ಕರ್ನಾಟಕ

ಜನಾರ್ದನ ರೆಡ್ಡಿ ಪರ ಯಡಿಯೂರಪ್ಪ ಬ್ಯಾಟಿಂಗ್​

Pinterest LinkedIn Tumblr


ಬೆಂಗಳೂರು: ಬಿಜೆಪಿಯಿಂದ ಉಚ್ಛಾಟಿತರಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ವಿರುದ್ಧ ಆಂಬಿಡೆಂಟ್​ ಕಿಕ್​ ಬ್ಯಾಕ್​ ಆರೋಪ ಬಂದು ಜೈಲು ಸೇರಿದರೂ ಬಿಜೆಪಿಯ ಯಾವ ನಾಯಕರೂ ರೆಡ್ಡಿ ಪರವಾಗಿ ಮಾತನಾಡಿರಲಿಲ್ಲ. ಖುದ್ದು ರೆಡ್ಡಿ ಆಪ್ತ ಶ್ರೀರಾಮುಲು ಕೂಡ ಈ ಸಂದರ್ಭದಲ್ಲಿ ಮೌನಕ್ಕೆ ಶರಣಾಗಿದ್ದರು.

ಆದರೆ, ನಿನ್ನೆ ಷರತ್ತುಬದ್ಧ ಜಾಮೀನು ಪಡೆದಿರುವ ಜನಾರ್ದನ ರೆಡ್ಡಿ ಜೈಲಿನಿಂದ ಹೊರಬರುತ್ತಿದ್ದಂತೆ ಬಿಜೆಪಿಯ ಕೆಲ ಶಾಸಕರು ಅವರ ಪರವಾಗಿ ಮಾತನಾಡಿದ್ದರು. ಇದೀಗ, ಈ ಪ್ರಕರಣ ಬೆಳಕಿಗೆ ಬಂದ ನಂತರ ಮೊದಲ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಜನಾರ್ದನ ರೆಡ್ಡಿ ಪರವಾಗಿ ಧ್ವನಿಯೆತ್ತಿದ್ದಾರೆ.

ಉಲ್ಟಾ ಹೊಡೆದ ಬಿಎಸ್​ವೈ:

ಗಣಿ ಅಕ್ರಮದಲ್ಲಿ ಜೈಲು ಪಾಲಾಗಿದ್ದ ಜನಾರ್ದನ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಇದೇ ಬಿಜೆಪಿ ನಾಯಕರು ರೆಡ್ಡಿಯೊಂದಿಗಿನ ಸಂಬಂಧವನ್ನು ಸಾರ್ವಜನಿಕವಾಗಿಯೇ ಮುರಿದುಕೊಂಡಿದ್ದರು. ಕಳೆದ ಬಾರಿ ವಿಧಾನ ಸಭಾ ಚುನಾವಣೆ ಪ್ರಚಾರಕ್ಕೆ ರಾಜ್ಯಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಕೂಡ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು. ಅಷ್ಟೇ ಯಾಕೆ? ಕಳೆದ ವಾರ ಸಿಸಿಬಿ ಪೊಲೀಸರು ಆಂಬಿಡೆಂಟ್​ ಪ್ರಕರಣದಲ್ಲಿ ರೆಡ್ಡಿಯವರನ್ನು ವಿಚಾರಣೆ ನಡೆಸಲು ತಮ್ಮ ವಶಕ್ಕೆ ಪಡೆದಾಗಲೂ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಯಾವ ಶಿಕ್ಷೆಯಾಗುತ್ತದೋ ಅದು ಆಗಿಯೇ ಆಗುತ್ತದೆ ಎಂದು ಇದೇ ಯಡಿಯೂರಪ್ಪನವರು ಹೇಳಿಕೆ ನೀಡಿದ್ದರು. ಆದರೆ, ಇದೀಗ ಇದ್ದಕ್ಕಿದ್ದಂತೆ ರೆಡ್ಡಿ ಪರವಾಗಿ ಅನುಕಂಪದ ಮಾತನಾಡಿರುವ ಬಿಎಸ್​ವೈ ಉಲ್ಟಾ ಹೊಡೆದಿದ್ದಾರೆ.

ಬಿಜೆಪಿಯ ಲೆಕ್ಕಾಚಾರವೇನು?:

ಈ ಮೊದಲು ಡಿ.ಕೆ. ಶಿವಕುಮಾರ್​ ಮೇಲೆ ಇಡಿ ದಾಳಿ ನಡೆದ ಸಂದರ್ಭದಲ್ಲಿ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ ಎಂದು ಕಾಂಗ್ರೆಸ್​ ನಾಯಕರು ಆರೋಪ ಹೊರಿಸಿದ್ದರು. ಬೇಕೆಂದೇ ಕಾಂಗ್ರೆಸ್​ನ ಪ್ರಭಾವಿ ನಾಯಕರ ಮೇಲೆ ಬಿಜೆಪಿ ರಾಜಕೀಯ ಪ್ರಭಾವ ಬಳಸಿ ದಾಳಿ ನಡೆಸುತ್ತಿವೆ ಎಂದು ಆಪಾದಿಸಿದ್ದವು. ಆದರೀಗ ಸಿಸಿಬಿ ಅಧಿಕಾರಿಗಳು ಜನಾರ್ದನ ರೆಡ್ಡಿಯನ್ನು ಬಂಧಿಸಿದ್ದರಿಂದ ಅದೇ ಆರೋಪವನ್ನು ರಾಜ್ಯ ಸರ್ಕಾರದ ಕಡೆಗೆ ತಿರುಗಿಸಲು ಬಿಎಸ್​ವೈ ಮುಂದಾಗಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಯೋಚಿಸಿರುವ ಯಡಿಯೂರಪ್ಪ ರೆಡ್ಡಿ ಪರವಾಗಿ ಮಾತನಾಡುವ ನೆಪದಲ್ಲಿ ರಾಜ್ಯ ಸರ್ಕಾರದ ಮೇಲೆ ಆರೋಪ ಹೊರಿಸಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಹೇಳಿದ್ದೇನು?:
ರಾಜ್ಯ ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಇಂದು ಮಾಧ್ಯಮ ಪ್ರಕಟಣೆ ಮಾಡಿರುವ ಯಡಿಯೂರಪ್ಪ ಹಲವು ವಿಚಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದ್ದು, ಆಡಳಿತ ಯಂತ್ರದ ದುರುಪಯೋಗವಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಕೊಲೆಗಳು ಹೆಚ್ಚುತ್ತಿವೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಸರ್ಕಾರದ ಎಲ್ಲ ಅಂಗಗಳೂ ಮುರಿದುಬಿದ್ದಿವೆ. ಇದೇ ರೀತಿ ಕಾನೂನು ವ್ಯವಸ್ಥೆ ಹದಗೆಟ್ಟರೆ ಯಾವ ಉದ್ಯಮಿಯೂ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಮುಂದೆ ಬರುವುದಿಲ್ಲ ಎಂದು ಬಿಎಸ್​ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಾರ್ದನ ರೆಡ್ಡಿ ಪರ ಬ್ಯಾಟಿಂಗ್​:

ಪೊಲೀಸ್ ವ್ಯವಸ್ಥೆಯಲ್ಲಿ ಸರ್ಕಾರ ರಾಜಕೀಯ ಹಸ್ತಕ್ಷೇಪ ಮಾಡಿದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜನಾರ್ದನ ರೆಡ್ಡಿ ಬಂಧನ, ಬಿಡುಗಡೆಯೇ ಇದಕ್ಕೆ ನಿದರ್ಶನ. ರಾಜಕೀಯವಾಗಿ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಲಾಗಿದೆ. ಎಸಿಬಿ, ಪೊಲೀಸ್ ವ್ಯವಸ್ಥೆ ದುರುಪಯೋಗ ಪಡಿಸಿಕೊಳ್ಳಲಾಗಿದೆ. ತಮಗೆ ಬೇಕಾದ ಹಾಗೆ ರಾಜ್ಯ ಸರ್ಕಾರ ಎಸಿಬಿಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಬಿ.ಎಸ್. ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಮಾಡಿದ್ದಾರೆ.

Comments are closed.