ಕರ್ನಾಟಕ

ಬೆಂಗಳೂರಿನಲ್ಲಿ ಮನೆ ಉರುಳಿಸಲು ತಯಾರಾದ ಪಟ್ಟಿ

Pinterest LinkedIn Tumblr


ಬೆಂಗಳೂರು: ಬಡ- ಮಧ್ಯಮ ವರ್ಗದವರ ಮನೆಗಳನ್ನ ಉರುಳಿಸಲು ಬಿಬಿಎಂಪಿ ಮತ್ತು ಜಿಲ್ಲಾಡಳಿತ ಸದ್ದಿಲ್ಲದೆ ತಯಾರಿ ನಡೆಸಿದೆ. ಈಗಾಗಲೇ ಬಿಬಿಎಂಪಿ ಸರ್ವೆಯರ್​ಗಳ ಮೂಲಕ ವಿವಿಧ ಪ್ರಕರಣಗಳಲ್ಲಿ ಸರ್ವೆ ನಡೆಸಿದೆ. ಆದರೆ ಆ ಸರ್ವೆ ವರದಿಯಲ್ಲೆಲ್ಲೂ ದೊಡ್ಡ ದೊಡ್ಡ ಶ್ರೀಮಂತರ ಕಾಂಪ್ಲೆಕ್ಸ್, ಮಾಲ್​ಗಳಿಲ್ಲ. ಬಿಬಿಎಂಪಿ ಅಧಿಕಾರಿಗಳಾಗಲಿ, ಬೆಂಗಳೂರು ಜಿಲ್ಲಾಡಳಿತದ ಸರ್ವೆಯರ್ ಕಣ್ಣಿಗಾಗಲಿ ಶ್ರೀಮಂತರ ಸ್ವತ್ತುಗಳೇ ಕಣ್ಣಿಗೆ ಬಿದ್ದೇ ಇಲ್ಲ. ಹಾಗಾದ್ರೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಯಾವಾಗ ಆರಂಭ ಆಗುತ್ತೆ ? ಎಷ್ಟು ಮನೆಗಳು ಧರೆಗುರುಳುತ್ತೆ? ಇಲ್ಲಿದೆ ವರದಿ.

ಬೆಂಗಳೂರಿನಲ್ಲಿ ರಾಜಕಾಲುವೆಗಳ ಪಕ್ಕ ಮತ್ತು ಅದರ ಮೇಲೆ ಕಟ್ಟಿದ ಕಟ್ಟಡ ಹಾಗೂ ಮನೆಗಳನ್ನು ಕೆಡವಲು ಬಿಬಿಎಂಪಿ ಅಧಿಕಾರಿಗಳು ಸಿದ್ದತೆ ಕೈಗೊಂಡಿದೆ. ಬಿಬಿಎಂಪಿಯು ಜೂನ್ 14 ರಿಂದ ಜುಲೈ 21ರ ತನಕ ರಾಜಧಾನಿಯ 450 ಪ್ರಕರಣಗಳಲ್ಲಿ ಸರ್ವೆ ಕಾರ್ಯ ಮಾಡಿ ಮುಗಿಸಿದೆ. ಕೆಲವು ಕಡೆಗಳಲ್ಲಿ ಈಗಾಗಲೇ ಮಾರ್ಕಿಂಗ್ ಕಾರ್ಯ ಪೂರ್ಣಗೊಂಡಿದ್ದರೆ ಕೆಲವೆಡೆ ಇನ್ನೂ ಮಾರ್ಕಿಂಗ್ ಮುಗಿಸಿಲ್ಲ. ಸಾರ್ವಜನಿಕರು ಸಂತೋಷದಿಂದ ದಸರಾ ಹಬ್ಬ ಆಚರಿಸಿದ ಬಳಿಕ ನಗರದ ಹಲವೆಡೆ ಪ್ರಾರಂಭದಲ್ಲಿ 71 ಮನೆಗಳನ್ನು ಧರೆಗುರುಳಿಸಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಕೈಗೊಳ್ಳಲು ಪಾಲಿಕೆ ದಿನಾಂಕ ನಿಗಧಿಪಡಿಸಿದೆ. ಅಕ್ಟೋಬರ್ 29 ರಿಂದ ತೆರವು ಕಾರ್ಯ ಆರಂಭವಾಗಲಿದೆ ಎಂದು ಉನ್ನತ ಮೂಲಗಳಿಂದ ಖಚಿತ ಮಾಹಿತಿ ಲಭ್ಯವಾಗಿದೆ. ಮಾರ್ಕಿಂಗ್ ಆಗುವ ತನಕ ಹಿಂದಿನ ಸರ್ವೆಯರ್ ಗಳನ್ನ ಉಳಿಸಲು ನಿರ್ಧರಿಸಲಾಗಿದೆ. ಬೃಹತ್ ನೀರುಗಾಲುವೆ ಚೀಫ್ ಎಂಜಿನಿಯರ್ ಇದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಆದರೆ ಈ 450 ಪ್ರಕರಣಗಳ ವರದಿ News18 ಕನ್ನಡಕ್ಕೆ ಲಭ್ಯವಾಗಿದೆ. ಈ ವರದಿಯನ್ನ ಪೂರ್ಣವಾಗಿ ಗಮನಿಸಿದಾಗ ಇಲ್ಲೆಲ್ಲೂ ಪ್ರಭಾವಿಗಳ, ಶ್ರೀಮಂತರ ಅಥವಾ ಜನಪ್ರತಿನಿಧಿಗಳ ಬೇನಾಮಿ ಕಾಂಪ್ಲೆಕ್ಸ್, ಮಾಲ್ ಅಥವಾ ದೊಡ್ಡ ದೊಡ್ಡ ಬಿಲ್ಡಿಂಗ್ ಗಳು ಸರ್ವೆಯಲ್ಲಿ ಕಂಡು ಬಂದೇ ಇಲ್ಲ. ಈ ಬಾರಿಯೂ ಒತ್ತುವರಿ ತೆರವಿನಲ್ಲಿ ತಾರತಮ್ಯ ಆಗಿರೋದು ಕಂಡು ಬಂದಿದೆ. ನಗರದಲ್ಲಿನ 8 ವಲಯಗಳ ಪೈಕಿ ನಾಲ್ಕು ವಲಯಗಳಲ್ಲಿ ಬಿಬಿಎಂಪಿ ಬೃಹತ್ ನೀರುಗಾಲುವೆ ಅಧಿಕಾರಿಗಳು ಸರ್ವೆ ಮಾಡಲು ಮನಸ್ಸು ಮಾಡಿದ್ದಾರೆ.

ಎಷ್ಟೆಷ್ಟು ಮನೆಗಳು, ಅಪಾರ್ಟ್ ಮೆಂಟ್, ಫ್ಯಾಕ್ಟರಿಗಳು?

ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆ ನಡೆಸಿದ ಸರ್ವೆಯಲ್ಲಿ ಅತಿಹೆಚ್ಚು ಒತ್ತುವರಿ ಕಂಡು ಬಂದಿರೋದು ಮಹದೇವಪುರ ವಲಯದಲ್ಲಿ. ಇಲ್ಲಿ ಒಟ್ಟು 226 ಪ್ರಕರಣಗಳಲ್ಲಿ 46 ಕಟ್ಟಡ ಅಥವಾ ಮನೆಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರೋದು ಕಂಡು ಸರ್ವೆಯಿಂದ ಕಂಡು ಬಂದಿದೆ. ಇನ್ನು ದಕ್ಷಿಣ ವಲಯದಲ್ಲಿ 20 ಪ್ರಕರಣಗಳಲ್ಲಿ 17 ಮನೆಗಳು, ಯಲಹಂಕ ಜೋನ್ ನಲ್ಲಿ 202 ಪ್ರಕರಣಗಳಲ್ಲಿ 7 ಮನೆ ಅಥವಾ ಕಟ್ಟಡ, 1 ಫ್ಯಾಕ್ಟರಿ, 1 ಅಪಾರ್ಟ್ ಮೆಂಟ್ ಗಳು ಒತ್ತುವರಿ ಸರ್ವೆಯಲ್ಲಿ ಗುರ್ತಿಸಲಾಗಿದೆ. ಇನ್ನು ರಾಜರಾಜೇಶ್ವರಿ ನಗರದಲ್ಲಿ 2 ಪ್ರಕರಣಗಳಲ್ಲಿ 1 ಕಟ್ಟಡವನ್ನು ಗುರ್ತಿಸಿದ್ದು, ಇದರ ತೆರವಿಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.

Comments are closed.