ಕರ್ನಾಟಕ

ನನ್ನ ಕಾರ್ಖಾನೆಯಲ್ಲಿ 20 ಕೋಟಿ ರೂ. ಹಣ ಬಾಕಿ ಇದ್ದರೆ ರಾಜೀನಾಮೆ ಕೊಡುತ್ತೇನೆ; ಸಚಿವ ರಮೇಶ್​ ಜಾರಕಿಹೊಳಿ

Pinterest LinkedIn Tumblr


ಬೆಂಗಳೂರು: ನನ್ನ ಕಾರ್ಖಾನೆಯಲ್ಲಿ 20 ಕೋಟಿ ರೂ.ಬಾಕಿ ಇಲ್ಲ. ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಬರುತ್ತಿದೆ. ನಾನು ರೈತರ ಯಾವ ಹಣವನ್ನು ಬಾಕಿ ಉಳಿಸಿಕೊಂಡಿಲ್ಲ. ಒಂದು ವೇಳೆ 20 ಕೋಟಿ ರೂ. ಬಾಕಿ ಇದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ರಮೇಶ್​ ಜಾರಕಿಹೊಳಿ ಸವಾಲು ಹಾಕಿದ್ದಾರೆ.

ಇಂದು ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಗೆ ಸಚಿವ ರಮೇಶ್​ ಜಾರಕಿಹೊಳಿ ಗೈರಾಗಿದ್ದರು. ಮನೆಯಲ್ಲೇ ಇದ್ದರೂ ರೈತ ಮುಖಂಡರ ಸಭೆಯಲ್ಲಿ ಭಾಗವಹಿಸದೆ, ತಮ್ಮ ನಿವಾಸದಿಂದ ಬೇರೆ ಕಡೆಗೆ ಹೊರಟಿದ್ದರು. ಆಪ್ತರ ಜೊತೆ ಚರ್ಚೆ ನಡೆಸಿದ ನಂತರ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಸಭೆಗೆ ಯಾಕೆ ಹೋಗಿಲ್ಲ ಎಂಬ ಪ್ರಶ್ನೆಗೆ ನಾನು ಸಿಎಂ ಜೊತೆ ಮಾತನಾಡಿದ್ದೇನೆ. ಮಾಲೀಕರಾಗಿ ಸಭೆಗೆ ಹೋದರೆ ಅನುಮಾನ ಬಂದುಬಿಡುತ್ತದೆ ಎಂದರು. ನನ್ನ ಕಾರ್ಖಾನೆಯಿಂದ 20 ಕೋಟಿ ರೂ. ಹಣ ಬಾಕಿ ಕೊಡುವುದು ಇದ್ದರೆ ನಾನು ರಾಜೀನಾಮೆ ಕೊಡಲು ಸಿದ್ದ ಎಂದು ಹೇಳಿದರು.

ಸಕ್ಕರೆ ಕಾರ್ಖಾನೆಗಳು ಬಾಕಿ ಹಣ ಕೊಡುತ್ತಿಲ್ಲ ಎಂದು ಕಬ್ಬು ಬೆಳೆಗಾರರು ಹೋರಾಟಕ್ಕಿಳಿದಿದ್ದಾಳೆ. ಬಹುತೇಕ ಕಾರ್ಖಾನೆಗಳು ರೈತರಿಗೆ ಕೋಟ್ಯಾಂತರ ರೂ. ಬಾಕಿ ಪಾವತಿಸಬೇಕಿದೆ. ಅದರಲ್ಲಿ ಸಚಿವರ ಕಾರ್ಖಾನೆಗಳು ಸಹ ರೈತರ ಬಾಕಿ ಉಳಿಸಿಕೊಂಡಿವೆ.

ರಮೇಶ್​ ಜಾರಕಿಹೊಳಿ ವಿರುದ್ಧ ಕಿಡಿಕಾರಿದ ರೈತರು:

ಸಿಎಂ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ರೈತರು ಸಚಿವ ರಮೇಶ್ ಜಾರಕಿಹೊಳಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು. ಕಬ್ಬು ಬೆಳೆಯ ಸಮಸ್ಯೆ ಬಗ್ಗೆ ನಾವು ಬೆಳಗಾವಿಯಲ್ಲಿ ಹೋರಾಟ ಮಾಡಿದ್ದೇವೆ. ಅಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದರೂ ಅಲ್ಲಿಗೆ ರಮೇಶ್​ ಜಾರಕಿಹೊಳಿ ಬಂದಿಲ್ಲ. ಸೌಜನ್ಯಕ್ಕಾದರೂ ಅವರು ನಮ್ಮನ್ನು ಭೇಟಿ ಮಾಡಿಲ್ಲ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಏನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಲ್ಲಿ ಅವರು ಪ್ರಭಾವಿ ಸಚಿವರಾಗಿದ್ದಾರೆ. ಅವರು ಮನಸ್ಸು ಮಾಡಿದರೆ ನಮ್ಮ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ತೀರ್ಮಾನ ಮಾಡಬಹುದಿತ್ತು. ಆದರೆ ಅವರು ಈ ಕೆಲಸ ಮಾಡಿಲ್ಲ. ತನ್ನ ಜಿಲ್ಲೆಯಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ತಲೆಕೆಡಿಸಕೊಳ್ಳದ ರಮೇಶ್​ ಜಾರಕಿಹೊಳಿ ಸಚಿವ ಸ್ಥಾನದಲ್ಲಿ ಏಕೆ ಇದ್ದಾರೆ..? ಮೊದಲು ಅವರ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಕಿಡಿಕಾರಿದರು.

Comments are closed.