ಕರ್ನಾಟಕ

ಎರಡು ದಿನಗಳಿಂದ ಮಳೆರಾಯನ ಆರ್ಭಟ: ಮನೆಗಳಿಗೆ ನುಗ್ಗಿದ ಕೊಳಚೆ ನೀರು

Pinterest LinkedIn Tumblr


ಬೆಂಗಳೂರು: ನಗರದಲ್ಲಿ ಕಳೆದ ಎರಡು ದಿನಗಳಿಂದ ಮಳೆರಾಯನ ಆರ್ಭಟ ಆರಂಭವಾಗಿದ್ದು, ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಹೆಚ್‍ಎಸ್‍ಆರ್ ಬಡಾವಣೆಯ ಮನೆಗಳಿಗೆ ಕೊಳಚೆ ನೀರು ನುಗ್ಗಿ ಸ್ಥಳೀಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ರಾಜಕಾಲುವೆಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ನೀರು ಹೋಗದೆ ಸಂಪೂರ್ಣ ಬಂದ್ ಆಗಿತ್ತು. ಅಷ್ಟೇ ಅಲ್ಲದೆ ಎಚ್‍ಎಸ್‍ಆರ್ ಲೇಔಟ್ ಚರಂಡಿಗಳನ್ನು ಸ್ವಚ್ಛಗೊಳಿಸದೇ ಸುಮಾರು ದಿನಗಳು ಕಳೆದಿತ್ತು. ಮಳೆಯಿಂದಾಗಿ ಒಳ ಚರಂಡಿಯಿಂದ ನೀರು ಮೇಲೆ ಬಂದು, ರಸ್ತೆ ಮೇಲೆ ಹಳ್ಳವೇ ನಿರ್ಮಾಣವಾಗಿತ್ತು.

ಸವಾರರು ಈ ರಸ್ತೆಗಳ ಮೂಲಕ ಸಾಗಲು ಹರಸಾಹಸ ಪಟ್ಟಿದ್ದಾರೆ. ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ದುರ್ನಾತ ಹರಡಿದ್ದು, ಪಾದಚಾರಿಗಳು, ಅಂಗಡಿಯವರು, ವ್ಯಾಪಾರಿಗಳು ಮೂಗು ಮುಚ್ಚಿಕೊಂಡು ಜೀವನ ಮಾಡಬೇಕಾಗಿದೆ. ಇಷ್ಟೆಲ್ಲ ಅವಾಂತರವಾದರೂ ಬಡಾವಣೆಯ ಕಡೆ ಮುಖ್ಯ ಎಂಜಿನೀಯರ್ ಕೃಷ್ಣ ಗೌಡ ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಯನ್ನು ಆಲಿಸದ್ದಕ್ಕೆ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಕಾರ್ಪೊರೇಟರ್ ಗುರುಮೂರ್ತಿ ರೆಡ್ಡಿ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಬಳಿಕ ಮಾತನಾಡಿ ಗುರುಮೂರ್ತಿ ಅವರು, ‘ನಾನು ಕಳೆದ ಬಾರಿ ಮಳೆ ಬಂದಾಗಲೇ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಆದರೂ ಸರಿಪಡಿಸಿಲ್ಲ, ಹೀಗಾಗಿ ಈ ಸಮಸ್ಯೆಯಾಗಿದೆ’ ಎಂದು ತಮ್ಮ ಅಸಹಾಯಕತೆ ತೊಡಿಕೊಂಡಿದ್ದಾರೆ. ಬಳಿಕ ಜೆಸಿಬಿ ಮೂಲಕ ರಸ್ತೆಯ ಮೇಲೆ ನಿಂತಿದ್ದ ಕೊಳಚೆ ನೀರನ್ನು ರಾಜ ಕಾಲುವೆಗೆ ಹರಿಬಿಡಲು ತಿಳಿಸಿದ್ದಾರೆ.

Comments are closed.