ರಾಷ್ಟ್ರೀಯ

ಗಜ ಚಂಡಮಾರುತಕ್ಕೆ ತಮಿಳುನಾಡಿನಲ್ಲಿ 11 ಮಂದಿ ಬಲಿ

Pinterest LinkedIn Tumblr

ಚೆನ್ನೈ: ಗಜ ಚಂಡಮಾರುತ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೀಸುತ್ತಿದ್ದು, ಪ್ರಾಕೃತಿಕ ವಿಕೋಪದ ಪರಿಣಾಮ ಇದುವರೆಗೆ 11 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಘೋಷಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕದ್ದಲೂರು ಜಿಲ್ಲೆಯಲ್ಲಿ ಇಂದು ಕಾಲಿಟ್ಟ ಗಜ ಚಂಡಮಾರುತದ ತೀವ್ರತೆಗೆ ಇಬ್ಬರು ಬಲಿಯಾಗಿದ್ದಾರೆ. ಅವರ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಆಗಿರುವ ಸಂಪತ್ ಕುಮಾರ್ ತಿಳಿಸಿದರು.

ಗಜ ಚಂಡಮಾರುತ ಕಾಲಿಟ್ಟಿದ್ದರಿಂದ ನಾಗಪಟ್ಟಿಣಂ, ತಿರುವಾರೂರು ಮತ್ತು ತಂಜಾವೂರು ಜಿಲ್ಲೆಗಳ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಮನೆಗಳು ಕುಸಿದು ಹಾನಿಗೀಡಾಗಿವೆ, ವಿದ್ಯುತ್ ಸಂಪರ್ಕ ಕಡಿತವಾಗಿದೆ.

ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ನಿಭಾಯಿಸುತ್ತಿದೆ. ಈ ಸಮಯ ನಮಗೆ ಸವಾಲಾಗಿದೆ ಎಂದು ಕಂದಾಯ ಸಚಿವ ಆರ್ ಬಿ ಉದಯ್ ಕುಮಾರ್ ತಿಳಿಸಿದ್ದಾರೆ.

Comments are closed.