ಬೆಂಗಳೂರು: ಕಳೆದ ಕೆಲ ತಿಂಗಳಿಂದ ಸಚಿವ ರಮೇಶ್ ಜಾರಕಿಹೊಳಿ ಮತ್ತು ಮೈತ್ರಿ ಸರ್ಕಾರದ ಇತರ ನಾಯಕರ ನಡುವೆ ಇದ್ದ ಮುಸುಕಿನ ಗುದ್ದಾಟ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆ ದಟ್ಟವಾಗಿದೆ. ಇಂದು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ.
ಇದರ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸಭೆಯಿಂದ ಎದ್ದು ಆಚೆ ಹೋದರು, ನಂತರ ರಾಜೀನಾಮೆ ನೀಡುವ ಕುರಿತಾಗಿ ಆಪ್ತರಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಕಬ್ಬು ಬೆಳೆಗಾರರ ಪ್ರತಿಭಟನೆಯನ್ನು ತೆಡೆಯುವಲ್ಲಿ ರಮೇಶ್ ಜಾರಕಿಹೊಳಿ ವಿಫಲರಾಗಿದ್ದಾರೆ ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ತಮ್ಮದೇ ಜಿಲ್ಲೆಯ ರೈತರನ್ನು ನಿಯಂತ್ರಿಸಲು ಜಾರಕಿಹೊಳಿ ಅವರಿಗೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದರಿಂದ ಕೋಪ ಗೊಂಡಿದ್ದಾರೆ ಎನ್ನಲಾಗುತ್ತಿದೆ.
ಕಬ್ಬು ಬೆಳೆಗಾರರ ಹೋರಾಟದಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ, ಜತೆಗೆ ಸ್ವತಃ ರಮೇಶ್ ಜಾರಕಿಹೊಳಿಯವರು ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿ ಮಾಡಿಲ್ಲ. ಮತ್ತು ಸರ್ಕಾರದ ಪತನಕ್ಕೆ ಹುನ್ನಾರ ನಡೆಸಿದ್ದಾರೆ. ಈ ಮೂಲಕ ಆಪರೇಷನ್ ಕಮಲಕ್ಕೆ ಸಾಥ್ ನೀಡಿದ್ದಾರೆ ಎಂಬ ಆರೋಪಗಳು ಜಾರಕಿಹೊಳಿ ಮೇಲೆ ಮಾಡಲಾಗಿತ್ತು.
ಸರ್ಕಾರ ರಚನೆಯಾದ ನಂತರ ನಡೆದ ಎಲ್ಲಾ ಸಚಿವ ಸಂಪುಟ ಸಭೆಗಳಿಗೆ ರಮೇಶ್ ಜಾರಕಿಹೊಳಿ ನಿರಂತರ ಗೈರಾಗಿದ್ದರು. ಇಂದಿನ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅದಾದ ನಂತರ ಸಭೆಯಿಂದ ಹೊರಹೋಗಿದ್ದ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಚಿಂತಿಸುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಹಲವು ದಿನಗಳ ಕಾಲ ಕಾಂಗ್ರೆಸ್ ಹಿರಿಯ ನಾಯಕರು ಕಷ್ಟಪಟ್ಟು ರಮೇಶ್ ಜಾರಕಿಹೊಳಿ ಕೋಪವನ್ನು ಶಮನಮಾಡಲು ಯತ್ನಿಸಿದ್ದರು. ಆದರೀಗ ಮತ್ತೊಂದು ಸುತ್ತಿನ ಜಟಾಪಟಿಗೆ ರಾಜ್ಯ ಸಾಕ್ಷಿಯಾಗುವ ಸಾಧ್ಯತೆ ಸಚಿವ ಸಂಪುಟ ಸಭೆ ಮುಖಾಂತರ ಉಂಟಾಗಿದೆ.
ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದ್ದ ಮೈತ್ರಿ ಸರ್ಕಾರ, ಈಗ ಮತ್ತೆ ವಿಸ್ತರಣೆ ದಿನಾಂಕ ಮುಂದೂಡಬೇಕಾಗಬಹುದು.
ರಾಜೀನಾಮೆ ಕೊಟ್ಟಿಲ್ಲ:
ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿಲ್ಲ, ಅಥವಾ ಕೊಡುವ ಆಲೋಚನೆಯನ್ನೂ ಮಾಡಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಮಾಧ್ಯಮಕ್ಕೆ ಸ್ಪಷ್ಟನೆ ನೀಡಿರುವ ಪರಮೇಶ್ವರ್, ಜಾರಕಿಹೊಳಿ ಮುಖ್ಯಮಂತ್ರಿಗಳ ಅನುಮತಿ ಪಡೆದ ನಂತರವೇ ಸಚಿವ ಸಂಪುಟ ಸಭೆಯಿಂದ ಆಚೆ ಹೋಗಿದ್ದು ಎಂದಿದ್ದಾರೆ.
Comments are closed.