ಕರ್ನಾಟಕ

ಮುಖ್ಯಮಂತ್ರಿಯಾಗುವ ಬಯಕೆಯಿತ್ತು, ಆದರೆ ಪ್ರಧಾನಿಯಾದೆ

Pinterest LinkedIn Tumblr


ಬೆಂಗಳೂರು: ನಾನು ಪ್ರಧಾನಿ ಸ್ಥಾನ ಬಿಟ್ಟು 23 ವರ್ಷವಾಯಿತು. ಆದರೆ, ಈಗಲೂ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದೇನೆ ಎಂದು ಜೆಡಿಎಸ್​​ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್​​.ಡಿ. ದೇವೆಗೌಡರು ಹೇಳಿದರು. ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದ ‘ಮನೆ ಅಂಗಳ’ದಲ್ಲಿ ‘ಮಾತುಕತೆ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅವರು, “ನಾನು ಸಿಎಂ ಆಗಬೇಕು ಎಂಬ ಕನಸಿಟ್ಟು ಕೊಂಡಿದ್ದೆ, ಆದರೆ ಪ್ರಧಾನಿಯಾದೆ,” ಎಂದು ತಮ್ಮ ರಾಜಕೀಯ ಜೀವನದ ಸುದೀರ್ಘ ಏಳು ಬೀಳುಗಳ ಬಗ್ಗೆ ಮಾತನಾಡಲು ಅಣಿಯಾದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ತಾವೊಬ್ಬರು ಸಾಮಾನ್ಯ ರೈತನ ಮಗ, ಮದುವೆ ವಿಚಾರದಲ್ಲಿ ಮಾತ್ರ ತಮ್ಮ ತಾಯಿಯ ನಿರ್ಧಾರವೇ ಅಂತಿಮ ಎಂದು ಹೇಳಿದ್ದರು ಎಂಬುದನ್ನು ಹೇಳಿದರು. “ಅವರು ಈಕೆಯನ್ನೇ ವಿವಾಹ ಆಗುವಂತೆ ಸೂಚಿಸಿದರು. ಅವರ ಮಾತಿನಂತೆಯೇ ಚೆನ್ನಮ್ಮನನ್ನ ಮದುವೆಯಾದೆ. ಆದರೆ, ಒಮ್ಮೆ ನನ್ನ ಹೆಂಡತಿ ಮೇಲೆ ದಾಳಿ ನಡೆಯಿತು. ಈ ಬಗ್ಗೆ ನೆನೆಸಿಕೊಂಡರೆ ಈಗಲೂ ಭಾರೀ ನೋವಾಗುತ್ತದೆ,” ಎಂದು ತಮ್ಮ ಜೀವನದ ಕರಾಳ ಘಟನೆ ನೆನೆದು ಬೇಸರಗೊಂಡರು.

ಹೀಗೆಯೇ ತಮ್ಮ ಕುಟುಂಬದ ಬಗ್ಗೆ ಮಾತು ಮುಂದುವರೆಸಿದ ಜೆಡಿಎಸ್​​ ವರಿಷ್ಠ ದೇವೇಗೌಡರು, “ನನ್ನ ತಂದೆಯ ಮೊದಲ ಹೆಂಡತಿ ಮತ್ತು ಅವರ ಮೂರು ಮಕ್ಕಳು ಸಾಂಕ್ರಾಮಿಕ ರೋಗದಿಂದ ತೀರಿಕೊಂಡರು. ಎರಡನೇ ಹೆಂಡತಿ ದೇವಮ್ಮನ ಮೊದಲ ಮಗ ನಾನು. ನಾನು ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದೆ. ಮೊದಲ ಬಾರಿಗೆ ಮೈಸೂರಿನಲ್ಲಿ ನಡೆದಿದ್ದ ಚಳವಳಿಯೊಂದರಲ್ಲಿ ಭಾಗವಹಿಸಿದ್ದಾಗ ಪೋಲೀಸರು ಬಂಧಿಸಿದರು. ಆಗ ನ್ಯಾಯಾಧೀಶರಾಗಿದ್ದವರೊಬ್ಬರು ಈಗಲೇ ಇಂತಹ ಕೆಲಸಗಳಲ್ಲಿ ಬೀಳಬೇಡ ಎಂಬ ಬುದ್ಧಿವಾದ ಹೇಳಿ ಕಳಿಸಿದ್ದರು,” ಎಂದು ನೆನೆದರು.

ನಾನು ವಿಧ್ಯಾಭ್ಯಾಸ ಮುಗಿಸಿದಾಗ ಮೂರು ಸಾವಿರದ ಇನ್ನೂರು ರುಪಾಯಿ ಸಾಲ ಇತ್ತು. ನನ್ನ ಜೀವನದ ಬೆಳವಣಿಗೆಯಲ್ಲಿ ನನ್ನ ಹೆಂಡತಿಯ ಪಾತ್ರ ದೊಡ್ಡದು. ನಾನು ಮೊದಲು ಕೆಲಸ ಶುರು ಮಾಡಿದಾಗ ಒಡವೆ ಬಿಚ್ಚಿ ಕೊಟ್ಟಿದ್ದಳು. ಒಂಭತ್ತು ವರ್ಷ ಆಕೆ ಒಡವೆ ಧರಿಸಿರಲಿಲ್ಲ. ಯಾವುದೇ ಸಮಾರಂಭಗಳಿಗೆ ಆಕೆ ಬರುತ್ತಿರಲಿಲ್ಲ. ನನ್ನ ಯಶಸ್ಸಿನ ಹಿಂದೆ ಆಕೆಯ ಪಾತ್ರ ತುಂಬ ಇದೆ. ಆದರೆ ನನ್ನ ಹೆಂಡತಿ ಮೇಲೆ ಆಸಿಡ್ ದಾಳಿ ನಡೆಸಿದರು. ನನ್ನ ಸ್ವಂತ ತಮ್ಮನ ಮಗ ಇಂಥಾ ಕೆಲಸ ಮಾಡಿ ಜೈಲು ಸೇರಿದ. ಬಳಿಕ ತಮ್ಮನಿಗೆ ಕ್ಯಾನ್ಸರ್ ಆಯ್ತು, ಆಗ ಅವನ ಮಗನನ್ನು ಕಾನೂನು ಹೋರಾಟ ಮಾಡಿ ಬಿಡಿಸಿದೆ,” ಎಂದು ತಮ್ಮ ಕಷ್ಟವನ್ನು ಹೇಳಿಕೊಂಡರು.

ಇಡೀ ರಾಷ್ಟ್ರ ರಾಜಕಾರಣದಲ್ಲಿ ಮತ್ತೊಬ್ಬ ದೇವರಾಜ ಅರಸು, ಮತ್ತೊಬ್ಬ ದೇವೇಗೌಡ ಹುಟ್ಟಲ್ಲ. ಆದರೆ ನಾನು ವಿಪಕ್ಷ ನಾಯಕ ಆಗಿದ್ದೆ. ನಿತ್ಯವೂ ಒಂದಲ್ಲ ಒಂದು ಹಗರಣ ಹೊರತರುತ್ತಿದ್ದೆ. ಈ ನಡುವೇ ದೇವರಾಜ ಅರಸು ಒಂದು ದಿನ ಸವಲಾಕಿದರು. ಒಂದೇ ಒಂದು ಭ್ರಷ್ಟಾಚಾರ ಪ್ರಕರಣ ಹೊರ ತಂದರೆ ರಾಜೀನಾಮೆ ನೀಡುತ್ತೆನೆ ಎಂದು ಅರಸು ಘೋಷಿಸಿದರು. ನಾನು ಬೇಡ ಅಂದರೂ ಅವರು ಕೇಳಲಿಲ್ಲ. ಅವತ್ತು ಮಕ್ಕಳಿಗೆ ಸೈಟು ನೀಡಿದ್ದರ ಬಗ್ಗೆಯೇ ಹೊರತಂದೆ ಎಂದರು.

ದೇವರಾಜ ಅರಸು ಒಮ್ಮೆ ಮನೆಗೆ ಕರೆದಿದ್ದರು. ತಮ್ಮ ಮುಂದೆ ಮೂರು ಫೈಲ್‌ಗಳನ್ನು ಇಟ್ಟುಕೊಂಡು ಕುಳಿತಿದ್ದರು. ಮರದ ಕಪಾಟು ತೆರೆದು ಸೂಟ್ ಕೇಸ್ ನೀಡಲು ಬಂದರು. ನಾಳೆ ಯಾವುದರ ಬಗ್ಗೆ ಮಾತಾಡ್ತಿಯಾ ಅನ್ನೋದನ್ನ ನನಗೆ ಹೇಳಬೇಕು ಅಂದರು. ನಿನಗೆ ನಾಲ್ಕು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅದೆಷ್ಟು ದಿನ ಹೀಗೆ ಇರುತ್ತಿಯಾ? ಎನ್ನುತ್ತಾ ಹೀಗೆ ವಿಪಕ್ಷ ನಾಯಕರಾಗಿದ್ದರು ನನಗೆ ಆಮಿಷ ಒಡ್ಡಿದ್ದರು. ಆದರೂ ಅರಸು ಅವರಂತಹ ವ್ಯಕ್ತಿ ಸಿಕ್ಕಲ್ಲ. ಅರಸು ಭ್ರಷ್ಟಾಚಾರದಿಂದ ದೂರ‌ ಇದ್ದರು ಎಂದು ತಮ್ಮ ರಾಜಕೀಯ ಒಡನಾಡಿ, ಮಾಜಿ ಸಿಎಂ ದೇವರಾಜ್​​ ಅರಸು ಅವರ ವ್ಯಕ್ತಿತ್ವದ ಬಗ್ಗೆ ವಿವರಿಸಿದರು.

ನಾನು ರಾಜಕೀಯ ಬಿಡೋದಿಲ್ಲ. ಶಕ್ತಿ ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ. ಆಗಲ್ಲ ಅಂದಾಗ ವಿಶ್ರಾಂತಿ ಪಡೆಯುತ್ತೇನೆ. ಯಾರಿಗೂ ಮೋಸ ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ, ವಂಚನೆ ಮಾಡಿಲ್ಲ. ನಾನು ಬಯಸೋದು ಒಂದೇ, ನನಗೆ ಅನಾಯಾಸ ಮರಣ ಬೇಕು. ನನ್ನ ಜೀವನ ಮುಂದಿನ ಪೀಳಿಗೆಗೆ ಆದರ್ಶವಾಗಬೇಕು. ನಾನು ಯಾವುದೇ ಜಾತಿಯ ವಿರೋಧಿ ಅಲ್ಲ. ಇವತ್ತು ದೇವೇಗೌಡರ ಬಗ್ಗೆ ಭಾರತದ ಯಾವುದೇ ಪ್ರದೇಶಕ್ಕೆ ಹೋದರೂ ಗೌರವ ಇದೆ. ಪಂಜಾಬ್, ಉತ್ತರ ಪ್ರದೇಶ, ಮಿಜೋರಾಂ ಯಾವುದೇ ಸ್ಥಳಕ್ಕೆ ಹೋದರೂ ಗೌಡ ಅಚ್ಚಾ ಹೈ ಅಂತಾರೆ. ಆದರೆ ಇಲ್ಲಿ ನಮ್ಮ ಮಾಧ್ಯಮ ಸ್ನೇಹಿತರು ಕುಮಾರಸ್ವಾಮಿ ಸರ್ಕಾರ ಯಾವಾಗ ಬೀಳುತ್ತೋ ಅಂತಾರೆ ಎಂದು ಅಸಮಾಧಾನ ಹೊರಹಾಕಿದರು.

ನಮ್ಮಲ್ಲಿ ಮೂರು ಪ್ರಮುಖ ಪಕ್ಷಗಳಿವೆ. ಎರಡು ರಾಷ್ಟ್ರೀಯ ಪಕ್ಷಗಳು ಇವೆ. ಬಿಜೆಪಿಯನ್ನು ಮಣಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರನ್ನೂ ಬಳಸಿಕೊಳ್ತಾರೆ , ಆಮೇಲೆ ಕೈ ಬಿಟ್ಟು ಬಿಡ್ತಾರೆ. ಕೃಷ್ಣ ಅವರನ್ನ ಕರೆದು ಕೊಂಡು ಹೋದರು, ರಾಜಶೇಖರನ್, ಬಂಗಾರಪ್ಪ ಅವರನ್ನು ಕೂಡ ಕರೆದು ಕೊಂಡರು. ಆದರೆ, ಒಂದು ದಿನ ಮೆರೆಸಿ ಆಮೇಲೆ ಬಿಟ್ಟೇ ಬಿಟ್ಟರು. ದೇಶಕ್ಕೆ ಏನು ಬೇಕು ಅಂತಾ ನಾವು ಮೊದಲು ಯೋಚಿಸಬೇಕು ಎಂದರು.

ಅಧಿಕಾರ ದಾಹ ಅನ್ನೋದು ಎಲ್ಲರಲ್ಲೂ ಇದೆ. ನಾನು ಶಾಸಕನಾದಾಗ ಇಪ್ಪತ್ತ ಮೂರು ವರ್ಷ. ಈಗಲೂ ನಾನು ಯಾಕೆ ಹೋರಾಟ ಮಾಡಿಕೊಂಡು ಬರ್ತಿದ್ದೇನೆ. ಶೋಬಾ ಕರಂದ್ಲಾಜೆ ನಮ್ಮ ಮನೆಗೆ ಬಂದಿದ್ದರು. ಯಡಿಯೂರಪ್ಪ ಅವರಿಗೆ ಒಂದು ಮಂತ್ರಿ ಸ್ಥಾನ ಕೊಡಿ ಅಂತಾ ಕೇಳಿದರು. ತಾಳ್ಮೆಯಿಂದ ಇರಿ, ಒಳ್ಳೆ ಕಾಲ ಬರುತ್ತೆ ಅಂತಾ ಸಲಹೆ ನೀಡಿ ಕಳಿಸಿದ್ದೆ. ನಾನು ಯಾರಿಗೂ ತಪ್ಪು ಸಂದೇಶ ನೀಡಲು ಹೋಗಲ್ಲ. ಇವರು ಯಾರು ಮಾತು ಕೇಳಲ್ಲ, ನಾನೇನು ಮಾಡ್ಲಿ ಎನ್ನುತ್ತಾರೆ ಮಾಜಿ ಪ್ರಧಾನಿಗಳು.

ನಾನು ಯಾರ್ ಬಗ್ಗೆನೂ ಅಸೂಯೆ ಮಾಡಲ್ಲ. ಸಿದ್ಧರಾಮಯ್ಯನ ಮಗ ಸತ್ತಾಗ ಅವರ ಮನೆಗೆ ಹೋದೆ. ಕಾವೇರಿ ವಿಚಾರ ಸಭೆ ಸೇರಿ ದ್ದಾಗ ಸಭೆಗೆ ಹೋದೆ. ನೈಸ್ ಅಕ್ರಮದ ವಿರುದ್ಧ ಹೋರಾಟ ಮಾಡಿದೆ, ಆದರೆ ಯಾವುದು ಪ್ರಯೋಜನವಾಗಿಲ್ಲ. ಇನ್ನು ಸಾಲಮನ್ನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾಲ್ಕಾರು ಕಡೆ ಕೆಲ ರೈತರು ಸಾಲ ಮಾಡಿಕೊಂಡಿದ್ದಾರೆ. ಅದು 8-10.ಲಕ್ಷ ರೂ. ದಾಟಿದೆ. ಹೀಗಾಗಿ ಕೆಲ ರೈತರು ಆತ್ಮಹತ್ಯೆಗೆ ಶರಣಾಗ್ತಿದ್ದಾರೆ. ಕುಮಾರಸ್ವಾಮಿ ಅವರು ಅನೇಕ ರೀತಿಯ ಸಾಲಮನ್ನ ಮಾಡಬೇಕು ಅಂದುಕೊಂಡಿದ್ದಾರೆ. ಇದಕ್ಕೆ ಸಂಪನ್ಮೂಲಕ ಕ್ರೂಢೀಕರಣ ಆಗಬೇಕು ಎಂದು ಹೇಳಿದರು.

ಇಂದು ರಾಜಕೀಯ ವ್ಯವಸ್ಥೆ ಬಹಳ ಹಾಳಾಗಿದೆ. ನೀರಿಲ್ಲ ಅಂದ್ರೆ ಜನ ಹಾಹಾಕಾರ ಮಾಡ್ತಾರೆ. ಆದರೆ ಪ್ರತಿಭಟನೆ ಗಳು ನಡೆದಾಗ ಯಾರೂ ಬರಲ್ಲ. ಎಷ್ಟು ರಸ್ತೆಗಳು ಹಾಳಾಗಿವೆ. ಒಂದು ಬಿಬಿಎಂಪಿ ಚುನಾವಣೆಗೆ ಎಷ್ಟು ಖರ್ಚು ಮಾಡ್ತಾರೆ. ಒಂದು ಎಂಪಿ ಸ್ಥಾನಕ್ಕಾಗಿ ಎಷ್ಟೆಲ್ಲಾ ಖರ್ಚು ಮಾಡ್ತಾರೆ ಯಾಕೆಂದು? ಗೊತ್ತಾ ಎಂದು ಪ್ರಶ್ನಿಸಿದರು.

ಮೈತ್ರಿ ಸರ್ಕಾರ ನಡೆಯುತ್ತಿರೋದು ಪವಾಡ. ಕೇಂದ್ರದ ನಾಯಕರು ನಮ್ಮ ಮನೆಗೆ ಬಂದಾಗ ನಾನು ಆಗಲ್ಲ ಅಂತಲೇ ಹೇಳಿದ್ದೆ. ಆದರೆ ಅವರೇ ಮೈತ್ರಿಗೆ ಒತ್ತಾಯ ಮಾಡಿದ್ರು. ಸಂಪನ್ಮೂಲ ಕ್ರೂಢಿಕರಿಸಲು ಬೆಂಗಳೂರಿನ ಜನರ ಮೇರೆಗೆ ತೆರಿಗೆ ಹಾಕಬೇಕಾಗಿಲ್ಲ. ಅಕ್ರಮವಾಗಿ ಆಸ್ತಿ ಸಂಪಾದಿಸಿದವರ ಮೇರೆಗೆ ತೆರಿಗೆ ಹಾಕಿದ್ರೆ ಸಾಕು. ಚುನಾವಣೆ ಗೆಲ್ಲುವವರೆಗೆ ಹೋರಾಟ ಮಾಡಿ. ಗೆದ್ದ ಮೇಲೆ ವಿರೋಧ ಪಕ್ಷದವರೂ ಸಹಕಾರ ನೀಡಬೇಕು ಎಂದರು.

ಮೈತ್ರಿ ಸರ್ಕಾರದ ಗೊಂದಲ, ಆಪರೇಷನ್ ಕಮಲದ ಬಗ್ಗೆ ಪರೋಕ್ಷವಾಗಿ ಸಲಹೆ ನೀಡಿದ ದೇವೇಗೌಡರು, ನಾನು ಕೇವಲ ಒಂದು ಪಾರ್ಟಿಯ ಜನರನ್ನು ದೂಷಿಸಲ್ಲ. ನಮ್ಮಲ್ಲಿ ಕೂಡಾ ಕೆಲವರು ಇದ್ದಾರೆ. ಒಂದು ಕಾರ್ಪೋರೇಷನ್ ಚುನಾವಣೆಗೆ ಎಷ್ಟ ಖರ್ಚು ಮಾಡ್ತಾರೆ ಅಂತಾ ಗೊತ್ತಿದೆ. ಆಡಳಿತ ನಡೆಸಲು ಆಕ್ಸ್ಫರ್ಡ್ ಯುನಿವರ್ಸಿಟಿಯಲ್ಲಿ ಓದಬೇಕಿಲ್ಲ. ಬುದ್ದಿ ಇರಬೇಕು, ಕಾಮನ್ ಸೆನ್ಸ್ ಇರಬೇಕು ಎಂದು ತಿಳಿಸಿದರು.

ಕಾವೇರಿ ನೀರಿಗಾಗಿ ಅಂದಿನ ಸಿಎಂ ಜಯಲಲಿತಾ ಒಣಗಿದ ಭತ್ತ ಪ್ರದರ್ಶನ ಮಾಡಿದ್ರು. ನಾನು ಮೊದಲೇ ವಾಸ್ತವ ಚಿತ್ರಣದ ವಿಡಿಯೋ ಮಾಡಿದ್ದೆ. ಆ ಸಿಡಿ ನೋಡಿ ಎಂದಾಗ ಜಯಲಲಿತಾ ಸಭೆಯಿಂದ ಹೊರ ನಡೆದಿದ್ರು. ಬಳಿಕ 31 ಟಿಎಂಸಿ ಬದಲು 11 ಟಿಎಂಸಿ ನೀರು ಬಿಟ್ಟರೆ ಸಾಕು ಎಂದರು. ಹಣದಿಂದ ರಾಜಕೀಯ ಮಾಡೋರು ಇದಾರೆ. ಆದರೆ ದೈವ ಇಚ್ಚೆಯಿಂದ ರಾಜಕೀಯ ಮಾಡಿದೋನು ನಾನು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು ದೇವೇಗೌಡರು.

Comments are closed.