ಕರ್ನಾಟಕ

ನನ್ನ ಮಗ ಚಂದ್ರಶೇಖರ್ ದುರಂತ ನಾಯಕ, ಅವನ ಪರವಾಗಿ ಕ್ಷಮೆಯಾಚಿಸುತ್ತೇನೆ; ಕಾಂಗ್ರೆಸ್​ ನಾಯಕ ಲಿಂಗಪ್ಪ

Pinterest LinkedIn Tumblr


ರಾಮನಗರ: ಟಿಕೆಟ್​ ಸಿಗದ ಹಿನ್ನಲೆಯಲ್ಲಿ ಬಿಜೆಪಿಗೆ ಹೋಗಿ ಬಿ ಫಾರಂ ಪಡೆದು ಕೊನೆಗಳಿಗೆಯಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದ ಮಗ ಚಂದ್ರಶೇಖರ್​ ನಡೆಗೆ ಕಾಂಗ್ರೆಸ್​ ಎಂಎಲ್​ಸಿ ಎಂ ಲಿಂಗಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ಮೈತ್ರಿ ಪಕ್ಷದ ಅಭ್ಯರ್ಥಿ ಗೆದ್ದರೂ ಸಂಭ್ರಮಿಸುವ ಮನಸ್ಥಿತಿಯಲ್ಲಿ ಲಿಂಗಪ್ಪ ಅವರು ಇಲ್ಲ. ಮಗನ ಕಾರ್ಯದಿಂದ ನೊಂದಿರುವ ಅವರು ಇಂದು ಸುದ್ದಿಗೋಷ್ಠಿ ನಡೆಸಿ, ತಮ್ಮ ಮಗನ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.

ಪಕ್ಷ ಟಿಕೆಟ್​ ನೀಡಿದ ಮೇಲೆ ಸಮರ್ಥವಾಗಿ ಚುನಾವಣೆ ಎದುರಿಸಬೇಕು. ಯುದ್ಧಕ್ಕೆ ಹೊರಟವರು ಪಲಾಯನ ಮಾಡುವುದು ಹೇಡಿಗಳ ಕೆಲಸ. ಯಾವ ಪಕ್ಷದಲ್ಲೂ ಈ ರೀತಿಯ ಘಟನೆ ನಡೆಯಬಾರದು. ಅವನ ಕೆಲಸಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದರು.

ಚಂದ್ರಶೇಖರ್​ ನಡೆ ಕೇವಲ ಬಿಜೆಪಿ ನಾಯಕರಿಗೆ ಮಾತ್ರವಲ್ಲ, ನಮ್ಮ ಕುಟುಂಬಕ್ಕೂ ಬೇಜಾರು ನೀಡಿದೆ. ಅವರಿಗೆ ಟಿಕೆಟ್​ ನೀಡಿದವರಿಗೆ ಕ್ಷಮೆಯಾಚಿಸುತ್ತೇನೆ. ಚಂದ್ರ ಶೇಖರ್​ ನಡೆ ಸಾವಿರಾರು ಜನರಲ್ಲಿ ನಿರಾಸೆ ಮೂಡಿಸಿದೆ. ಮನೆಯಲ್ಲಿ ಸೂತಕದ ಛಾಯೆ ಮೂಡಿದೆ ಎಂದು ನೋವನ್ನು ವ್ಯಕ್ತಪಡಿಸಿದ್ದರು.

ಇದನ್ನು ಓದಿ: ಸಂಪುಟ ವಿಸ್ತರಣೆ: ಮುಹೂರ್ತ ನಿಗದಿ, ಯಾವುದೇ ಕಾರಣಕ್ಕೂ ವಿಳಂಬ ಬೇಡ ಎಂದು ಕಾಂಗ್ರೆಸ್​ಗೆ ಎಚ್​​ಡಿಡಿ ಸೂಚನೆ..!

ಅವನು ಮಾಡಿದ ತಪ್ಪಿಗೆ ಇವರಪ್ಪ ಇವನನ್ನು ನ್ಯಾಯವಾಗಿ ಹುಟ್ಟಿಸಿದ್ದಾನಾ ಎಂಬ ಅವಾಚ್ಯ ಮಾತುಗಳು ಜನರ ಬಾಯಲ್ಲಿ ಬರುತ್ತಿದೆ. ಮಗ ಮಾಡಿದ ತಪ್ಪಿಗೆ ನಾನೇನು ಮಾಡಲು ಸಾಧ್ಯ ಎಂದು ನೊಂದುಕೊಂಡಿದ್ದರು.

ಮಗ ಮಾಡಿದ ತಪ್ಪಿಗೆ ನಾನು ಮತ್ತೊಮ್ಮೆ ಜನರನ್ನು ಕೈ ಮುಗಿದು ಕ್ಷಮೆಯಾಚಿಸುತ್ತೇನೆ. ನನ್ನ ಎಂಎಲ್​ಸಿ ಅವಧಿ ಪೂರೈಸಿದ ಬಳಿಕ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದರು.

Comments are closed.