ಕರ್ನಾಟಕ

ಸಾಲದ ಶೂಲಕ್ಕೆ ಒಂದೇ ಕುಟುಂಬದ ಮೂವರು ನದಿಗೆ ಹಾರಿ ಆತ್ಮಹತ್ಯೆ 

Pinterest LinkedIn Tumblr


ಚಿಕ್ಕೋಡಿ: ಸಾಲದ ಸುಳಿಗೆ ಸಿಲುಕಿ ಕುಟುಂಬ ಸಮೇತ ಮೂವರ ಆತ್ಮಹತ್ಯೆ.. ಶವಕ್ಕಾಗಿ ಹುಡುಕಾಟ ನಡೆಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ… ಸಾವಿನ ಸುದ್ದಿ ಕೇಳಿ ಬೆಚ್ಚಿ ಬಿದ್ದ ಗ್ರಾಮಸ್ಥರು…. ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ನಡೆದಿದೆ. ಮೃತರು ಇದೇ ತಾಲೂಕಿನ ಯಡೂರ ಗ್ರಾಮದ ಅಶೋಕ ಕಾಂಬಳೆ(70), ಅಶೋಕನ ಪತ್ನಿ ನಿರ್ಮಲಾ ಕಾಂಬಳೆ (64) ಹಾಗೂ ಅವರ ಮಗ ಅರುಣ ಕಾಂಬಳೆ (40) ಎಂದು ಗುರುತಿಸಲಾದೆ.

ನಿತ್ಯ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬ ಸದಸ್ಯರು ನಾಲ್ಕು ದಿನಗಳ ಹಿಂದೆ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದರು. ಇಂದು ಭಾನುವಾರ ಯಡುರ ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಇಡೂ ಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ.

ಕುಟುಂಬದವರ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಗ್ರಾಮಸ್ಥರು ಹೇಳುವ ಪ್ರಕಾರ, ಸಾಲವೇ ಇವರ ಸಾವಿಗೆ ಕಾರಣವೆನ್ನಲಾಗುತ್ತಿದೆ. ಕಾಂಬಳೆ ಕುಟುಂಬವು ಗ್ರಾಮದಲ್ಲಿ ಹಲವರ ಬಳಿ ಸಾಲ ಮಾಡಿದ್ದರು. ಪಡೆದ ಸಾಲ ತೀರಿಸಲು ಸಾಧ್ಯವಾಗದೆ, ಸಾಲಗಾರರ ಒತ್ತಡಕ್ಕೆ ಹೆದರಿ ಈ ಮೂವರೂ ಆತ್ಮಹತ್ಯೆಗೆ ಶರಣಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಘಟನೆ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ತನಿಖೆಯುತ್ತಿದೆ. ಒಟ್ಟಿನಲ್ಲಿ ಈ ಸಾವಿನ ಪ್ರಕರಣ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದ್ದು, ನಿಜವಾಗಿಯೂ ಸಾಲದ ಸುಳಿಗೆ ಸಿಲುಕಿ ಈ ಕುಟುಂಬ ಆತ್ಮಹತ್ಯೆಗೆ ಶರಣಾಯಿತಾ? ಅಥವಾ ಇನ್ನಾವ ಬೇರೆ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿತು ಅನ್ನೋದು ಪೊಲೀಸ್ ತನಿಖೆಯಿಂದಲೇ ಹೊರ ಬರಬೇಕಾಗಿದೆ.

Comments are closed.