ಕರ್ನಾಟಕ

ಸರಿಯಾಗಿ ತೆರಿಗೆ ಪಾವತಿಸುವವರಿಗೆ ಕೇಂದ್ರದಿಂದ ವಿವಿಧ ಸೌಲಭ್ಯ

Pinterest LinkedIn Tumblr


ಬೆಂಗಳೂರು: ಸಾವಿರಾರು ಕೋಟಿ ತೆರಿಗೆ ಬಾಕಿ ಉಳಿಸಿಕೊಂಡು ಆರಾಮವಗಿರುವ ಗಣ್ಯರನ್ನ ನೋಡಿ ಪ್ರಾಮಾಣಿಕ ತೆರಿಗೆ ಪಾವತಿದಾರರು ಹೊಟ್ಟೆಯುರಿದು ಸರಕಾರಕ್ಕೆ ಹಿಡಿಶಾಪ ಹಾಕುವುದನ್ನು ನಾವು ನೋಡಿಯೇ ಇರುತ್ತೇವೆ. ನಾವು ತೆರಿಗೆ ಕಟ್ಟಿ ಏನು ಪ್ರಯೋಜನ? ಎಂಬ ನಿರುತ್ಸಾಹ ಬಹುತೇಕ ಮಂದಿಯಲ್ಲಿ ಮನೆ ಮಾಡಿದೆ. ಇಂಥ ಸಮಸ್ಯೆ ನೀಗಿಸಲು ಹಾಗೂ ಆದಾಯ ತೆರಿಗೆ ಪಾವತಿಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರಕಾರ ವಿನೂತನ ಕ್ರಮಕ್ಕೆ ಮುಂದಾಗಿದೆ. ಸಮಯಕ್ಕೆ ಸರಿಯಾಗಿ ತಪ್ಪದೇ ತೆರಿಗೆ ಪಾವತಿ ಮಾಡುವವರನ್ನು ಗುರುತಿಸಿ ವಿಶೇಷ ಸೌಲಭ್ಯಗಳನ್ನ ಒದಗಿಸಲು ಕೇಂದ್ರ ಉದ್ದೇಶಿಸಿದೆ. ಈ ಮೂಲಕ ಜನರಲ್ಲಿ ಆದಾಯ ತೆರಿಗೆ ಪಾವತಿ ಬಗ್ಗೆ ಆಸಕ್ತಿ ಮತ್ತು ಪ್ರಾಮಾಣಿಕತೆ ಮೂಡಿಸುವ ಪ್ರಯತ್ನ ಮಾಡಲಿದೆ. ಕಳೆದ ವರ್ಷವಷ್ಟೇ ಪ್ರಧಾನಿ ಮೋದಿ ಅವರು ಹಿರಿಯ ತೆರಿಗೆ ಅಧಿಕಾರಿಗಳ ಸಮಾವೇಶದಲ್ಲಿ ಮಾತನಾಡುತ್ತಾ, ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಪ್ರಾಮುಖ್ಯತೆಯನ್ನು ಕೊಡುವ ಬಗ್ಗೆ ಮಾತನಾಡಿದ್ದರು. ಇದೀಗ ಆ ಆಶಯವನ್ನು ಆಚರಣೆಗೆ ತರುವ ನಿಟ್ಟಿನಲ್ಲಿ ಹಣಕಾಸು ಇಲಾಖೆಯು ಕೇಂದ್ರೀಯ ನೇರ ತೆರಿಗೆ ಮಂಡಳಿಯಡಿಯಲ್ಲಿ ಸಮಿತಿಯೊಂದನ್ನ ರಚಿಸಿದೆ. ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ಹೇಗೆ ಗುರುತಿಸುವುದು, ಅವರಿಗೆ ಏನೆಲ್ಲಾ ಸೌಲಭ್ಯಗಳನ್ನು ನೀಡಬಹುದು ಇತ್ಯಾದಿ ಅಂಶಗಳನ್ನ ಈ ಸಮಿತಿಯು ಪರಿಶೀಲಿಸಿ ವರದಿ ಕೊಡಲಿದೆ. ಅದರ ಅಧಾರದ ಮೇಲೆ ಹಣಕಾಸು ಸಚಿವಾಲಯು ಪ್ರಧಾನಿ ಕಚೇರಿಗೆ ಪ್ರಸ್ತಾವನೆಯನ್ನ ಕಳುಹಿಸಲಿದೆ.

ಬೆಂಗಳೂರಿನಲ್ಲಿರುವ ತೆರಿಗೆ ಸಂಸ್ಕರಣೆ ಕೇಂದ್ರವಾದ ಸಿಪಿಸಿ ಕಚೇರಿಯ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದ್ದು, ತೆರಿಗೆ ಪಾವತಿದಾರರ ಐಟಿ ರಿಟರ್ನ್​ಗಳನ್ನು ತ್ವರಿತ ಗತಿಯಲ್ಲಿ ಸಂಸ್ಕರಿಸುವ ಕಡೆ ಆದ್ಯತೆ ಕೊಡಲಾಗುತ್ತಿದೆ. ದಿನಗಳಲ್ಲಿ ಆಗುವ ಕೆಲಸವು ಈಗ ಗಂಟೆಗಳ ಲೆಕ್ಕದಲ್ಲಿ ಮುಕ್ತಾಯವಾಗುವ ಗುರಿ ಹೊಂದಲಾಗಿದೆ ಎಂದು ಪಿಟಿಐ ವರದಿಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಸದ್ಯ 8 ಕೋಟಿ ಜನರು ಇನ್​ಕಮ್ ಟ್ಯಾಕ್ಸ್ ಕಟ್ಟುತ್ತಿದ್ದಾರೆ. ಈ ಪ್ರಮಾಣವನ್ನು 2019ರ ಮಾರ್ಚ್​ನಷ್ಟರಲ್ಲಿ 9.25 ಕೋಟಿ ಜನರಿಗೆ ಹೆಚ್ಚಿಸುವ ಟಾರ್ಗೆಟ್ ಇಟ್ಟುಕೊಳ್ಳಲಾಗಿದೆ. ಈ ಗುರಿ ಮುಟ್ಟುವ ನಿಟ್ಟಿನಲ್ಲಿ ತೆರಿಗೆ ಪಾವತಿದಾರರಿಗೆ ಉತ್ತೇಜನ ಕೊಡುವಂಥ ಯೋಜನೆಗಳನ್ನ ಕೇಂದ್ರ ಹಮ್ಮಿಕೊಂಡಿದೆ.

ತೆರಿಗೆ ಪಾವತಿದಾರರಿಗೆ ಏನೆಲ್ಲಾ ಸೌಲಭ್ಯ ಸಿಗಬಹುದು?

ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸುವ ವ್ಯಕ್ತಿಗಳಿಗೆ ವಿಶೇಷ ಐಡಿ ನಂಬರ್ ಒದಗಿಸಲು ಅಥವಾ ಅವರ ಪ್ಯಾನ್ ನಂಬರ್​ಗೆ ವಿಶೇಷ ಗುರುತು ನೀಡುವ ಒಂದು ಐಡಿಯಾ ಕೇಂದ್ರಕ್ಕಿದೆ. ಈ ಐಡಿ ನಂಬರ್ ಅಥವಾ ಪ್ಯಾನ್ ನಂಬರ್ ಹೊಂದಿರುವ ವ್ಯಕ್ತಿಗಳಿಗೆ ವಿವಿಧ ನಾಗರಿಕ ಸೇವೆಗಳಲ್ಲಿ ಆದ್ಯತೆ ಕೊಡುವ ಇರಾದೆ ಕೇಂದ್ರದ್ದಾಗಿದೆ.

* ಸಾರ್ವಜನಿಕವಾಗಿ ಸನ್ಮಾನ ಮಾಡುವುದು ಅಥವಾ ಗೌರವಿಸುವುದು.
* ಏರ್​ಪೋರ್ಟ್, ರೈಲ್ವೆ ನಿಲ್ದಾಣ, ಹೆದ್ದಾರಿ ಟೋಲ್​ಗಳಲ್ಲಿನ ಸೇವೆಗಳಲ್ಲಿ ಆದ್ಯತೆ

Comments are closed.