ಕರ್ನಾಟಕ

ನಾವು ರೈತರ ಸಾಲ ಮನ್ನಾ ಮಾಡಿದ್ದೇವೆ, ಮೋದಿ ರಾಜ್ಯದ ರೈತರಿಗೆ ವಾರಂಟ್‌ ಜಾರಿ ಮಾಡಿಸಿದ್ದಾರೆ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ‘ಕರ್ನಾಟಕ ಸರಕಾರ 45 ಸಾವಿರ ಕೋಟಿ ರು. ರೈತರ ಸಾಲ ಮನ್ನಾ ಮಾಡಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ರೈತರಿಗೆ ವಾರಂಟ್‌ ಜಾರಿ ಮಾಡಿಸಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರಕ್ಕಾಗಿ ನರೇಂದ್ರ ಮೋದಿ ಸುಳ್ಳು ಹೇಳಿಕೆ ನೀಡಿದ್ದಾರೆ. ಅವರ ಸುಳ್ಳು ಹೇಳಿಕೆಯಿಂದ ದಿಗ್ಭ್ರಮೆ ಉಂಟಾಗಿದೆ. ರಾಜ್ಯ ಸರ್ಕಾರವು 45 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದೆ. ಈಗಾಗಲೇ ಸಹಕಾರ ಬ್ಯಾಂಕ್‌ಗಳ 9,500 ಕೋಟಿ ರು. ಮನ್ನಾ ಮಾಡಿದ್ದೇವೆ. ರಾಷ್ಟ್ರೀಯ ಬ್ಯಾಂಕ್‌ಗಳ ಸಾಲ ಮನ್ನಾ ಪ್ರತಿಕ್ರಿಯೆ ನಡೆಸುತ್ತಿದ್ದು, ಈಗಾಗಲೇ 6500 ಕೋಟಿ ರು. ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದೇವೆ. ಮುಂದಿನ ಬಜೆಟ್‌ ವೇಳೆಗೆ ಸಂಪೂರ್ಣ ಮನ್ನಾ ಮಾಡುತ್ತೇವೆ.

ಆದರೆ, ತಮ್ಮ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ರಾಷ್ಟ್ರೀಯ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳಿಂದ ಪ್ರಧಾನಿ ಮೋದಿ ಅವರು ದುರುದ್ದೇಶಪೂರ್ವಕವಾಗಿ ರೈತರಿಗೆ ವಾರಂಟ್‌ ಜಾರಿ ಮಾಡಿಸುತ್ತಿದ್ದಾರೆ. ತಾವು ರೈತ ವಿರೋಧಿ ನಡೆ ತೋರಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಇನ್ನು ಸದಾನಂದಗೌಡರು ಕುಮಾರಸ್ವಾಮಿ ಅವರು ಮಾತು ಬಿಟ್ಟು ಕೆಲಸ ಮಾಡಲಿ ಎಂದು ಹೇಳಿದ್ದಾರೆ. ಕೇಂದ್ರ ಸಚಿವರಾದ ತಾವು ಕಳೆದ ನಾಲ್ಕೂವರೆ ವರ್ಷದಲ್ಲಿ ಜಾರಿಗೆ ತಂದಿರುವ ಯೋಜನೆಗಳು ಏನು ಎಂಬುದರ ಬಗ್ಗೆ ಚರ್ಚೆಗೆ ಬನ್ನಿ. ವಿಷಯ ಇದ್ದರೆ ಬನ್ನಿ ಸ್ವಾಮಿ ಜನರ ಮುಂದೆ ಹೋಗೋಣ ಎಂದು ಸದಾನಂದಗೌಡರಿಗೆ ಸವಾಲು ಎಸೆದರು.

Comments are closed.