ಕರ್ನಾಟಕ

20 ವರ್ಷಕ್ಕಿಂತ ಹಳೆಯ ವಾಹನಗಳ ಸಂಚಾರಕ್ಕೆ ನಷೇಧ?

Pinterest LinkedIn Tumblr


ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ 20 ವರ್ಷ ದಾಟಿದ ವಾಹನಗಳನ್ನು ನಿಷೇಧಿಸುವ ಸಾಧ್ಯಾಸಾಧ್ಯತೆ ಬಗ್ಗೆ ಪರಿಶೀಲಿಸಿ, ಪ್ರಸ್ತಾವನೆ ಸಲ್ಲಿಸಲು ಗೃಹ ಸಚಿವ ಜಿ.ಪರಮೇಶ್ವರ್‌ ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ಮತ್ತು ನಗರ ಪೊಲೀಸ್‌ ಕಮಿಷನರ್‌ ಅವರಿಗೆ ಸೂಚನೆ ನೀಡಿದ್ದಾರೆ.

ಬುಧವಾರ ಬೆಳಗ್ಗೆ ನಗರ ಪೊಲೀಸ್‌ ಕಮಿಷನರೇಟ್‌ ಕಚೇರಿಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ, ನಗರದ ಟ್ರಾಫಿಕ್‌ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿ ಪರಿಹಾರಗಳನ್ನು ಕಂಡುಕೊಳ್ಳುವ ದಿಕ್ಕಿನಲ್ಲಿ ಅಧಿಕಾರಿಗಳನ್ನು ಡಿಸಿಎಂ ಚುರುಕುಗೊಳಿಸಿದರು.

2018ರ ಜೂನ್‌ ವೇಳೆಗೆ ನಗರದಲ್ಲಿ ನೋಂದಾಯಿತವಾದ ವಾಹನಗಳ ಸಂಖ್ಯೆ 75,66,103 ಆಗಿದೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ಅಂಕಿ ಅಂಶ ನೀಡಿದರು. ಇಷ್ಟೊಂದು ಪ್ರಮಾಣದ ವಾಹನ ದಟ್ಟಣೆಯನ್ನು ನಗರದ ರಸ್ತೆಗಳು ತಡೆದುಕೊಳ್ಳುವುದು ಕಷ್ಟ ಆಗುತ್ತದೆ ಎನ್ನುವ ಅಭಿಪ್ರಾಯ ಅಧಿಕಾರಿಗಳಿಂದ ಬಂದ ಹಿನ್ನೆಲೆಯಲ್ಲಿ, 20 ವರ್ಷ ಮೇಲ್ಪಟ್ಟ ವಾಹನಗಳನ್ನು ನಿಷೇಧಿಸಿದರೆ ಹೇಗೆ ? ಈ ದಿಕ್ಕಿನಲ್ಲಿ ಸಾಧಕ ಬಾಧಕಗಳನ್ನು ಪರಿಶೀಲನೆ ನಡೆಸಿ ವೈಜ್ಞಾನಿಕವಾದ ಪ್ರಸ್ತಾವನೆ ಸಿದ್ದಪಡಿಸಲು ಸೂಚಿಸಿದರು.

ಒಂದು ವರ್ಷ ಕಾಲ ಹೊಸ ವಾಹನಗಳ ನೋಂದಣಿಯನ್ನು ನಿಲ್ಲಿಸಿದರೆ ಪರಿಣಾಮ ಏನಾಗಬಹುದು ? ಇದರಿಂದಲೂ ವಾಹನಗಳ ಪ್ರಮಾಣ ಕಡಿಮೆ ಆಗುತ್ತದೆ. ದಿಲ್ಲಿಯಲ್ಲಿ ನಡೆದ ಸಮ-ಬೆಸ ಸಂಖ್ಯೆಗಳ ವಾಹನ ಸಂಚಾರವನ್ನೂ ಇನ್ನೂ ಪರಿಣಾಮಕಾರಿಯಾಗಿ ಇಲ್ಲಿ ಜಾರಿಗೊಳಿಸಲು ಸಾಧ್ಯವೇ ? ಇದರಿಂದ ಸಾರ್ವಜನಿಕರಿಗೆ ಅನುಕೂಲ ಆಗುವುದಿಲ್ಲವೇ ? ಎಂದು ಪ್ರಶ್ನಿಸಿದ ಗೃಹ ಸಚಿವರು ಈ ಎಲ್ಲದರ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ನಗರದೊಳಗೆ ಬೃಹತ್‌ ಪ್ರತಿಭಟನೆಗೆ ಅಂಕುಶ:

2017ರಲ್ಲಿ ಬೆಂಗಳೂರು ನಗರದ ಕೇಂದ್ರ ಭಾಗದಲ್ಲೇ 365 ದಿನಕ್ಕೆ 483 ದೊಡ್ಡ ಮಟ್ಟದ ಪ್ರತಿಭಟನೆ ಮತ್ತು ಮುಷ್ಕರಗಳು ನಡೆದಿವೆ. ಬಹುತೇಕ ಪ್ರತಿಭಟನೆಗಳಲ್ಲಿ ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರು ಸೇರಿದ್ದಾರೆ. ಇದರಿಂದಲೂ ಸಂಚಾರ ವ್ಯವಸ್ಥೆ ಮೇಲೆ ಪರಿಣಾಮ ಬಿದ್ದಿದೆ ಎನ್ನುವ ಸಂಗತಿಯನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ”ಬೇಕಿದ್ದರೆ ಪ್ರತಿಭಟನೆ ನಡೆಸುವ ಸಂಘಟನೆಗಳ ಪದಾಧಿಕಾರಿಗಳು ಹತ್ತು ಇಪ್ಪತ್ತು ಸಂಖ್ಯೆಯಲ್ಲಿ ಟೌನ್‌ಹಾಲ್‌ ಮತ್ತು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟಿಸಲಿ. ಆದರೆ ಸಾವಿರಾರು ಪ್ರತಿಭಟನಾಕಾರರು ಇಲ್ಲಿಗೆ ಬರುವುದು ಬೇಡ. ಸಂಚಾರ ವ್ಯವಸ್ಥೆಗೆ ಧಕ್ಕೆ ಆಗದಂತೆ ಪ್ರತಿಭಟನೆ ನಡೆಸಬಹುದಾದ ಸ್ಥಳಗಳನ್ನು ಸೂಚಿಸಿ. ಸಾವಿರಾರು ಮಂದಿ ಸೇರುವುದಿದ್ದರೆ ಬೇರೆ ಸ್ಥಳದಲ್ಲಿ ಪ್ರತಿಭಟಿಸಲಿ. ಈ ಬಗ್ಗೆಯೂ ಸಮಗ್ರ ವರದಿ ಸಿದ್ದಪಡಿಸಿ ಎಂದು ಸೂಚಿಸಿದರು.

ಎಸಿಪಿಗಳಿಗೆ ತರಾಟೆ

ಅಧಿಕಾರಿಗಳ ಸಭೆಯಲ್ಲಿ ಗೃಹ ಸಚಿವರು ಇಬ್ಬರು ಎಸಿಪಿಗಳ ಮೇಲೆ ಗರಂ ಆದ ಪ್ರಸಂಗವೂ ನಡೆಯಿತು. ರೌಡಿಗಳ ಹಾವಳಿ ನಿಯಂತ್ರಿಸಿ ಕೊಲೆಗಳನ್ನು ತಪ್ಪಿಸಿ ಎಂದು ಗೃಹ ಸಚಿವರು ಹೇಳುವಾಗ ಎಸಿಪಿಯೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ‘ರೌಡಿಗಳಿಂದ ನಡೆಯುವ ಕೊಲೆಗಳು ಶೇ 1 ರಷ್ಟು ಮಾತ್ರ. ಉಳಿದಂತೆ ಕೌಟುಂಬಿಕ ಕಾರಣಗಳಿಗೆ, ಖಾಸಗಿ ವಿಚಾರಗಳಿಗೆ ರೌಡಿಗಳಲ್ಲದವರಿಂದ ನಡೆಯುವ ಕೊಲೆಗಳ ಪ್ರಮಾಣವೇ ಹೆಚ್ಚಾಗಿರುತ್ತದೆ’ ಎಂದು ತಿಳಿಸಿದರು. ಇದಕ್ಕೆ ಗರಂ ಆದ ಸಚಿವರು, ‘8 ಸಾವಿರ ರೌಡಿ ಶೀಟರ್‌ಗಳು ಬೆಂಗಳೂರಿನಲ್ಲಿ ಇದ್ದಾರೆ. ಇವರಿಂದ ಕೊಲೆಗಳು ಕಡಿಮೆ ಎಂದರೆ ಬೇಜವಾಬ್ದಾರಿ ಉತ್ತರ ಆಗುತ್ತದೆ’ ಎಂದರು.

ಕಾಲೇಜುಗಳಿಗೆ ತೆರಳಿ ಮಾದಕ ವಸ್ತು ವ್ಯವಸನ ಮತ್ತು ಜಾಲದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಯಾವ ವ್ಯಾಪ್ತಿಯಲ್ಲಿ ಎಷ್ಟೆಷ್ಟು ಆಗಿದೆ ಎನ್ನುವುದನ್ನು ಪರಿಶೀಲಿಸುವಾಗ ಒಬ್ಬರು ಎಸಿಪಿ ತಮ್ಮ ವ್ಯಾಪ್ತಿಯಲ್ಲಿ 2 ಕಾಲೇಜಿನಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದರು. ಈ ಉತ್ತರದಿಂದ ಅಸಮಾಧಾನಗೊಂಡ ಸಚಿವರು, 6 ತಿಂಗಳಲ್ಲಿ 2 ಕಾಲೇಜು ಮಾತ್ರವೇ. ಇದು ಬೇಜವಾಬ್ದಾರಿ ಅಲ್ಲವೇ. ಮುಂದಿನ ಒಂದೂವರೆ ತಿಂಗಳಲ್ಲಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳನ್ನೂ ಮುಗಿಸಿ. ಕಾಲೇಜಿಗೆ ಹೋಗುವುದರಿಂದ ವಿದೇಶಿ ವಿದ್ಯಾರ್ಥಿಗಳ ಬಗ್ಗೆ ನಿಮಗೆ ಅಲ್ಲೇ ಮಾಹಿತಿ ಸಿಕ್ಕಿ ಬಿಡುತ್ತದೆ. ಕ್ಯಾಂಪಸ್‌ನಲ್ಲಿ ಜಾಲದ ಕೊಂಡಿಗಳಿದ್ದರೆ ಮಾಹಿತಿಯೂ ಸಿಗಬಹುದು ಎಂದರು.

ಕ್ರಿಕೆಟ್‌ ನೋಡಲು ಬಂದ

ವಿದೇಶಿಗರ ಮೇಲೆ ಕಣ್ಣಿಡಿ

”ನಗರದಲ್ಲಿ ನಡೆಯುವ ಕ್ರಿಕೆಟ್‌ ಪಂದ್ಯಗಳನ್ನು ನೋಡಲು ನಾನಾ ದೇಶಗಳ ಪ್ರಜೆಗಳು ಬರುತ್ತಾರೆ, ಅವರು ಪಂದ್ಯ ಮುಗಿಸಿಕೊಂಡು ವಾಪಾಸ್‌ ತಮ್ಮ ದೇಶಕ್ಕೆ ತೆರಳಿದ್ದಾರೆಯೇ ಎನ್ನುವುದರ ಬಗ್ಗೆ ಗಮನ ನೀಡಿ. ವೀಸಾ, ಪಾಸ್‌ಪೋರ್ಟ್‌ ಇಲ್ಲದವರನ್ನು ಬಂಧಿಸಿ,” ಎಂದು ಪರಮೇಶ್ವರ್‌ ಹೇಳಿದರು.

Comments are closed.