ಕರ್ನಾಟಕ

ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ!

Pinterest LinkedIn Tumblr


ಬೆಂಗಳೂರು: ರಾಜ್ಯದ ಎಲ್ಲ ದರ್ಶಿನಿಗಳು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಹೋಟೆಲ್‌, ಪಬ್‌, ಕ್ಲಬ್‌ ಹಾಗೂ ಎಲ್ಲ ಸಾರ್ವಜನಿಕ ಸ್ಥಳಗಳನ್ನು ‘ಧೂಮಪಾನ ಮುಕ್ತ ಪ್ರದೇಶ’ ಎಂದು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈಗಾಗಲೇ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಧೂಮಪಾನ ಮುಕ್ತ ಪ್ರದೇಶ ಎಂದು ಘೋಷಿಸಲಾಗಿದೆ. ಇದನ್ನು ನಗರಸಭೆ, ಪುರಸಭೆ ಸೇರಿದಂತೆ ರಾಜ್ಯದ ಎಲ್ಲ ಸ್ಥಳೀಯ ಪಟ್ಟಣ ಪಂಚಾಯಿತಿಗಳಿಗೂ ವಿಸ್ತರಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಂಬಾಕು ಸೇವನೆಯಿಂದ ಹಲವಾರು ದೀರ್ಘಾವಧಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಜನಸಾಮಾನ್ಯರು ಪರೋಕ್ಷವಾಗಿ ಧೂಮಪಾನಕ್ಕೆ ತುತ್ತಾಗುತ್ತಿರುವ ಆತಂಕಕಾರಿ ವಿಚಾರ ‘ಜಿಎಟಿಎಸ್‌’ ಸರ್ವೆಯಿಂದ ತಿಳಿದು ಬಂದಿರುವುದರಿಂದ ಸಾರ್ವಜನಿಕ ಆರೋಗ್ಯ ಕಾಪಾಡುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಪರವಾನಗಿ ರದ್ದು:

ಕರ್ನಾಟಕ ಧೂಮಪಾನ ನಿಷೇಧ ಹಾಗೂ ಧೂಮಪಾನಿಗಳಿಲ್ಲದವರ ಆರೋಗ್ಯ ರಕ್ಷಣೆ ಕಾಯಿದೆ- 2001ರ ಪ್ರಕಾರ ಎಲ್ಲ ರಾಜ್ಯದ ಎಲ್ಲ ದರ್ಶಿನಿಗಳು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಹೋಟೆಲ್‌, ಪಬ್‌, ಕ್ಲಬ್‌ ಹಾಗೂ ಎಲ್ಲ ಸಾರ್ವಜನಿಕ ಸ್ಥಳಗಳನ್ನು ‘ಧೂಮಪಾನ ಮುಕ್ತ ಪ್ರದೇಶ’ ಎಂದು ಘೋಷಿಸಿ ಆದೇಶ ಹೊರಡಿಸಲಾಗಿದೆ.

ಕೋಟ್ಪಾ ಕಾಯ್ದೆ-2003 ಕಾಯ್ದೆ ಅನ್ವಯ 30ಕ್ಕೂ ಹೆಚ್ಚು ಆಸನವಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಹೋಟೆಲ್‌, ಪಬ್‌, ಕ್ಲಬ್‌ಗಳಲ್ಲಿ ‘ಧೂಮಪಾನ ಪ್ರದೇಶ’ ಸ್ಥಾಪಿಸಲು ಕಾನೂನಿನಲ್ಲಿ ಅವಕಾಶವಿದೆ. ಒಂದು ವೇಳೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ವಾಣಿಜ್ಯ ಪರವಾನಗಿ ರದ್ದುಪಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಧೂಮಪಾನ ಪ್ರದೇಶ ಹೇಗಿರಬೇಕು?

‘ಧೂಮಪಾನ ಪ್ರದೇಶ’ ನಿಗದಿಪಡಿಸಲು ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯಬೇಕು. ಅಪ್ರಾಪ್ತರು ಮತ್ತು ಧೂಮಪಾನ ಮಾಡದವರಿಗೆ ‘ಧೂಮಪಾನ ಪ್ರದೇಶ’ದಲ್ಲಿ ಪ್ರವೇಶಕ್ಕೆ ಅವಕಾಶ ನೀಡಬಾರದು. ಧೂಮಪಾನ ವಲಯದಲ್ಲಿ ಯಾವುದೇ ರೀತಿಯ ತಿಂಡಿ, ಊಟ, ಮದ್ಯ, ಸಿಗರೇಟು, ನೀರು, ಟೀ, ಕಾಫಿ ಪದಾರ್ಥಗಳನ್ನು ಸರಬರಾಜು ಮಾಡಬಾರದು. ಕುರ್ಚಿ ಮತ್ತು ಟೇಬಲ್‌, ಬೆಂಕಿ ಪೊಟ್ಟಣ, ಆಶ್‌ ಟ್ರೇ ಸೇರಿದಂತೆ ಪ್ರಚೋದನಕಾರಿ ವಸ್ತುಗಳನ್ನು ಗ್ರಾಹಕರಿಗೆ ಒದಗಿಸದಂತೆ ಸೂಚಿಸಲಾಗಿದೆ ಎಂದು ಇದೇ ವೇಳೆ ಖಾದರ್‌ ವಿವರಿಸಿದ್ದಾರೆ.

‘ಧೂಮಪಾನ ಪ್ರದೇಶ’ಕ್ಕೆ ಅವಕಾಶ ಕಲ್ಪಿಸುವುದರಿಂದಲೂ ಪರೋಕ್ಷವಾಗಿ ಧೂಮಪಾನಕ್ಕೆ ಅವಕಾಶ ನೀಡಿದಂತಾಗುತ್ತದೆ. ಹೀಗಾಗಿ, ಧೂಮಪಾನ ಪ್ರದೇಶ ಸ್ಥಾಪಿಸಲು ಸಹ ಅವಕಾಶ ನೀಡದಿರುವ ಚಿಂತನೆಗಳು ನಡೆಯುತ್ತಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾನೂನು, ಆರೋಗ್ಯ, ನಗರಾಭಿವೃದ್ಧಿ ಇಲಾಖೆಗಳ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Comments are closed.