ಕರ್ನಾಟಕ

ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣ: ಸಿಸಿಬಿ ವಿಚಾರಣೆ ಬಳಿಕ ಜನಾರ್ಧನ ರೆಡ್ಡಿ ಬಂಧನ

Pinterest LinkedIn Tumblr

ಬೆಂಗಳೂರು: ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ನೋಟಿಸ್ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾದ ರೆಡ್ಡಿ ಹಾಗೂ ಪ್ರಕರಣದ ಪ್ರಮುಖ ಆರೋಪಿಗಳಾದ ಆ್ಯಂಬಿಡೆಂಟ್ ಕಂಪನಿ ಮಾಲೀಕ ಸೈಯದ್ ಅಹಮ್ಮದ್ ಫರೀದ್ ಮತ್ತು ರೆಡ್ಡಿ ಆಪ್ತ ಸಹಾಯಕ ಅಲಿಖಾನ್ ಅವರನ್ನು ಸಿಸಿಬಿ ಪೊಲೀಸರು ತಡರಾತ್ರಿವರೆಗೂ ವಿಚಾರಣೆಗೊಳಪಡಿಸಿದರು.

ರೆಡ್ಡಿಯವರನ್ನು ಸುದೀರ್ಘ ಕಾಲ ವಿಚಾರಣೆಗೊಳಪಡಿಸಿದ್ದ ಸಿಸಿಬಿ ಪೊಲೀಸರು ಇದೀಗ ರೆಡ್ಡಿಯವರನ್ನು ಬಂಧನಕ್ಕೊಳಪಡಿಸಿದ್ದಾರೆಂದು ವರದಿಗಳು ತಿಳಿಸಿವೆ.

ಪ್ರಸ್ತುತ ರೆಡ್ಡಿಯವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಶೀಘ್ರದಲ್ಲಿಯೇ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಿದ್ದು, ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆಂದು ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ ಸಿಕ್ಕಿರುವ ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆ ಮೇರೆಗೆ ರೆಡ್ಡಿಯವರನ್ನು ಬಂಧಿಸಲು ನಿರ್ಧರಿಸಿದ್ದೇವೆ. ಶೀಘ್ರದಲ್ಲಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತೇವೆ. ಬಳಿಕ ಹಣವನ್ನು ವಶಕ್ಕೆ ಪಡೆದುಕೊಂಡು ಹೂಡಿಕೆದಾರರಿಗೆ ನೀಡಲಾಗುತ್ತದೆ ಎಂದು ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಅವರು ಹೇಳಿದ್ದಾರೆ.

ಈ ನಡುವೆ ಪ್ರಕರಣ ಸಂಬಂಧ ರೆಡ್ಡಿ ಆಪ್ತ ಅಲಿ ಖಾನ್ ಅವರನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಸಿಸಿಬಿ ಮುಂದೆ ಹಾಜರಾಗುವಂತೆ ಶುಕ್ರವಾರ ನ್ಯಾಯಾಲಯ ನೀಡಿದ್ದ ಖಡಕ್ ಸೂಚನೆಗೆ ಶಿರಬಾಗಿದ ರೆಡ್ಡಿ, ತಮ್ಮ ವಕೀಲ ಚಂದ್ರಶೇಖರ್ ಕಾರಿನಲ್ಲೇ ಆಗಮಿಸಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು. ಜನಾರ್ಧನ ರೆಡ್ಡಿ ಹಾಗೂ ಅಲಿಖಾನ್ ಗಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಿಸಿಬಿ ಹಗಲಿರುಳು ಶೋಧ ನಡೆಸಿತ್ತು.

ಸಿಸಿಬಿ ಕಚೇರಿಯಲ್ಲಿ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಡಿಸಿಪಿ ಎಸ್ ಗಿರೀಶ್ ಹಾಗೂ ಪ್ರಕರಣದ ತನಿಖಾಧಿಕಾರಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರು ಪ್ರಕರಣ ಸಂಬಂಧ ಜನಾರ್ಧನ ರೆಡ್ಡಿ ಹಾಗೂ ಆ್ಯಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಅವರನ್ನು ಮುಖಾಮುಖಿಯಾಗಿ ವಿಚಾರಣೆ ನಡೆಸಿದ್ದಾರೆ.

Comments are closed.