ಕರ್ನಾಟಕ

ಉಪಚುನಾವಣೆಯ ಸಂಪೂರ್ಣ ವಿವರ

Pinterest LinkedIn Tumblr


ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಅಂತಿಮ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಪಕ್ಷಗಳಿಗೆ ಮತದಾರ ದೊಡ್ಡ ಗೆಲುವನ್ನೇ ಕರುಣಿಸಿದ್ದಾನೆ. ರಾಮನಗರ ಹಾಗೂ ಜಮಖಂಡಿ ವಿಧಾನಕ್ಷೇತ್ರ ಮತ್ತು ಮಂಡ್ಯ, ಬಳ್ಳಾರಿ ಲೋಕಸಭಾ ಕ್ಷೇತ್ರಗಳು ಮೈತ್ರಿ ಅಭ್ಯರ್ಥಿಗಳ ಪಾಲಾಗಿದ್ದು, ಶಿವಮೊಗ್ಗ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಗೆಲುವು ಕಂಡಿದ್ದಾರೆ.

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸ್ಪ್ರರ್ಧಿಸಿದ್ದ ಜೆಡಿಎಸ್​ನ ಎಲ್​.ಆರ್​.ಶಿವರಾಮೇಗೌಡ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿ ಡಾ.ಸಿದ್ದರಾಮಯ್ಯ 2,44,377 ಮತ ಪಡೆದರೆ, ಶಿವರಾಮೇಗೌಡ ಬರೋಬ್ಬರಿ 5,69,302 ಮತಗಳನ್ನು ಪಡೆದಿದ್ದಾರೆ. 3,24,925 ಮತಗಳ ಭಾರೀ ಅಂತರದಿಂದ ಪ್ರತಿಸ್ಪರ್ಧಿಯನ್ನು ಸೋಲಿಸುವ ಮೂಲಕ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಆನಂದ ನ್ಯಾಮಗೌಡ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀಕಾಂತ್ ಕುಲಕರ್ಣಿ 57,492 ಮತಗಳನ್ನು ಪಡೆದರೆ, ಆನಂದ ನ್ಯಾಮಗೌಡ ಅವರು 96,968 ಮತಗಳನ್ನು ಪಡೆದು, 39,482 ಮತಗಳ ಅಂತರದಿಂದ ಪ್ರತಿಸ್ಪರ್ಧಿಯನ್ನು ಸೋಲಿಸಿದರು.

ಬಿಜೆಪಿಯ ಭದ್ರಕೋಟೆಯಾಗಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರ ಕಾಂಗ್ರೆಸ್​ ತೆಕ್ಕೆಗೆ ಜಾರಿದೆ. ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ವಿ.ಎಸ್​.ಉಗ್ರಪ್ಪ ಬಿಜೆಪಿಯ ಜೆ.ಶಾಂತಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಉಗ್ರಪ್ಪ 6,28,163 ಮತಗಳನ್ನು ಪಡೆದರೆ, ಶಾಂತಾ ಅವರು 3,84,892 ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಉಗ್ರಪ್ಪ ಅವರು ಬರೋಬ್ಬರಿ 2,43,271 ಮತಗಳ ಅಂತರದ ಗೆಲುವು ದಾಖಲಿಸಿದರು.‘

ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಬಿ.ಎಸ್​.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರು 5,43,306 ಮತಗಳನ್ನು ಪಡೆದರೆ, ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ 4,91,158 ಮತಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಗೆಲುವಿನ ಮತಗಳ ಅಂತರದ ಪ್ರಮಾಣ ಕಳೆದ ಬಾರಿಗೆ ಹೋಲಿಸಿಕೊಂಡರೆ, ಈ ಬಾರಿ ಭಾರೀ ಕಡಿಮೆಯಾಗಿದೆ.

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಜೆಡಿಎಸ್​ನ ಅನಿತಾ ಕುಮಾರಸ್ವಾಮಿ ಅವರು ಜಯಭೇರಿ ಬಾರಿಸಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು 1,14,874 ಮತಗಳನ್ನು ಪಡೆದು, 1,00,246 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಮತದಾನಕ್ಕೆ ಎರಡು ದಿನ ಬಾಕಿ ಇರುವಂತೆ ಬಿಜೆಪಿ ಎಲ್​.ಚಂದ್ರಶೇಖರ್ ಚುನಾವಣೆಯಿಂದ ಹಿಂದೆ ಸರಿದು, ಜೆಡಿಎಸ್​ಗೆ ಬೆಂಬಲ ಘೋಷಿಸಿದ್ದರು. ಆದರೂ ಬಿಜೆಪಿ ಅಭ್ಯರ್ಥಿಗೆ 14,628 ಮತಗಳು ಸಿಕ್ಕಿವೆ.

ಬಳ್ಳಾರಿ ಲೋಕಸಭೆ ಕ್ಷೇತ್ರ

ಉಗ್ರಪ್ಪ (ಕಾಂಗ್ರೆಸ್​) – 6,28,163

ಜೆ.ಶಾಂತಾ (ಬಿಜೆಪಿ) – 3,84,892

ಗೆಲುವಿನ ಅಂತರ – 2,43,271

ಮಂಡ್ಯ ಲೋಕಸಭೆ

ಎಲ್.ಆರ್.ಶಿವರಾಮೇಗೌಡ (ಜೆಡಿಎಸ್ ) – 5,69,302

ಡಾ.ಸಿದ್ದರಾಮಯ್ಯ (ಬಿಜೆಪಿ) 2,44,377

ಗೆಲುವಿನ ಅಂತರ – 3,24,925

ನೋಟಾ – 15,478

ಚಲಾವಣೆಯಾದ ಮತ 8,92,452

ಜಮಖಂಡಿ ವಿಧಾನಸಭಾ ಕ್ಷೇತ್ರ

ಆನಂದ ನ್ಯಾಮಗೌಡ (ಕಾಂಗ್ರೆಸ್)- 96,968

ಶ್ರೀಕಾಂತ ಕುಲಕರ್ಣಿ (ಬಿಜೆಪಿ)-57,492

ಗೆಲುವಿನ ಅಂತರ – 39,482

ಶಿವಮೊಗ್ಗ ಲೋಕಸಭಾ ಕ್ಷೇತ್ರ

ಬಿ.ವೈ.ರಾಘವೇಂದ್ರ (ಬಿಜೆಪಿ) – 5,43,306

ಮಧು ಬಂಗಾರಪ್ಪ (ಜೆಡಿಎಸ್​ ) – 4,91,158

ಗೆಲುವಿನ ಅಂತರ – 52,148

ರಾಮನಗರ ವಿಧಾನಸಭಾ ಕ್ಷೇತ್ರ

ಅನಿತಾ ಕುಮಾರಸ್ವಾಮಿ (ಜೆಡಿಎಸ್​) – 1,14,874

ಎಲ್​.ಚಂದ್ರಶೇಖರ್​ (ಬಿಜೆಪಿ )- 14,628

ಗೆಲುವಿನ ಅಂತರ – 1,00,246

Comments are closed.