ಕರ್ನಾಟಕ

ಅಧಿಕಾರ ಇರುತ್ತೆ, ಹೋಗತ್ತೆ, ಅದಕ್ಕೆ ಕೇರ್​ ಮಾಡುವವನು ನಾನಲ್ಲ; ಸಿದ್ದರಾಮಯ್ಯ ಟ್ವೀಟ್​ ​

Pinterest LinkedIn Tumblr


ಬೆಂಗಳೂರು: ಬಿಜೆಪಿ ವಿರೋಧದ ನಡುವೆಯೂ ವಿವಾದಿತ ಟಿಪ್ಪು ಜಯಂತಿ ಆಚರಣೆಯನ್ನು ಮೈತ್ರಿ ಸರ್ಕಾರ ನಿನ್ನೆ ಆಚರಿಸಿದೆ. ಆದರೆ, ಈ ಸರ್ಕಾರಿ ಕಾರ್ಯಕ್ರಮಕ್ಕೆ ಆಡಳಿತ ಚುಕ್ಕಾಣಿ ಹಿಡಿದಿರುವ ಪ್ರಮುಖರೇ ಹಾಜರಾಗದಿರುವ ಕುರಿತು ಮಾಜಿ ಸಿಎಂ ಇಂದು ಟ್ವೀಟ್​ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬಂದ ಟಿಪ್ಪು ಜಯಂತಿಯನ್ನು ಈ ಬಾರಿ ಮೈತ್ರಿ ಸರ್ಕಾರದ ಪಾಲುದಾರರಾದ ಕಾಂಗ್ರೆಸ್-​ ಜೆಡಿಎಸ್​ ಶಾಸಕರು ಶನಿವಾರ ಆಚರಿಸಿದ್ದಾರೆ. ಆದರೆ, ಈ ಬಾರಿ ಕಾರ್ಯಕ್ರಮದಲ್ಲಿ ಸ್ವಪಕ್ಷೀಯ ನಾಯಕರು ಹಾಗೂ ವಿಧಾನಸೌಧದಲ್ಲಿ ಆಡಳಿತದ ಪ್ರಮುಖರೇ ಗೈರಾಗುವ ಮೂಲಕ ಪರೋಕ್ಷವಾಗಿ ಈ ಕಾರ್ಯಕ್ರಮದ ಆಚರಣೆ ಬಗ್ಗೆ ಅಸಮ್ಮತಿ ಸೂಚಿಸಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವೊಮ್ಮೆ ರಾಜಿಮಾಡಿಕೊಳ್ಳಬೇಕಾಗುತ್ತದೆ, ನಾನೂ ಮಾಡಿರಬಹುದು. ಆದರೆ ಜಾತ್ಯತೀತತೆಯಂತಹ ಮೂಲಭೂತದ ಸಿದ್ಧಾಂತದ ವಿಷಯದಲ್ಲಿ ನಾನು ರಾಜಿಮಾಡಿಕೊಳ್ಳಲಾರೆ. ಅಧಿಕಾರ ಇರುತ್ತೆ, ಹೋಗುತ್ತೆ. I don’t care.

ಟಿಪ್ಪು ಜಯಂತಿ ಆಚರಣೆ ಒಂದು ಕೋಮಿನ ಓಲೈಕೆಯಲ್ಲ. ಬದಲಾಗಿ ದೇಶಪ್ರೇಮಿ, ಜಾತ್ಯತೀತ ರಾಜನಾಗಿದ್ದ ಟಿಪ್ಪುವಿಗೆ ನೀಡುವ ಗೌರವ. ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಈ ನಾಡಿಗೆ ಬಗೆವ ದ್ರೋಹ. ನಾಡಿಗೆ ಕೊಡುಗೆ ನೀಡದ ಟಿಪ್ಪು ಸ್ಮರಿಸಿ ಅವರಿಗೆ ನೀಡುತ್ತಿರುವ ಗೌರವ ಎಂದು ಈ ಹಿಂದೆಯಿಂದಲೂ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆಯನ್ನು ಸಮರ್ಥಿಸಿಕೊಂಡು ಬಂದಿದ್ದಾರೆ.

ಆದರೆ, ಈಗ ತಮ್ಮ ಮೈತ್ರಿ ಪಕ್ಷವೇ ಈ ಆಚರಣೆಗೆ ಅಸಹಕಾರ ನೀಡಿರುತ್ತಿರುವುದು ಸಿದ್ದರಾಮಯ್ಯ ಕಣ್ಣು ಕೆಂಪಾಗಿಸಿದೆ. ಈ ಹಿಂದೆ ತಾವು ನೀಡಿದ ಹೇಳಿಕೆಗೆ ಕಟ್ಟು ಬಿದ್ದು ಅಥವಾ ಮತರಾಜಕಾರಣ ದೃಷ್ಟಿಯಿಂದ ಕೆಲವರು ಸರ್ಕಾರದ ಆಚರಣೆಯಿಂದ ದೂರವಿರುವುದು ಸಮಂಜಸವಲ್ಲ. ಸಾರ್ವಜನಿಕ ಹಿತದೃಷ್ಠಿಯಿಂದ ಕೆಲವೊಂದು ವಿಷಯಗಳನ್ನು ರಾಜಿ ಮಾಡಿಕೊಳ್ಳಬೇಕು. ಆ ರೀತಿ ನಾನು ಕೂಡ ಮಾಡಿಕೊಂಡಿದ್ದೇನೆ. ಆದರೆ, ಜಾತ್ಯಾತೀತ ವಿಚಾರದಲ್ಲಿ ನನ್ನ ನಿಲುವು ಅಚಲ ಎಂದು ಸ್ವಪಕ್ಷೀಯರು ಹಾಗೂ ಮೈತ್ರಿ ಪಕ್ಷದ ನಾಯಕರ ನಡೆಗೆ ಗರಂ ಆಗಿದ್ದಾರೆ.

ಅಧಿಕಾರಕ್ಕಾಗಿ ತಮ್ಮ ಮೂಲ ಸಿದ್ದಾಂತಗಳನ್ನು ಎಲ್ಲ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಸರಿಯಲ್ಲ. ಅಧಿಕಾರಕ್ಕಿಂತ ನಮ್ಮ ಸಿದ್ಧಾಂತ ಮುಖ್ಯ. ಅದನ್ನು ನಾವು ಮರೆಯಬಾರದು ಎಂದು ಪರೋಕ್ಷವಾಗಿ ಹೇಳುವ ಮೂಲಕ ತಮ್ಮ ಮೈತ್ರಿ ಸರ್ಕಾರದ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Comments are closed.