ರಾಷ್ಟ್ರೀಯ

ಬೆಂಗಳೂರಿನ ಶೇ. 92 ರಷ್ಟು ಜನತೆಗೆ ಅಪಘಾತಕ್ಕೀಡಾದವರನ್ನು ಬಚಾವ್‌ ಮಾಡುವ ಗುಡ್‌ ಸಮರಿಟನ್ ಕಾನೂನಿನ ಅರಿವಿಲ್ಲ

Pinterest LinkedIn Tumblr


ಹೊಸದಿಲ್ಲಿ: ಅಪಘಾತಕ್ಕೀಡಾದವರನ್ನು ಬಚಾವ್‌ ಮಾಡುವ ಪರೋಪಕಾರಿಗಳಿಗೆ ನೆರವಾಗಲೆಂದು 2016ರಲ್ಲೇ ಗುಡ್ ಸಮರಿಟನ್ ಕಾನೂನು ಮಾಡಲಾಗಿದೆ. ಪೊಲೀಸರ ಕಿರುಕುಳ ಅಥವಾ ವಿಚಾರಣೆಯ ಭಯದಿಂದ ಅಪಘಾತಕ್ಕೀಡಾದವರಿಗೆ ಸಹಾಯ ಮಾಡಲು ಜನತೆ ಹಿಂದೇಟು ಹಾಕುವುದು ಬೇಡವೆಂಬುದೇ ಈ ಕಾನೂನಿನ ಉದ್ದೇಶವಾಗಿದೆ. ಆದರೆ, 10 ಭಾರತೀಯರ ಪೈಕಿ 8 ಮಂದಿಗೆ ಈ ಕಾನೂನಿನ ಅರಿವೇ ಇಲ್ಲ ಎಂಬುದು ಸರ್ವೇಯೊಂದರಲ್ಲಿ ಬದಲಾಗಿದೆ.

ಸೇವ್‌ಲೈಫ್‌ ಫೌಂಡೇಶನ್‌ ಎಂಬ ಲಾಭ ರಹಿತ ಸಂಸ್ಥೆ ದೇಶದ ಹಲವು ನಗರಗಳಲ್ಲಿ ಈ ಸರ್ವೇ ಕಾರ್ಯ ನಡೆಸಿದೆ. ಈ ಪೈಕಿ, ದಕ್ಷಿಣ ಭಾರತದ ಮೆಟ್ರೊ ನಗರದ ಜನತೆಗೆ ಗುಡ್ ಸಮರಿಟನ್ ಕಾನೂನಿನ ಬಗ್ಗೆ ಕಡಿಮೆ ತಿಳುವಳಿಕೆ ಇರುವುದು ಗಮನಕ್ಕೆ ಬಂದಿದೆ. ಸರ್ವೇಯಲ್ಲಿ ಭಾಗಿಯಾದ ಚೆನ್ನೈನ ಶೇ. 93ರಷ್ಟು ಜನತೆಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದರೆ, ಬೆಂಗಳೂರಿನ ಶೇ. 92ರಷ್ಟು ಹಾಗೂ ಹೈದರಾಬಾದ್‌ನ ಶೇ. 89 ರಷ್ಟು ಜನತೆಗೆ ಈ ಕಾನೂನಿನ ಅರಿವೇ ಇಲ್ಲ ಎಂಬುದು ಬೆಳಕಿಗೆ ಬಂದಿದೆ.

ಇನ್ನು, ಇಂದೋರ್‌ನಲ್ಲಿ ಅತಿ ಹೆಚ್ಚು ಅಂದರೆ ಶೇ. 29 ರಷ್ಟು ಜನತೆಗೆ ಈ ಪರೋಪಕಾರಿ ಕಾನೂನಿನ ಅರಿವಿದ್ದರೆ, ಜೈಪುರದ ಶೇ. 28 , ಮುಂಬಯಿಯ ಶೇ. 22 ಹಾಗೂ ಹೊಸದಿಲ್ಲಿಯ ಶೇ. 21ರಷ್ಟು ಜನತೆಗೆ ಗುಡ್ ಸಮರಿಟನ್ ಕಾನೂನಿನ ಅರಿವಿದೆ ಎನ್ನಲಾಗಿದೆ. ಆದರೆ, ಅಪಘಾತಕ್ಕೀಡಾದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ನೆರವಾಗಲು 2013ರಲ್ಲಿ ಶೇ. 26 ರಷ್ಟು ಜನತೆಗೆ ಮಾತ್ರ ಒಲವಿದ್ದರೆ, 2018ರಲ್ಲಿ ಶೇ. 88 ರಷ್ಟು ಜನತೆಗೆ ನೆರವಾಗಲು ಇಚ್ಛೆ ಇದೆ ಎಂಬ ವಿಚಾರದ ಬಗ್ಗೆ ಸರ್ವೇ ವರದಿ ನೀಡಿರುವುದು ಗಮನಾರ್ಹ. ಸಾಮಾನ್ಯ ನಾಗರಿಕರು, ಪರೋಪಕಾರಿಗಳು, ಪೊಲೀಸ್ ಅಧಿಕಾರಿಗಳು, ಆಸ್ಪತ್ರೆ ಆಡಳಿತ ಮಂಡಳಿ, ವೈದ್ಯಕೀಯ ವೃತ್ತಿಪರರು ಹಾಗೂ ವಿಚಾರಣಾ ನ್ಯಾಯಾಲಯದ ವಕೀಲರು ಸೇರಿ 3,667 ಜನತೆಯ ಸರ್ವೇ ಮಾಡಲಾಗಿತ್ತು.

ಈ ಪೈಕಿ, ಶೇ. 29 ರಷ್ಟು ಜನ ಮಾತ್ರ ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವುದಾಗಿ ಹೇಳಿದ್ದು, ಶೇ. 28 ರಷ್ಟು ಮಂದಿ ಆ್ಯಂಬುಲೆನ್ಸ್‌ಗೆ ಕರೆ ಮಾಡುವ ಬಗ್ಗೆ ತಿಳಿಸಿದ್ದು ಹಾಗೂ ಶೇ. 12 ರಷ್ಟು ವ್ಯಕ್ತಿಗಳು ಪೊಲೀಸರಿಗೆ ಕರೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಸೇವ್‌ಲೈಫ್‌ ಸಂಸ್ಥೆ ವರದಿ ಮಾಡಿದೆ.

ಅಲ್ಲದೆ, ಗುಡ್ ಸಮರಿಟನ್ ಕಾನೂನಿನ ಬಗ್ಗೆ ಎಲ್ಲ ಆಸ್ಪತ್ರೆ ಹಾಗೂ ಪೊಲೀಸ್ ಠಾಣೆಗಳ ಪ್ರವೇಶ ದ್ವಾರದ ಬಳಿ ಆ ಕಾನೂನಿನ ಅರಿವು ಮೂಡಿಸುವ ಪತ್ರ ಹಾಕಬೇಕು ಎಂಬ ಕಾನೂನಿದ್ದರೂ ಅದನ್ನು ಯಾರೂ ಪಾಲಿಸುತ್ತಿಲ್ಲ ಎಂಬುದು ಸರ್ವೇಯಲ್ಲಿ ಬಯಲಾಗಿದೆ.

ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸುವ ವ್ಯಕ್ತಿಯ ಮಾಹಿತಿಯನ್ನು ಕೇಳುವಂತಿಲ್ಲ ಎಂದು ಈ ಕಾನೂನು ಹೇಳುತ್ತದೆ. ಜತೆಗೆ, ವ್ಯಕ್ತಿಯ ವಿಳಾಸ, ಖಾಸಗಿ ಮಾಹಿತಿಯನ್ನು ಪೊಲೀಸರಾಗಲೀ, ಆಸ್ಪತ್ರೆ ಸಿಬ್ಬಂದಿಯಾಗಲೀ ಒತ್ತಾಯ ಮಾಡಿ ಪಡೆದುಕೊಳ್ಳುವಂತಿಲ್ಲ. ಹಾಗೂ ಪರೋಪಕಾರಿ ಸಾಕ್ಷಿಯಾದರೆ, ಪೊಲೀಸರು ಆ ವ್ಯಕ್ತಿಯನ್ನು ಅತೀವ ಕಾಳಜಿಯಿಂದ ಒಮ್ಮೆ ಮಾತ್ರ ವಿಚಾರಣೆ ನಡೆಸಬೇಕಾಗುತ್ತದೆ ಎಂದೂ ಕಾನೂನಿನಲ್ಲಿದೆ. ಆದರೆ, ಗುಡ್ ಸಮರಿಟನ್‌ಗಳು ಅಥವಾ ಪರೋಪಕಾರಿಗಳ ಪೈಕಿ ಶೇ. 59 ರಷ್ಟು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜತೆಗೆ, ಅವರ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡಿರುವುದನ್ನು ಹಲವು ಪೊಲೀಸರು ಒಪ್ಪಿಕೊಂಡಿದ್ದಾರೆ.

Comments are closed.