ಕರ್ನಾಟಕ

ರಾಜ್ಯದಲ್ಲಿ ವರ್ಷಕ್ಕೆ 100 ರಜೆ! ಕಡಿತಗೊಳಿಸಲು ಉಪ ಸಮಿತಿ ರಚನೆ

Pinterest LinkedIn Tumblr


ಬೆಂಗಳೂರು: ವರ್ಷದ 365 ದಿನಗಳಲ್ಲಿ ಸರಕಾರಿ ಅಧಿಕಾರಿಗಳಿಗೆ ಮುಂದಿನ ವರ್ಷ (2019)ದಲ್ಲಿ ಸರಕಾರಿ ರಜೆಗಳು, ವಾರದ ರಜೆಗಳು ಹಾಗೂ ಇತರೆ ರಜೆಗಳು ಸೇರಿ 100 ರಜೆಗಳು ಸಿಗುತ್ತಿವೆ. ಇದು ಕರ್ನಾಟಕ ಸರಕಾರದ ಚಿಂತೆಗೀಡು ಮಾಡುವಂತಾಗಿದೆ. ಹೀಗಾಗಿ, ನಿನ್ನೆ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಸರಕಾರಿ ಅಧಿಕಾರಿಗಳ ರಜೆ ಕಡಿತಗೊಳಿಸುವ ಬಗ್ಗೆ ಕ್ಯಾಬಿನೆಟ್ ಉಪ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಆಡಳಿತದಲ್ಲಿ ದಕ್ಷತೆ ಹೆಚ್ಚಿಸಲು ಕುಮಾರಸ್ವಾಮಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.

”ರಾಜ್ಯ ಸರಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರ ಗ್ರಹಿಕೆಯಲ್ಲಿದೆ. ಇದು ಗಂಭೀರವಾದ ವಿಚಾರವಾಗಿದೆ. ಹೀಗಾಗಿ, ಕ್ಯಾಬಿನೆಟ್ ಸಭೆಯಲ್ಲಿ ಸಚಿವರು ರಜೆಗಳು ಕಡಿತಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ” ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. ”ವಾರದ ರಜೆಗಳು, ಹಲವು ಜಯಂತಿಗಳು ಹಾಗೂ ಇತರೆ ರಜೆಗಳು ಸೇರಿ ವರ್ಷದಲ್ಲಿ 100 ದಿನ ರಜೆ ಸಿಗುತ್ತದೆ. ಹೀಗಾಗಿ ಸರಕಾರಿ ಕಚೇರಿಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬ ಬಗ್ಗೆ ಜನರಲ್ಲಿ ಸಾಮಾನ್ಯ ಅಭಿಪ್ರಾಯವಿದೆ. ಈ ವಿಚಾರದ ಬಗ್ಗೆ ಚರ್ಚೆ ನಡೆಸಲು ಉಪಸಮಿತಿಯನ್ನು ರಚಿಸುತ್ತಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.

ಇನ್ನು, ತಿಂಗಳ ಪ್ರತಿ 4 ನೇ ಶನಿವಾರ ರಜೆ ನೀಡಬೇಕೆಂದು 6 ನೇ ವೇತನ ಆಯೋಗ ಶಿಫಾರಸು ಮಾಡಿರುವ ಬಗ್ಗೆ ಭೈರೇಗೌಡ ಮಾತನಾಡಿದ್ದು, ”ನಾವು ರಾಜ್ಯದಲ್ಲಿ ಸರಕಾರಿ ರಜೆಗಳನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ. ಈ ವೇಳೆ, ನಾಲ್ಕನೇ ಶನಿವಾರ ರಜೆ ನೀಡುವುದು ಅಪ್ರಾಯೋಗಿಕವೆನಿಸುತ್ತದೆ. 4ನೇ ಶನಿವಾರ ರಜೆ ನೀಡಲು ಸರಕಾರದ ವಿರೋಧವಿಲ್ಲ. ಆದರೆ, ಉಳಿದ ರಜೆಗಳನ್ನು ಕಡಿತಗೊಳಿಸಬೇಕಾಗುತ್ತದೆ” ಎಂದು ಸಚಿವರು ತಿಳಿಸಿದರು.

ಅಲ್ಲದೆ, ವಾರಾಂತ್ಯಗಳಲ್ಲಿ ರಜೆ ನೀಡುವ ಬಗ್ಗೆ ಸರಕಾರಿ ಅಧಿಕಾರಿಗಳ ವಿವಿಧ ವರ್ಗಗಳಿಂದ ಬೇಡಿಕೆ ಇದ್ದು, ಈ ಬಗ್ಗೆಯೂ ಉಪ ಸಮಿತಿಯಲ್ಲಿ ಅಧ್ಯಯನ ಮಾಡಲಾಗುವುದು. ಜತೆಗೆ, ಯಾವ ರಜೆಯನ್ನು ಕಡಿತಗೊಳಿಸಬಹುದು ಎಂಬ ಬಗ್ಗೆಯೂ ಸಚಿವರು ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ. ”ಯಾವುದೋ ಒಂದು ಜಯಂತಿಗೆ ರಜೆಯನ್ನು ತೆಗೆದುಹಾಕಿದರೆ ಆ ಸಮುದಾಯದವರು ಆಕ್ರೋಷ ವ್ಯಕ್ತಪಡಿಸುತ್ತಾರೆ. ಹೀಗಾಗಿ, ಈಗಿರುವ ರಜೆಗಳ ಸಂಖ್ಯೆಗಳಿಂದ ಸರಕಾರಿ ಕಚೇರಿಗಳು ಸರಿಯಾಗಿ ಕಾರ್ಯನಿರ್ವಹಿಸಲು ತೀವ್ರ ತೊಂದರೆಯಾಗುತ್ತಿದ್ದು, ವಾರದಲ್ಲಿ ಕೆಲಸ ಮಾಡುವ ಅವಧಿಗಳ ಮೇಲೂ ಪರಿಣಾಮ ಬೀರುತ್ತಿದೆ” ಎಂದು ಸಚಿವರೊಬ್ಬರು ಹೇಳಿದ್ದಾರೆ.

ಇನ್ನೊಂದೆಡೆ, ಬಸವಣ್ಣ ಕಾಯಕವೇ ಕೈಲಾಸ ಎನ್ನುತ್ತಿದ್ದರು. ಹೀಗಾಗಿ, ಬಸವ ಜಯಂತಿಯನ್ನು ರಜೆ ದಿನವನ್ನಾಗಿ ನೀಡುವುದು ಬೇಡವೆಂದು ವೀರಶೈವ – ಲಿಂಗಾಯತ ಸಮುದಾಯದ ಸಂಘಟನೆಗಳು ಸೇರಿ ಹಲವು ಸಮುದಾಯಗಳು ಸಾರ್ವಜನಿಕ ಮನವಿ ಸಲ್ಲಿಸಿದ್ದಾರೆ. ಇನ್ನು, ಕ್ಯಾಬಿನೆಟ್‌ ಉಪ ಸಮಿತಿಯಲ್ಲಿ ಯಾವ್ಯಾವ ಸಚಿವರು ಇರಲಿದ್ದಾರೆ. ಇದರ ಮುಖ್ಯಸ್ಥ ಯಾರಾಗಲಿದ್ದಾರೆ ಎಂಬ ಬಗ್ಗೆ ಸಿಎಂ ಕುಮಾರಸ್ವಾಮಿ ನಿರ್ಧರಿಸಲಿದ್ದಾರೆ ಎಂದು ಸಚಿವ ಭೈರೇಗೌಡ ತಿಳಿಸಿದ್ದಾರೆ.

2019ನೇ ಸಾಲಿನ ಸಾರ್ವತ್ರಿಕಾ ರಜಾ ದಿನಗಳ ಪಟ್ಟಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಈ ಪೈಕಿ, 21 ಸರಕಾರಿ ರಜೆಗಳು ಇದೆ. ಜತೆಗೆ, 52 ಭಾನುವಾರ ಹಾಗೂ 12 ಎರಡನೇ ಶನಿವಾರದ ರಜೆಗಳನ್ನು ನೀಡಲಾಗಿದೆ.

Comments are closed.