ಕರ್ನಾಟಕ

ಕೊಡಗಿನಲ್ಲಿ ನೆರೆ ಹಾವಳಿಗೆ ಹಲವು ಹಳ್ಳಿಗಳು ಕಣ್ಮರೆ

Pinterest LinkedIn Tumblr


ಕೊಡಗು: ಕೊಡಗಿನಲ್ಲಿನ ನೆರೆ ಹಾವಳಿಗೆ ಇದುವರೆಗೆ ಆರು ಜನರು ಸಾವನ್ನಪ್ಪಿದ್ದು, ಅನೇಕ ಜನರು ಕಣ್ಮರೆಯಾಗಿದ್ದಾರೆ. ಕಾವೇರಿ ಕಣಿವೆಯಲ್ಲಿ ಇಂದು ಕೂಡ ಮಳೆಯಾಗಿದ್ದು, ಜನರು ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯದಲ್ಲಿ ಎನ್.ಡಿ.ಆರ್​ಎಫ್​ ಮತ್ತು ಅಗ್ನಿ ಶಾಮಕ ಸೇರಿದಂತೆ ಸ್ವಯಂಪ್ರೇರಿತವಾಗಿ ಯುವಕರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಸಂತ್ರಸ್ತರ ರಕ್ಷಣೆಗೆ ಸಾಹಸ ನಡೆಸುತ್ತಿದ್ದಾರೆ.

ಎರಡು ತಿಂಗಳ ಮಗು ರಕ್ಷಣೆ:

ಮಡಿಕೇರಿಯ ತಂತಿಪಾಲದಲ್ಲಿ ನೆರೆ ಹಾವಳಿಯಲ್ಲಿ ಸಿಲುಕಿದ್ದ 2 ತಿಂಗಳ ಮಗುವನ್ನು ರಕ್ಷಿಸಲಾಗಿದೆ. ಜನರಲ್ ತಿಮ್ಮಯ್ಯ ಅಡ್ವೆಂಚರ್ಸ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ ಯುವಕರು 100 ಅಡಿಗೂ ಉದ್ದದ ಕಾವೇರಿ ನದಿ ರೋಪ್​ನ ರೀತಿ ನದಿಗೆ ಹಗ್ಗ ಕಟ್ಟಿ ಆ ಮೂಲಕ ಪುಟ್ಟ ಕಂದನನ್ನು ರಕ್ಷಿಸಿದ್ದಾರೆ.

ಮಳೆಯಿಂದಾಗಿ ಮನೆ ಕಳೆದುಕೊಂಡ ಮುಕ್ಕೊಡ್ಲುವಿನ 70ಕ್ಕೂ ಜನರು ತಮ್ಮ ಜೀವ ರಕ್ಷಣೆಗಾಗಿ ಬೆಟ್ಟ ಹತ್ತಿ ಕೂತಿದ್ದಾರೆ. ಒಂದುಕಡೆ ಮತ್ತೆ ಮಳೆ ಆರ್ಭಟ, ಇನ್ನೊಂದುಕಡೆ ಗುಡ್ಡ ಕುಸಿತ ಭೀತಿಯಿಂದ ಜೀವವನ್ನು ಕೈಯಲ್ಲಿಡಿದುಕೊಂಡು ನೆರವಿನ ನಿರೀಕ್ಷೆಯಲ್ಲಿದ್ದಾರೆ. ಇವರ ರಕ್ಷಣೆಗಾಗಿ ವಿಶೇಷ ತಂಡಗಳನ್ನು ಜಿಲ್ಲಾಡಳಿತ ಕರೆಸಿದ್ದು, ನುರಿತ ಈಜು ತಜ್ಞರು, ಸ್ಪೇಷಲ್ ಆರ್ಮಿ ಫೋರ್ಸ್ ತಂಡಗಳ‌ ಆಗಮಿಸಲಿದೆ.

ನಿರಂತರವಾಗಿ ಗುಡ್ಡ ಕುಸಿಯುತ್ತಿರುವ ಹಿನ್ನಲೆ ಗುಡ್ಡ ಕುಸಿಯುವುದರಿಂದ ರಕ್ಷಣಾ ಕಾರ್ಯ ಸಾಹಸವಾಗಿದೆ. ಈ ಹಿನ್ನಲೆಯಲ್ಲಿ ನುರಿತ ತಜ್ಞರ ನೆರವು ಪಡೆಯಲಾಗುತ್ತಿದೆ. ಗುಡ್ಡ ಕುಸಿತದಿಂದ ರಸ್ತೆ ಮಾರ್ಗಗಳು ಸಂಪೂರ್ಣ ಮುಚ್ಚು ಹೋಗಿದ್ದು ಕುಸಿಯುತ್ತಿರುವ ಗುಡ್ಡದ ಮಣ್ಣನ್ನು ತೆಗೆಯುತ್ತಿರುವ ಜೆಸಿಬಿ ಬಳಕೆಗೆ ಜಿಲ್ಲಾಡಳಿತ ಮುಂದಾಗಿದೆ.

ನಾಪತ್ತೆಯಾದ ಗ್ರಾಮಗಳು:

ನಿರಂತರ ಮಳೆ. ಪ್ರವಾಹಕ್ಕೆ ಅಮ್ಮಿಯಾಲಕ , ಕಾಲೂರು ಮಾದಾಪುರ ಮುಕೋಡ್ಲು, ತಂತಿ ಪಾಲಿ, ಮುಟ್ಲು , ಸಂಪಾಜೆ, ಕೊಯನಾಡು, ಗಾಳಿ ಬೀಡು ಸೇರಿದಂತೆ ಅನೇಕ ಗ್ರಾಮಗಳು ಸಂಪೂರ್ಣ ಮುಳುಗಿದ್ದು, ಜನರು ಗಂಜಿ ಕೇಂದ್ರಗಳ ಆಶ್ರಯ ಪಡೆದಿದ್ದಾರೆ.

ಮಡಿಕೇರಿ ಸೇರಿದಂತೆ ವಿವಿಧೆಡೆ 10 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ರಾಜ್ಯದ ವಿವಿಧೆಡೆಯಿಂದ ನಿರಾಶ್ರಿತರಿಗೆ ನೆರವಿನ ಮಹಾಪೂರ ಹರಿದು ಬರುತ್ತಿದೆ.

ಇಂದು ಕೂಡ ಸಿಎಂ ಪ್ರವಾಸ:

ನಿನ್ನೆ ಜಿಲ್ಲಾ ಪ್ರವಾಸ ನಡೆಸಿದ್ದ ಇಂದು ಕೂಡ ಹವಾಮಾನ ಪರಿಸ್ಥಿತಿ ಅನುಕೂಲಕರವಾಗಿದ್ದಲ್ಲಿ, ಪಿರಿಯಾಪಟ್ಟಣ ಹೆಲಿಪ್ಯಾಡ್​ನಲ್ಲಿ ಇಳಿದು ಕೊಡಗು ಜಿಲ್ಲೆಯ ಪರಿಹಾರ ಕಾಮಗಾರಿಗಳನ್ನು ಪುನರ್ ಪರಿಶೀಲನೆ ನಡೆಸಲಿದ್ದಾರೆ.

ಇಂದು ಕೊಡಗು ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ.

ಕೇಂದ್ರ ಸಚಿವ ಸದಾನಂದ ಗೌಡ ಕೂಡ ಮಳೆ ಹಾನಿ ಪ್ರದೇಶದಲ್ಲಿ ಭೇಟಿ ನೀಡಿದ್ದಾರೆ. ವಿಪಕ್ಷ ನಾಯಕ ಯಡಿಯೂರಪ್ಪ ಕೂಡ ಇಂದು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಲಿದ್ದಾರೆ.

ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ:

ಕಾವೇರಿ ಕಣಿವೆಯಲ್ಲಿ ಮಳೆಯಾಗುತ್ತಿರುವ ಹಿನ್ನಲೆ ಬೇರೆ ಪ್ರದೇಶಗಳಲ್ಲಿ ಪ್ರವಾಹದ ಅಬ್ಬರ ಕಡಿಮೆಯಾಗಿಲ್ಲ. ಈ ಹಿನ್ನಲೆ ಮಕ್ಕಂದೂರು ಸುತ್ತ ಮುತ್ತಲ ಪ್ರದೇಶದ 317 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ. ಮಾಂದಲ್​ ಪಟ್ಟಿಯಲ್ಲಿ 200 ಜನರನ್ನು ರಕ್ಷಣೆ ಮಾಡಲಾಗಿದೆ.

ಮಡಿಕೇರಿಯ ರಾಜಶೀಟ್ ಹಿಂಭಾಗದ ಚಾಮುಂಡೇಶ್ವರಿ ನಗರದಲ್ಲಿ ಗುಡ್ಡ ಕುಸಿಯುತ್ತಿರುವ ಹಿನ್ನಲೆ ಅಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ.

ಹರಿದ ಬಂದ ನೆರವು:

ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಸಂತ್ರಸ್ತರಿಗೆ ಹಾಲು, ಅಕ್ಕಿ, ಬೇಳೆ ಇತರೆ ಧಾನ್ಯಗಳನ್ನು ಪೂರೈಸಿದ್ದು, ರಾಜ್ಯದ ನಾನಾಕಡೆಗಳಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ.

ಆಹಾರಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ಇವುಗಳ ಶೇಖರಣೆ ಕೂಡ ಸವಾಲಾಗಿದೆ. ಈ ಹಿನ್ನಲೆಯಲ್ಲಿ ಆರ್ಥಿಕ ನೆರವು ಮಾಡಿದರೆ ಸಂತ್ರಸ್ತರು ಮುಂದೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಚಿವ ಸಾರಾ ಮಹೇಶ್​ ಮನವಿ ಮಾಡಿದ್ದಾರೆ.

ರಕ್ಷಣಾ ಕಾರ್ಯಾಚರಣೆ ತೊಡಗಿರುವ ಪಡೆಗಳು;

ಆರ್ಮಿ ಡೋಗ್ರಾ ರೆಜಿಮೆಟ್​ 60 ಜನರ, ಆರ್ಮಿ ಇಂಜಿನಿಯರಿಂಗ್​ ಟಾಸ್ಕ್​ ಫೋರ್ಸ್​ 73 ಜನ, 12 ಮುಳುಗುತಜ್ಞರು, ರಾಷ್ಟ್ರೀಯ ವಿಪತ್ತು ಪಡೆ 31 ಜನ, ನಾಗರೀಕ ರಕ್ಷಣಾ ತುರ್ತು ನಿರ್ವಹಣಾ ಪಡೆ 45 ಜನ, ಅಗ್ನಿ ಶಾಮಕ ಸಿಬ್ಬಂದಿ 200ಕ್ಕೂ ಅಧಿಕ ಮಂದಿ, ಎಸ್​ಡಿಆರ್​ಎಫ್​ 30, ಎಂ 17 ಹೆಲಿಕ್ಯಾಪ್ಟರ್​ ರಕ್ಷಣಾ ಕಾರ್ಯಚಾರಣೆಯಲ್ಲಿ ತೊಡಗಿದೆ

Comments are closed.