ರಾಷ್ಟ್ರೀಯ

ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ಆರೋಪ: ಸಚಿವ ಅಕ್ಬರ್ ವಿದೇಶದಿಂದ ವಾಪಸ್ಸಾದ ನಂತರ ಅವರ ಪ್ರತಿಕ್ರಿಯೆ ಪಡೆದು ಮುಂದಿನ ಕ್ರಮ ಎಂದ ಸರ್ಕಾರ

Pinterest LinkedIn Tumblr

ನವದೆಹಲಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಎಂ ಜೆ ಅಕ್ಬರ್ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಗಳಿಗೆ ಸಂಬಂಧಪಟ್ಟಂತೆ ಸಚಿವ ಹುದ್ದೆಗೆ ರಾಜೀನಾಮೆ ನೀಡಲು ಹೇಳಲಾಗಿದೆ ಎಂಬ ವರದಿಯನ್ನು ಸರ್ಕಾರ ನಿರಾಕರಿಸಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸರ್ಕಾರದ ಮೂಲಗಳು, ನೈಜೀರಿಯಾ ಪ್ರವಾಸದಲ್ಲಿರುವ ಎಂ ಜೆ ಅಕ್ಬರ್ ಅವರು ದೇಶಕ್ಕೆ ವಾಪಸ್ಸಾದ ನಂತರ ಅವರ ಪ್ರತಿಕ್ರಿಯೆ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

ಅಕ್ಬರ್ ಅವರು ರಾಜೀನಾಮೆ ನೀಡಬೇಕೆ ಅಥವಾ ಸಚಿವ ಸ್ಥಾನದಲ್ಲಿ ಮುಂದುವರಿಯಬೇಕೆ ಎಂಬುದನ್ನು ಅವರೇ ತೀರ್ಮಾನಿಸಬೇಕು ಎನ್ನುವ ಮೂಲಕ ಜವಾಬ್ದಾರಿಯನ್ನು ಸರ್ಕಾರ ಅವರ ಹೆಗಲ ಮೇಲೆಯೇ ಹಾಕಿದೆ. ಸರ್ಕಾರ ಅವರಿಗೆ ಇದುವರೆಗೆ ರಾಜೀನಾಮೆ ನೀಡಲು ಹೇಳಿಲ್ಲ. ನೈಜೀರಿಯಾದಿಂದ ಪ್ರವಾಸವನ್ನು ಅರ್ಧಕ್ಕೆ ಬಿಟ್ಟು ಬರುವಂತೆ ಕೂಡ ಸರ್ಕಾರ ಹೇಳಿಲ್ಲ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯಲ್ಲಿ ಅಕ್ಬರ್ ಅವರ ಭವಿಷ್ಯದ ಬಗ್ಗೆ ಕೇಳಿದಾಗ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ರೀಟಾ ಬಹುಗುಣ ಜೋಷಿ, ರಾಜೀನಾಮೆ ನೀಡುವುದು ಇಲ್ಲಿ ವಿಷಯವಲ್ಲ, ನಾವು ಯಾರ ಮೇಲಾದರೂ ಆರೋಪ ಮಾಡುವುದಿದ್ದರೆ ಅದನ್ನು ಸಾಬೀತುಪಡಿಸಬೇಕು, ಅದಕ್ಕೆ ಸಾಕ್ಷಿಗಳಿರಬೇಕು, ಪ್ರತಿಯೊಬ್ಬ ಮಹಿಳೆಗೆ ಆರೋಪ ಮಾಡುವ ಹಕ್ಕು ಇರುತ್ತದೆ ಮತ್ತು ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಇಲ್ಲಿ ಮಹಿಳೆಯರು ತಮ್ಮ ಅನುಭವ, ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ. ಪುರುಷರಿಗೆ ಕೂಡ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಅವಕಾಶವಿದೆ ಎಂದರು.

ನಿನ್ನೆ ಕಾಂಗ್ರೆಸ್ ಮಹಿಳೆಯರು ಸೋಷಿಯಲ್ ಮೀಡಿಯಾದಲ್ಲಿ ಹಮ್ಮಿಕೊಂಡಿರುವ ಮಿ ಟೂ ಅಭಿಯಾನವನ್ನು ಬೆಂಬಲಿಸಿ ಎಂ ಜೆ ಅಕ್ಬರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ. ಈ ಬಗ್ಗೆ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರ ಮೌನವನ್ನು ಕೂಡ ಕಾಂಗ್ರೆಸ್ ಪ್ರಶ್ನಿಸಿದೆ.

Comments are closed.