ಕರ್ನಾಟಕ

ಒಕ್ಕಲಿಗರ ಕೊನೆಯ ಕೊಂಡಿ ಆರ್​​.ಅಶೋಕ್​​ ಮೇಲೆ ಬಿಜೆಪಿ ಹೈಕಮಾಂಡ್​​​ ತೂಗುಗತ್ತಿ!

Pinterest LinkedIn Tumblr


ಬೆಂಗಳೂರು: ‘ಬಿಬಿಎಂಪಿ ಮೇಯರ್​​-ಉಪಮೇಯರ್​​​ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲು ಪಕ್ಷದ ವೈಫಲ್ಯ ಕಾರಣ ಹೊರತು, ಯಾರನ್ನು ದೂರುವ ಅಗತ್ಯವಿಲ್ಲ. ಆರ್.ಅಶೋಕ್ ಅವರು ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಪ್ರಯತ್ನಿಸಿದ್ಧಾರೆ. ಕೊನೆ ಘಳಿಗೆಯಲ್ಲಿ ಅನಂತ್ ಕುಮಾರ್ ಇಲ್ಲದ ಕಾರಣ ನಾವು ಸೋಲಬೇಕಾಯಿತು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪ ಅವರು ಸಮರ್ಥಿಸಿಕೊಂಡಿದ್ದಾರೆ.

ಇನ್ನೊಂದೆಡೆ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಸ್ವಲ್ಪದರಲ್ಲಿ ಅಧಿಕಾರ ಕೈತಪ್ಪಲು ಮಾಜಿ ಡಿಸಿಎಂ ಆರ್​​​. ಆಶೋಕ್ ಅವರೇ ಕಾರಣ. ಹೀಗಾಗಿ ಪಕ್ಷದಲ್ಲಿ ಅವರಿಗೆ ನೀಡಿರುವ ಸ್ಥಾನವನ್ನು ಕಿತ್ತುಕೊಳ್ಳಬೇಕು. ಅಲ್ಲದೇ ಅವರ ಜಾಗದಲ್ಲಿ ಬೇರೆಯವರನ್ನು ಕೂರಿಸಬೇಕು. ಇಲ್ಲವಾದರೆ ಮುಂದೆಯೂ ಮತ್ತಷ್ಟು ಸೋಲುಗಳನ್ನು ಅನುಭವಿಸಬೇಕಾಗುತ್ತದೆ ಎಂಬ ಚರ್ಚೆಗಳು ಬಿಜೆಪಿ ವಲಯದಲ್ಲಿ ನಡೆಯುತ್ತಿವೆ.

ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಆಪರೇಷನ್​​ ಕಮಲ ಸಕ್ಸಸ್​​ ಆಗದಿದ್ದರಿಂದ ಬಿಜೆಪಿ ಸತ್ಯಭಾಗ ಮಾಡಿತ್ತೆಂಬ ಸುದ್ದಿ ಇದೆ. ಬಳಿಕ ಶನಿವಾರದಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು, ಚುನಾವಣೆಯಲ್ಲಿ ಸೋಲಲು ಆರ್​​. ಅಶೋಕ್ ಅವರೇ ಕಾರಣ ಎಂದು ವ್ಯಗ್ರರಾಗಿ ಫೇಸ್​ಬುಕ್​ನಲ್ಲಿ ಪೋಸ್ಟ್ ಅಪ್​ಡೇಟ್ ಮಾಡಿದ್ದರು. ತಂಡದ ಸ್ಪೂರ್ತಿ ಇಲ್ಲದವರು, ಗೆಲುವಿನ ಕೀರ್ತಿಯನ್ನು ಹಂಚಿಕೊಳ್ಳದವರು ಗೆಲುವು ಸಾಧಿಸಲಾರರು ಎಂದು ಅಶೋಕ್ ವಿರುದ್ಧ ಆರೆಸ್ಸೆಸ್ ಪ್ರಚಾರಕರಾದ ಸಂತೋಷ್ ಪರೋಕ್ಷವಾಗಿ ಕಿಡಿಕಾರಿದ್ದರು.

ಬಿ.ಎಲ್. ಸಂತೋಷ್ ಅವರ ಫೇಸ್ಬುಕ್ ಸ್ಟೇಟಸ್ ಪ್ರಕಟವಾದ ಬೆನ್ನಲ್ಲೇ ಅಶೋಕ್ ಅವರನ್ನು ಸಮರ್ಥಿಸಿಕೊಂಡು ಬಿಎಸ್ ಯಡಿಯೂರಪ್ಪ ಬ್ಯಾಟಿಂಗ್ ಮಾಡಿದ್ದಾರೆ. ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಅಶೋಕ್ ಅವರನ್ನು ದೂರುವುದು, ಅನಗತ್ಯವಾಗಿ ಟೀಕಿಸುವುದು ಸರಿಯಲ್ಲ. ಅಶೋಕ್ ಮೇಲೆ ಕೆಲವರು ಸುಮ್ಮನೆ ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ತಿರುಗೇಟು ಕೊಟ್ಟಿದ್ದಾರೆ.

ಎಲ್ಲರೊಂದಿಗೆ ಸಮಾಲೋಚನೆ ಮಾಡಿಯೇ ಅಶೋಕ್ ಅವರು ತೀರ್ಮಾನ ಕೈಗೊಂಡಿದ್ದಾರೆ. ಅನಂತಕುಮಾರ್, ನಿರ್ಮಲಾ ಸೀತಾರಾಮನ್ ಅವರು ಚುನಾವಣೆಯಲ್ಲಿ ಗೈರಾಗದೇ ಇದ್ದಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ಇದರಲ್ಲಿ ಅಶೋಕ್ ಅವರ ಯಾವ ತಪ್ಪೂ ಇಲ್ಲ ಎಂದು ಬಿಎಸ್​ವೈ ಅಭಿಪ್ರಾಯಪಟ್ಟಿದ್ದಾರೆ.

ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಬೆಂಗಳೂರು ಘಟಕದಲ್ಲಿ ಒಗ್ಗಟ್ಟು ಇಲ್ಲದಿದ್ದುದು ಗೆಲುವಿಗೆ ಅಡ್ಡಿಯಾಯಿತೆಂಬ ಮಾತಿದೆ. ಈಗ ಬಿಜೆಪಿಯ ಆರೆಸ್ಸೆಸ್ ಕೊಂಡಿಯಂತಿರುವ ಸಂತೋಷ್ ಅವರು ಫೇಸ್ಬುಕ್​ನಲ್ಲಿ ಅಶೋಕ್ ಅವರನ್ನ ತರಾಟೆಗೆ ತೆಗೆದುಕೊಂಡಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲವೆಂಬ ಸೂಚನೆ ಸಿಕ್ಕಿದೆ. ಇದರ ನಡುವೆ, ಅಶೋಕ್ ಅವರ ಸ್ಥಾನಕ್ಕೆ ಮತ್ತೊಬ್ಬ ಒಕ್ಕಲಿಗ ಮುಖಂಡರಾದ ಶೋಭಾ ಕರಂದ್ಲಾಜೆ ಅವರನ್ನು ಕರೆತರುವ ಯೋಜನೆ ಬಿಜೆಪಿಯ ವರಿಷ್ಠರ ಮನದಲ್ಲಿದೆ ಎಂಬ ಮಾತಿದೆ. ಈ ಕಾರ್ಯತಂತ್ರ ಬಿಜೆಪಿಗೆ ವರವಾಗುತ್ತಾ, ಮುಳುವಾಗುತ್ತಾ ಎಂಬುದು ಕುತೂಹಲದ ವಿಷಯವೇ.

Comments are closed.