ಕರ್ನಾಟಕ

ಗೂಂಡಾ ಎಂದ ರೈತನೊಂದಿಗೆ ಕುಮಾರಸ್ವಾಮಿ ಫೋಟೋ!

Pinterest LinkedIn Tumblr


ಬೆಳಗಾವಿ: ರೈತರ ಹೋರಾಟ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಅವರು ಆಡಿದ ಕೆಲ ಮಾತುಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿವೆ. ಮಹಿಳೆಯೊಬ್ಬರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿದ್ದು, ರೈತರನ್ನು ಗೂಂಡಾಗಳೆಂದು ಕರೆದದ್ದು ಹೆಚ್​ಡಿಕೆ ವಿರುದ್ಧ ಜನಾಕ್ರೋಶ ಹೆಚ್ಚಾಗುವಂತೆ ಮಾಡಿದೆ. ಬೆಳಗಾವಿಯ ರೈತರೊಬ್ಬರ ಬಗ್ಗೆ ಕಳ್ಳ, ದರೋಡೆಕೋರ, ಗೂಂಡಾ ಎಂದು ಪದಪ್ರಯೋಗ ಮಾಡಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಎರಡು ವರ್ಷದ ಹಿಂದೆ ಅದೇ ರೈತನ ಮನೆಗೆ ಭೇಟಿ ನೀಡಿ ಉಪಾಹಾರ ಸೇವಿಸಿ ರೈತನೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.

ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದ ಅಶೋಕ ಯಮಕನಮರಡಿ ಅವರ ಜೊತೆ ಕುಮಾರಸ್ವಾಮಿ ಫೋಟೋಗೆ ಪೋಸ್ ಕೊಟ್ಟಿದ್ದರು. ಇದೇ ಅಶೋಕ್ ಅವರು ಮೊನ್ನೆಮೊನ್ನೆ ಸುವರ್ಣಸೌಧದಲ್ಲಿ ನಡೆದ ರೈತರ ಮುತ್ತಿಗೆಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಪೊಲೀಸರ ಲಾಠಿ ಏಟು ತಿಂದು ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ, ಆ ನೋವಿಗಿಂತ ಹೆಚ್ಚಾಗಿ ಕುಮಾರಸ್ವಾಮಿ ಅವರು ಆಡಿದ ಮಾತು ಹಾಗೂ ಮಾಡಿದ ಆರೋಪ ಅಶೋಕ್ ಯಮಕನಮರಡಿ ಅವರಿಗೆ ಘಾಸಿ ಮಾಡಿದೆ. ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ, ಗೂಂಡಾಗಳು ಎಂದು ಕುಮಾರಸ್ವಾಮಿ ಆರೋಪಿಸಿದ್ದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾಗಿ ಅಶೋಕ ಯಮಕನಮರಡಿ ಅವರು ಕಳೆದ ಹಲವು ವರ್ಷಗಳಿಂದ ರೈತ ಪರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಜೆಡಿಎಸ್ ಪಕ್ಷ ಸಂಘಟನೆ ಸಂಬಂಧ ಎರಡು ವರ್ಷಗಳ ಹಿಂದೆ ಖಾನಾಪುರಕ್ಕೆ ಭೇಟಿ ನೀಡಿದ್ದ ಎಚ್‍ಡಿಕೆ ರೈತ ಅಶೋಕ ಯಮಕನಮರಡಿ ಅವರ ಮನೆಗೆ ಭೇಟಿ ನೀಡಿ ಉಪಾಹಾರ ಸೇವಿಸಿದ್ದರು. ಇದೇ ರೈತನ ಬಗ್ಗೆ ಸಿಎಂ ಎಚ್‍ಡಿಕೆ ಗುಂಡಾ, ಕಳ್ಳ, ದರೋಡೆಕೋರ ಎಂದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಬ್ಬಿನ ಬಾಕಿ ಬಿಲ್ ಹಾಗೂ ದರ ನಿಗದಿಗಾಗಿ ರೈತರು ನಡೆಸುತ್ತಿದ್ದ ಪ್ರತಿಭಟನೆ ನಿನ್ನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬಾಕಿ ಬಿಲ್‍ಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭವಾದ ಪ್ರತಿಭಟನೆ ಮೊದಲ ದಿನ ಶಾಂತವಾಗಿತ್ತು. ಎರಡನೇ ದಿನ ವಿಕೋಪಕ್ಕೆ ತಿರುಗಿ ರೈತರು ಟವರ್, ಮರ ಏರಿ ಸಿಎಂ ಎಚ್‍ಡಿಕೆ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿದ್ದರು. ರೈತರ ಪ್ರತಿಭಟನೆಗೆ ಎಚ್ಚೆತ್ತ ಸಿಎಂ ಎಚ್‍ಡಿಕೆ ರೈತ ಮುಖಂಡರ ಜತೆಗೆ ಫೋನ್‍ನಲ್ಲಿ ಚರ್ಚಿಸಿ ಬೆಳಗಾವಿ ಸುವರ್ಣಸೌಧದಲ್ಲಿ ಸಭೆ ನಡೆಸುವ ಭರವಸೆ ನೀಡಿದ್ದರು.

ಸಿಎಂ ಭರವಸೆಯಿಂದ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದರು ರೈತರು. ನಂತರ ಸಿಎಂ ಎಚ್‍ಡಿಕೆ ಅವರ ಬೆಳಗಾವಿ ಪ್ರವಾಸ ದಿಢೀರ್ ರದ್ದಾಗುತ್ತಿದ್ದಂತೆ ಉಗ್ರ ಹೋರಾಟ ನಡೆಸಿದರು. ಸುವರ್ಣಸೌಧ ಮುಖ್ಯಧ್ವಾರದ ಕೀಲಿ ಮುರಿದು, ಸೌಧದ ಒಳಗೆ ಕಬ್ಬು ತುಂಬಿದ ಲಾರಿ ನುಗ್ಗಿಸಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಭರದಲ್ಲಿ ಪೊಲೀಸರು ರೈತ ಮುಖಂಡ ಅಶೋಕ ಯಮಕನಮರಡಿ ಮೇಲೆ ಹಲ್ಲೆ ನಡೆಸಿದ್ದರು. ತೀವ್ರಗಾಯಗೊಂಡಿದ್ದ ಅಶೋಕ ಯಮಕನಮರಡಿ ಹಿರೆಬಾಗೇವಾಡಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಇದೀಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಳಿಕ ಎಚ್‍ಡಿಕೆ ಕುಮಾರಸ್ವಾಮಿ ಅವರು ರೈತರ ಬಗ್ಗೆ ಕೀಳು ಮಟ್ಟದ ಪದ ಪ್ರಯೋಗಿಸಿದ್ದರು.

ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಅಶೋಕ್ ಯಮಕನಮರಡಿ, ತಾವು ಸುವರ್ಣಸೌಧದಲ್ಲಿ ನಡೆಸಿದ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ಧಾರೆ. ತಮಗೆ ಬರಬೇಕಾದ ದುಡ್ಡು ಕೇಳಲು ನಾವು ಗೇಟ್ ಮುರಿಯುವುದರಲ್ಲಿ ತಪ್ಪೇನಿದೆ. ನಮ್ಮ ಹಕ್ಕು ಕೇಳಲು ಹೋದರೆ ಗೂಂಡಾ ಅಂತಾರೆ. ಕುಮಾರಸ್ವಾಮಿ ಅವರು ಈ ಮುಂಚೆ ಗೂಂಡಾವರ್ತನೆ ತೋರಿರಲಿಲ್ಲವೇ? ರಾಮಕೃಷ್ಣ ಹೆಗಡೆ ವಿರುದ್ಧ ಇವರು ಮಾಡಿದ್ದು ಗೂಂಡಾಗಿರಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ರೈತರಿಗೆ ಕೊಡಬೇಕಿರುವುದು 38 ಕೋಟಿ ಬಾಕಿ ಮಾತ್ರ ಎಂದು ಸಕ್ಕರೆ ಸಚಿವ ಕೆ.ಜೆ. ಜಾರ್ಜ್ ಅವರು ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅಶೋಕ್ ಯಮಕನಮರಡಿ, ಮಲ್ಲಪ್ರಭ ಸಕ್ಕರೆ ಕಾರ್ಖಾನೆಯೊಂದೇ ಕಬ್ಬು ಬೆಳೆಗಾರರಿಗೆ 18 ಕೋಟಿಗೂ ಹೆಚ್ಚು ಹಣ ಕೊಡಬೇಕಿದೆ ಎಂದು ಹೇಳಿದ್ದಾರೆ. ಜಾರ್ಜ್ ಅವರು ಸಕ್ಕರೆ ಸಚಿವರಾಗಿರುವುದೇ ಯಾರಿಗೂ ಗೊತ್ತಿಲ್ಲ ಎಂದೂ ರೈತ ಮುಖಂಡ ಅಶೋಕ್ ಟೀಕಿಸಿದ್ದಾರೆ.

ಇನ್ನಾದರೂ ಸಿಎಂ ಎಚ್​ಡಿಕೆ ತಾವಾಡಿದ ಮಾತು ವಾಪಸ್ ಪಡೆಯಲಿದ್ದಾರೆ ಎಂದು ಕಾದು ನೋಡಬೇಕು.

Comments are closed.