ಕಾರಣವಾಗಿದೆ.

ಎಲ್ ಎಲ್ ಸಿ ಕಾಲುವೆ ಬಳ್ಳಾರಿಯ ಕಂಪ್ಲಿ, ಸಿರುಗುಪ್ಪ ಹಾಗೂ ಬಳ್ಳಾರಿ ತಾಲೂಕಿನಿಂದ ಹಾದುಹೋಗಿ ನೆರೆಯ ಆಂಧ್ರಕ್ಕೆ ತಲುಪುತ್ತದೆ. ರಾಜ್ಯದಲ್ಲಿ ರೈತರು ಎರಡನೇ ಭತ್ತ ಬೆಳೆಯಲು ಮುಂದಾದರೆ ಆಂಧ್ರ ರೈತರಿಗೆ ನೀರು ತಲುಪುವುದಿಲ್ಲ, ನಮಗೆ ಕಷ್ಟವಾಗುತ್ತದೆ ಎನ್ನುವುದು ಆಂಧ್ರ ರೈತರ ಅಭಿಮತ.

ಇಲ್ಲಿಯವರೆಗೂ ಬೇಡವೆಂದರೂ ಆಂಧ್ರಕ್ಕೆ ನೀರು ಬಿಟ್ಟು ಇದೀಗ ಎಲ್ ಎಲ್ ಸಿ ಕಾಲುವೆ ಭಾಗದ ರೈತರ ಮೇಲೆ ಟಿ ಬಿ ಬೋರ್ಡ್ ಆಂಧ್ರ ಪೊಲೀಸರಿಂದ ದರ್ಪ ತೋರಿಸುತ್ತಿರುವುದು ಎಷ್ಟು ಸರಿ ಎಂಬುದು ನೊಂದ ರೈತರ ಪ್ರಶ್ನೆ?

ಆಂಧ್ರ ಪೊಲೀಸರ ಡಂಗೂರ ವಿಚಾರವಾಗಿ ಮುಖ್ಯಮಂತ್ರಿ ಎಚ್​ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಮೊದಲ ಭತ್ತದ ಬೆಳೆ ಬೆಳೆಯಲು ತೊಂದರೆ ಮಾಡಿಲ್ಲ. ಎರಡನೇ ಬೆಳೆ ಬೆಳೆಯೋಕೆ ಹೊರಟಾಗ ಮಾಡಿದ್ದಾರೆ. ಹಾಗೆಲ್ಲ ರೈತರ ಮೇಲೆ ಮಾಡೋದು ಸರಿಯಲ್ಲ. ನಮ್ಮ ರಾಜ್ಯದ ರೈತರಿಗೆ ಹಾಗೇನಾದರೂ ಆದರೆ ರಕ್ಷಣೆ ಮಾಡುವುದು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.

Comments are closed.