ಕರ್ನಾಟಕ

ಯಡಿಯೂರಪ್ಪರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಮುಂದೆ ಬಿಜೆಪಿಗೆ ಯಾರು ಅಧಿಪತಿ ? ನಡೆಯುತ್ತಿದೆ ಲೆಕ್ಕಾಚಾರ …!

Pinterest LinkedIn Tumblr

ಬೆಂಗಳೂರು: ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆಯ ನಂತರ ರಾಜ್ಯ ಬಿಜೆಪಿಯಲ್ಲಿ ಆವರಿಸಿರುವ ಸೋಲಿನ ಛಾಯೆಯಿಂದ ಎಚ್ಚೆತ್ತಿರುವ ರಾಷ್ಟ್ರೀಯ ವರಿಷ್ಠರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜಾಗದಲ್ಲಿ ಮುಂದೆ ಯಾರನ್ನು ತಂದು ಕೂರಿಸಬೇಕೆಂಬ ಗಾಢ ಚಿಂತೆಯಲ್ಲಿ ಮುಳುಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರನ್ನು ಬದಲಾಯಿಸುವ ಮನಸ್ಥಿತಿಯಲ್ಲಿ ಬಿಜೆಪಿ ಸದ್ಯಕ್ಕಿಲ್ಲ.

ಆದರೆ ಸದ್ಯಕ್ಕಿರುವ ಪ್ರಶ್ನೆ ಎಂದರೇ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಅವರ ಸ್ಥಾನವನ್ನು ಯಾರು ತುಂಬಬಹುದು ಎಂಬ ಗೊಂದಲ ಕಾಡುತ್ತಿದೆ. ಯಡಿಯೂರಪ್ಪ ಜನಪ್ರಿಯತೆ, ಅವರ ನಾಯಕತ್ವ ತುಂಬುವ ಸೂಕ್ತ ನಾಯಕರು ಯಾರು ಎಂಬ ಪ್ರಶ್ನೆ ಎದ್ದಿದೆ. ಆದರೆ ಸದ್ಯಕ್ಕೆ ಅಂದರೆ 2019ರ ಲೋಕಸಭೆ ಚುನಾವಣೆವರೆಗೂ ಯಡಿಯೂರಪ್ಪ ಅವರನ್ನು ಬದಲಾಯಿಸಬಾರದು ಎಂಬುದಾಗಿ ನಿರ್ಧರಿಸಲಾಗಿದೆ.

ಉಪ ಚುನಾವಣೆಯಲ್ಲಿ ನಾಲ್ಕು ಸೀಟುಗಳನ್ನು ಸೋತಿದ್ದಕ್ಕೆ ಯಡಿಯೂರಪ್ಪ ಅವರನ್ನು ಬೈಯ್ಯುವವರು ವಿಧಾನಸಭೆ ಚುನಾವಣೆಯಲ್ಲಿ 104 ಕ್ಷೇತ್ರಗಳನ್ನು ಗೆದ್ದಿದ್ದನ್ನು ಮರೆತಿದ್ದಾರೆ, ಯಡಿಯೂರಪ್ಪ ಅವರು ಕೇವಲ ಲಿಂಗಾಯತ ನಾಯಕರಲ್ಲ, ರೈತರ ನಾಯಕ, ಎಲ್ಲಾ ಸಮುದಾಯದವರು ಅವರನ್ನು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಸಂಸದರೊಬ್ಬರು ಹೇಳಿದ್ದಾರೆ.

ರಾಮನಗರ ಘಟನೆ ಯಡಿಯೂರಪ್ಪ ಅವರಿಗೆ ಹಿನ್ನಡೆಯಾದರೂ ಸದ್ಯಕ್ಕೆ ರಾಷ್ಚ್ರ ನಾಯಕರಿಗೆ ಯಡಿಯೂರಪ್ಪ ಅವರನ್ನು ಬಿಟ್ಟರೇ ಬೇರೆ ದಾರಿಯಿಲ್ಲ,.

ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆರ್ .ಅಶೋಕ್ ಹೆಸರು ಕೇಳಿ ಬರುತ್ತಿದೆ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಪ್ರಬಲ ಒಕ್ಕಲಿಗ ನಾಯಕರಾಗಿದ್ದಾರೆ, ಹೀಗಾಗಿ ಒಕ್ಕಲಿಗ ನಾಯಕನಾಗಿರುವ ಅಶೋಕ್ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿದರೇ ಕೆಲವು ಪ್ರಮಾಣದಲ್ಲಿ ಮಾತ್ರ ಒಕ್ಕಲಿಗ ಮತ ಗಳಿಸಲು ಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಳ್ಳಾರಿ ಉಪ ಚುನಾವಣೆ ನಂತರ ಲಿಂಗಾಯತ ನಿಷ್ಠೆ ಕಾಂಗ್ರೆಸ್ ನೆಡೆಗೆ ಬದಲಾಗಿದೆ, ಹೀಗಾಗಿ ಯಡಿಯೂರಪ್ಪ ಅವರನ್ನು ಬದಲಾಯಿಸಿದರೇ ಅಸಮಾಧಾನ ಉದ್ಭವವಾಗುವ ಸಾಧ್ಯತೆಯಿದೆ. ಹೀಗಾಗಿ ಲೋಕಸಭೆ ಚುನಾವಣೆವರೆಗೂ ಯಡಿಯೂರಪ್ಪ ಅವರನ್ನು ಬದಲಾಯಿಸುವ ಸಾದ್ಯತೆಯಿಲ್ಲ.

Comments are closed.