ಕರ್ನಾಟಕ

ಪೆಟ್ರೋಲ್ ಬೆಲೆ 100 ಗಡಿ ದಾಟಿದರೆ ಪೆಟ್ರೋಲ್ ಪಂಪ್​ಗಳ ಮೀಟರ್​ಗಳು ಸ್ತಬ್ದ!

Pinterest LinkedIn Tumblr


ಬೆಂಗಳೂರು: ಮೋದಿ ಸರಕಾರ ಬಂದ ನಂತರ ಪೆಟ್ರೋಲ್ ಬೆಲೆಯದ್ದೇ ನಿರಂತರ ಸದ್ದಾಗಿದೆ. ಇತ್ತೀಚೆಗಂತು ಪೆಟ್ರೋಲ್, ಡೀಸೆಲ್ ಬೆಲೆ ನಿರಂತರವಾಗಿ ಏರುತ್ತಲೇ ಇದೆ. ಈ ವೇಳೆ, ಪೆಟ್ರೋಲ್ ಪಂಪ್​ಗಳಿಗೆ ವೈ2ಕೆಯಂಥ ಸಮಸ್ಯೆ ತಲೆದೋರುತ್ತೆ ಎಂಬ ಮುನ್ನೆಚ್ಚರಿಕೆ ಬರುತ್ತಿದೆ. ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದರೆ ಪೆಟ್ರೋಲ್ ಪಂಪ್​ಗಳ ಮೀಟರ್​ಗಳು ಸ್ತಬ್ದಗೊಳ್ಳುತ್ತವೆ ಎಂಬ ಮಾತು ಕೇಳಿಬರುತ್ತಿವೆ. ಇದು ಯಾಕೆಂದರೆ ಪೆಟ್ರೋಲ್ ಪಂಪ್​ಗಳಲ್ಲಿ ದರ ತೋರಿಸುವ ಮೀಟರ್​ಗಳಲ್ಲಿ 2 ಪೂರ್ಣ ಅಂಕಿ ಮತ್ತು 2 ದಶಾಂಶ ಅಂಕಿಗಳಷ್ಟೇ ಒಳಗೊಳ್ಳಲಾಗಿದೆ. ಅಂದರೆ ಗರಿಷ್ಠ 99.99 ಅಂಕಿಯನ್ನಷ್ಟೇ ಈ ಮೀಟರ್​ಗಳು ತೋರಿಸುತ್ತವೆ. ಒಂದು ವೇಳೆ, ಪೆಟ್ರೋಲ್ ದರ 100 ರೂ ಗಡಿ ಮುಟ್ಟಿದರೆ ಮೀಟರ್ ರೀಡಿಂಗ್ 00.00 ಆಗುತ್ತದೆ. ಆಗ ಕ್ಯಾಲ್ಕುಲೇಟರ್ ಬಳಸಿಕೊಂಡು ದರದ ಎಣಿಕೆ ಮಾಡಿ ದುಡ್ಡು ಪಾವತಿಸಬೇಕಾಗುತ್ತದೆ. ನಿಮಗೆ ಪೆಟ್ರೋಲ್ ಬಿಲ್ ಸಿಗುವುದಿಲ್ಲ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ 90 ರೂ ದಾಟಿ ಹೋಗಿದೆ. ಅಂತಾರಾಷ್ಟ್ರಿಯ ತೈಲ ಬೆಲೆ ಹೆಚ್ಚಳ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುವುದು ಈ ಎರಡು ಕೂಡ ಮುಂದುವರಿಯುವ ಸಾಧ್ಯತೆ ಇದ್ದು, ಪೆಟ್ರೋಲ್ ಬೆಲೆ ಶೀಘ್ರದಲ್ಲೇ ನೂರು ರು ಗಡಿ ದಾಟುವುದು ನಿಶ್ಚಿತವಾಗಿದೆ. ಪೆಟ್ರೋಲ್ ಪಂಪ್​ಗಳ ಮೀಟರ್​ನ್ನು ರೀಕ್ಯಾಲಿಬ್ರೇಟ್ ಮಾಡುವುದೇ ಈ ಸಮಸ್ಯೆಗೆ ಇರುವ ಪರಿಹಾರವಾಗಿದೆ. ತೈಲ ಮಾರಾಟ ಕಂಪನಿಗಳು ಕಡೆ ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಮುಂಬೈನ ಕೆಲ ಪೆಟ್ರೋಲ್ ಪಂಪ್​ಗಳ ಮೀಟರ್​ನಲ್ಲಿ ಮಾರ್ಪಾಡು ತರುವ ಪ್ರಯೋಗ ಮಾಡಲಾಗುತ್ತಿದೆ.

ದೇಶಾದ್ಯಂತ 59 ಸಾವಿರ ಪೆಟ್ರೊಲ್ ಪಂಪ್​ಗಳಿದ್ದು, ಪ್ರತೀ ಪಂಪ್​ಗಳಲ್ಲಿ 40ವರೆಗೆ ಪೆಟ್ರೋಲ್ ಯೂನಿಟ್​ಗಳಿವೆ. ಕರ್ನಾಟಕದಲ್ಲಿ ಒಂದು ಅಂದಾಜಿನಂತೆ 4,200 ಪಂಪ್​ಗಳಿವೆ. ಇಷ್ಟೂ ಪಂಪ್​ಗಳ ಪೆಟ್ರೊಲ್ ಯೂನಿಟ್​ಗಳ ಮೀಟರ್​ನ್ನು ರೀಕ್ಯಾಲಿಬ್ರೇಟ್ ಮಾಡುವ ಕೆಲಸವಾಗಬೇಕಿದೆ. ಇನ್ನೆರಡು ತಿಂಗಳಲ್ಲಿ ಪೆಟ್ರೋಲ್ ಬೆಲೆ 100 ರೂ ಗಡಿದಾಟುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಅಷ್ಟರೊಳಗೆ ಈ ಕೆಲಸವಾಗಬೇಕಿದೆ.

ನೋಟ್ ಬ್ಯಾನ್ ಮಾಡಿದಾಗಲೂ ಭಾರತದ ಎಟಿಎಂ ಮೆಷಿನ್​ಗಳಿಗೆ ಇಂಥದ್ದೊಂದು ಸಮಸ್ಯೆ ಎದುರಾಗಿದ್ದನ್ನ ಗಮನಿಸಿದ್ದಿರಬಹುದು. ಸರಕಾರದ ಹೊರತಂದ ನೂತನ 2 ಸಾವಿರ ರೂ ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನ ಎಟಿಎಂನಲ್ಲಿ ಚಲಾವಣೆ ಮಾಡಲ ಮೆಷೀನ್​ಗಳ ರೀಕ್ಯಾಲಿಬ್ರೇಟ್ ಮಾಡಬೇಕಿತ್ತು. ಅದಕ್ಕೆ ಕೆಲವಾರು ತಿಂಗಳು ಬೇಕಾಯಿತು.

ಲೀಟರ್ ಲೆಕ್ಕದ ಬದಲು ಹಣ ಲೆಕ್ಕದಲ್ಲಿ ಪೆಟ್ರೋಲ್ ಹಾಕಿಸಿದ್ರೆ ಆಗುತ್ತಾ ಲಾಸ್?

ಇದೇ ವೇಳೆ, ಪೆಟ್ರೋಲ್ ಪಂಪ್​ಗಳಲ್ಲಿ ಇನ್ನೂ ಒಂದು ತಾಂತ್ರಿಕ ದೋಷವಿದೆ. ವಿಚಿತ್ರವೆಂದರೆ ಯಾರೂ ಕೂಡ ಈ ದೋಷದ ಬಗ್ಗೆ ಗಮನ ಹರಿಸಿಯೇ ಇಲ್ಲ. ನೀವು ಚಿಲ್ಲರೆ ಸಮಸ್ಯೆಯಿಂದಾಗಿ ಇಂತಿಷ್ಟು ಹಣದ ಲೆಕ್ಕದಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದರೆ ಅಗತ್ಯಕ್ಕಿಂತ ತುಸು ಹೆಚ್ಚೇ ಹಣ ಕೊಡಬೇಕಾಗುತ್ತದೆ. ಉದಾಹರಣೆಗೆ ಪೆಟ್ರೋಲ್ ಬೆಲೆ ಲೀಟರ್​ಗೆ 90 ರೂ ಎಂದಿಟ್ಟುಕೊಳ್ಳಿ. ನಿಮ್ಮ ಕಾರಿಗೆ 500 ರೂ.ಗೆ ಪೆಟ್ರೋಲ್ ಹಾಕಿಸುತ್ತೀರಿ. ಹಣದ ಲೆಕ್ಕಾಚಾರದಲ್ಲಿ ಅದು 5.555 ಆಗುತ್ತದೆ. ರೀಡಿಂಗ್ ಪ್ರಕಾರ ನಿಮಗೆ ಸಿಗುವುದು 5.55 ಲೀಟರ್ ಮಾತ್ರ. ಅಂದರೆ 0.005 ಲೀಟರ್​ನಷ್ಟು ಪೆಟ್ರೋಲ್ ನಷ್ಟವಾಗುತ್ತದೆ. ಲೀಟರ್ ಲೆಕ್ಕದಲ್ಲಿ ನೀವು ಪೆಟ್ರೋಲ್ ಹಾಕಿಸಿದರೆ ಸಮಸ್ಯೆ ಇರುವುದಿಲ್ಲ. ರೀಡಿಂಗ್​ನ ಟೆಕ್ನಿಕಲ್ ಸಮಸ್ಯೆಯೇ ಇದಕ್ಕೆ ಕಾರಣ. ಪೆಟ್ರೋಲ್ ಪ್ರಮಾಣ ತೋರಿಸಲು ಮೀಟರ್​ನಲ್ಲಿ 3 ಅಂಕಿ ಹಾಗೂ 2 ದಶಾಂಶ ಅಂಕಿ ಇದೆ. ದಶಾಂಶದಲ್ಲಿ 3 ಅಂಕಿ ತೋರಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಕೇಂದ್ರ ಸರಕಾರ ಮತ್ತು ಪೆಟ್ರೋಲಿಯಂ ಕಂಪನಿಗಳು ಈ ಸಮಸ್ಯೆಯತ್ತ ತುರ್ತು ಗಮನ ಹರಿಸಿದರೆ ಒಳ್ಳೆಯದು.

Comments are closed.