ಕರ್ನಾಟಕ

ದುಬೈಯಲ್ಲಿ ಮೀನುಗಾರಿಕೆಗೆ ತೆರಳಿದ ಕರ್ನಾಟಕ ಮೂಲದ 18 ಮೀನುಗಾರರನ್ನು ಬಂಧಿಸಿಟ್ಟಿರುವ ಇರಾನ್ ಭದ್ರತಾ ಪಡೆ

Pinterest LinkedIn Tumblr

ಕಾರವಾರ: ದುಬೈ ಕರಾವಳಿ ತೀರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗಲೇ ಇರಾನ್ ಒಡೆತನದ ಸಮುದ್ರ ಭಾಗ ಪ್ರವೇಶಿಸಿದ್ದ ಕರ್ನಾಟಕ ಮೂಲದ 18 ಮೀನುಗಾರರನ್ನು ಇರಾನ್ ಭದ್ರತಾ ಪಡೆ ಬಂಧಿಸಿದೆ.

ಜುಲೈನಿಂದಲೂ ಈ ಮೀನುಗಾರರು ಇರಾನಿನಲ್ಲಿ ಜೈಲುವಶ ಅನುಭವಿಸುತ್ತಿದ್ದು ಬಂಧಿತ ಮೀನುಗಾರರ ಪೈಕಿ 17 ಮಂದಿ ಉತ್ತರ ಕನ್ನಡದವರಾದರೆ ಒಬ್ಬರು ಉಡುಪಿ ಜಿಲ್ಲೆಗೆ ಸೇರಿದ್ದಾರೆ.

ದುಬೈನ ದೋಣಿ ಮಾಲೀಕ ಶೇಖ್ ಮರ್ವಾನ್ ಅವರೊಡನೆ ಕರ್ನಾಟಕದಿಂದ ಬಂದ 18 ಮೀನುಗಾರರು ಜುಲೈ ಅಂತ್ಯದಲ್ಲಿ ದುಬೈ ಕರಾವಳಿಯಲ್ಲಿ ಮೂರು ದೋಣಿಗಳಲ್ಲಿ ಮೀನುಗಾರಿಕೆ ನಡೆಸಿದ್ದರು. ಈ ವೇಳೆ ಜುಲೈ 27 ರಂದು ಅವರಿಗೆ ಅರಿವಿಲ್ಲದೆ ಇರಾನ್ ಸ್ವಾಧೀನದ ಕಡಲು ಪ್ರವೇಶಿಸಿದ್ದಾರೆ. ಈ ಕಾರಣದಿಂದ ಕಿಶ್ ದ್ವೀಪದ ಬಳಿ ಅವರುಗಳನ್ನು ಇರಾನ್ ಭದ್ರತಾ ಪಡೆ ವಶಕ್ಕೆ ಪಡೆದಿದೆ.

ಬಂಧಿತರ ಪೈಕಿ ಆರು ಮಂದಿಯನ್ನು ಜೈಲಿಗೆ ಕಳಿಸಲಾಗಿದ್ದರೆ ಉಳಿದ ಹನ್ನೆರಡು ಮಂದಿಯನ್ನು ದೋಣಿಯಲ್ಲೇ ಬಂಧಿಸಿಡಲಾಗಿದೆ.ಕಳೆದ ಎರಡೂವರೆ ತಿಂಗಳುಗಳಿಂದ ಮೀನುಗಾರರು ತಮ್ಮ ಬಿಡುಗಡೆಗಾಗಿ ನಾನಾ ವಿಧದಲ್ಲಿ ಪ್ರಯತ್ನ ನಡೆಸಿದರೂ ಸಫಲವಾಗಿಲ್ಲ.

ಬಂಧಿತರನ್ನು ಭಟ್ಕಳದ ತೆಂಗಿನಗುಂಡಿಯ ಖಲ್ಲಲ್ ಪಾನಿ ಬುದು, ಅಬ್ದುಲ್ ಮೊಹಮ್ಮದ್ ಹುಸೇನ್, ಉಸ್ಮಾನ್ ಬಾಂಬೈಕರ್, ಮೊಹಮ್ಮದ್ ಶರೀಫ್ ಯೂಸುಫ್ ಬಾಪು, ಅಬ್ದುಲ್ಲಾ ಸುಲೇಮಾನ್ ದಂಗಿ ಮತ್ತು ಅಟೀಕ್ ಸುಲೇಮಾನ್ ಗರು, ಕುಮಟಾದ ಯಾಕುಬ್ ಇಸ್ಮಾಯಿಲ್ ಶಮು, ಇಲಿಯಾಸ್ ಅಂಬಾಜಿ, ಇಲಿಯಾಸ್ ಗರು, ಇನಾಯತ್ ಅಬ್ದುಲ್ ಆದಿರ್ ಶಮ್ಶು, ಖಸೀಮ್ ಶೇಕ್ ಮತ್ತು ಅಜ್ಮಲ್ ಮೂಸಾ ಶಮು ಮುರುಡೇಶ್ವರ ಹಾಗೂ ಇತರೆ ಪ್ರದೇಶದವರಾದ ಇಬ್ರಾಹಿಂ ಮುಲ್ಲಾ ಫಕೀರಾ, ಮೊಹಮ್ಮದ್ ಅನ್ಸಾರಿ ಇಸ್ಮಾಯಿಲ್ ಬಾಪು ಮತ್ತು ನಯೀಮ್ ಹಸನ್ ಬಂದಿ ಎಂದು ಗುರುತಿಸಲಾಗಿದೆ.

ಇವರೆಲ್ಲರೂ ಕಳೆದ ಕೆಲ ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ದುಬೈಗೆ ತೆರಳಿದ್ದರು.ಓರ್ವ ಮೀನುಗಾರ ಹಾಗೂ ಮೀನುಗಾರಿಕೆ ದೋಣಿಗಳ ಮಾಲೀಕನು ಇವರಿಗೆ ಮೀನು ಹಿಡಿಯುವ ಕೆಲಸ ನೀಡಿದ್ದನು. ಇದೇ ಕೆಲಸದ ನಿಮಿತ್ತ ಸಮುದ್ರಕ್ಕಿಳಿದಿದ್ದ ಇವರುಗಳು ದುಬೈನಿಂದ ದೂರ ಸರಿದು ಇರಾನ್ ಗೆ ಸೇರಿದ್ದ ಸಮುದ್ರವನ್ನು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಮೂಲಗಳು ಹೇಳಿದೆ.

ಭಟ್ಕಳದಲ್ಲಿರುವ ಬಂಧಿತ ಮೀನುಗಾರರ ಕುಟುಂಬವು ಇದಾಗಲೇ ಉತ್ತರ ಕನ್ನಡ ಉಪ ಆಯುಕ್ತರನ್ನು ಸಂಪರ್ಕಿಸಿದ್ದು ಅವರುಗಳನ್ನು ಸುರಕ್ಷಿತವಾಗಿ ಹಿಂದೆ ಕರೆಸಿಕೊಳ್ಳಲು ಸಹಾಯ ಕೋರಿದ್ದಾರೆ. ಏತನ್ಮಧ್ಯೆಇರಾನ್ ಭಾರತೀಯ ದೂತವಾಸ ಬಂಧಿತ ಭಾರತೀಯ ಮೀನುಗಾರರ ಸುರಕ್ಷಿತ ಬಿಡುಗಡೆಗೆ ಕಾರ್ಯಪ್ರವೃತ್ತವಾಗಿದೆ.

Comments are closed.