ಕರ್ನಾಟಕ

ಬೆಂಗಳೂರಿಗೆ ಬಂದಾಗ ವಾಜಪೇಯಿಯಿಂದ ಎಂಟಿಆರ್ ದೋಸೆ ಸೇವನೆ!

Pinterest LinkedIn Tumblr


ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಗಲಿಕೆಯಿಂದ ಭಾವುಕರಾದ ಜೆಡಿಎಸ್ ನಾಯಕ ಪಿಜಿಆರ್ ಸಿಂಧ್ಯಾ ಅವರು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃದಲ್ಲಿ ವಾಜಪೇಯಿ ಅವರ ಜತೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡರು.

ಅಜಾತಶತ್ರು ವಾಜಪೇಯಿ ಅವರನ್ನು ಜೈಲ್ ಕಾ ಸಾಥಿ ( ಜೈಲಿನಲ್ಲಿ ಒಟ್ಟಿಗೆ ಇದ್ದವರು) ಎಂದು ಉಲ್ಲೇಖಿಸಿ ಮಾತನಾಡಿದ ಸಿಂಧ್ಯಾ ಅವರು, ‘ನಾನು ಹಾಗೂ ಗೋಪಿನಾಥ್ ಎಂಟಿಆರ್ ಹೋಟೆಲ್‌ನಿಂದ ಶಾಸಕರ ಭವನಕ್ಕೆ ಮಸಾಲೆ ದೋಸೆ ಕಟ್ಟಿಸಿಕೊಂಡು ಹೋಗಿದ್ದೆವು. ಏಕೆಂದರೆ, ವಾಜಪೇಯಿ ಸೇರಿದಂತೆ ನಮ್ಮ ಇತರೆ ನಾಯಕರು ಅಲ್ಲಿ ಗೃಹ ಬಂಧನದಲ್ಲಿದ್ದರು’ ಎಂಬ ಸಂಗತಿಯನ್ನು ಸ್ಮರಿಸಿದರು.

ಹೌದು, ಶಾಸಕರ ಭವನದಲ್ಲಿ ತಂಗಿದ್ದ ವಾಜಪೇಯಿ, ಎಲ್.ಕೆ.ಆಡ್ವಾಣಿ, ಎಸ್.ಎನ್.ಮಿಶ್ರಾ ಹಾಗೂ ಮಧು ದಂಡಾವತೆ ಅವರನ್ನು ತುರ್ತು ಪರಿಸ್ಥಿತಿ ಘೋಷಣೆಯಾದ ಬೆನ್ನಲ್ಲೇ ಬಂಧಿಸಲಾಗಿತ್ತು.

ವಾಜಪೇಯಿ ಅವರು ಬೆಂಗಳೂರಿಗೆ ಭೇಟಿ ನೀಡಿದಾಗೆಲ್ಲ, ಶಾಸಕರ ಭವನದಲ್ಲೇ ತಂಗುತ್ತಿದ್ದರು. ಸುಕೃತಾ ಏಜೆನ್ಸಿ ಮಾಲೀಕರಾದ ಗೋಪಿನಾಥ್‌ನ ಅವರ ಮನೆ ಊಟವನ್ನೇ ತರಿಸುತ್ತಿದ್ದರು. ಅನಿವಾರ್ಯ ಸಂದರ್ಭದಲ್ಲಿ ಹೋಟೆಲ್ ಊಟ ತರಿಸುವುದು ಬಂದರೇ, ಎಂಟಿಆರ್ ತಿಂಡಿಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದರು.

‘ನಾವು ಎಂಟಿಆರ್‌ನಿಂದ ಕಟ್ಟಿಸಿಕೊಂಡು ಬಂದ ತಿಂಡಿಯನ್ನು ಶಾಸಕರ ಭವನದೊಳಗೆ ಒಯ್ಯಲು ಪೊಲೀಸರು ಬಿಡಲಿಲ್ಲ. ಸ್ವಲ್ಪ ಹೊತ್ತು ಸತಾಯಿಸಿದ ಬಳಿಕ ನಾಯಕರ ಭೇಟಿ ಹಾಗೂ ಉಪಹಾರ ಕೊಡಲು ಅವಕಾಶ ಮಾಡಿಕೊಟ್ಟರು. ಅದರಂತೆ, ವಾಜಪೇಯಿ ಸೇರಿದಂತೆ ಎಲ್ಲ ನಾಯಕರಿಗೂ ಉಪಹಾರ ನೀಡಿದೆವು.

ಉಪಹಾರ ಬಳಿಕ ಕೋಣೆಗೆ ನುಗ್ಗಿದ ಪೊಲೀಸರು, ವಾಜಪೇಯಿ ಸೇರಿದಂತೆ ಉಳಿದ ನಾಯಕರನ್ನು ಬಂಧಿಸಿದರು. ಈ ವೇಳೆ ವಾಜಪೇಯಿ ಅವರು ‘ವಿನಾಶ ಕಾಲೇ ವಿಪರೀತ ಬುದ್ದಿ’ ಎಂದು ಉದ್ಗರಿಸಿದ್ದು, ಈಗಲೂ ನೆನಪಿದೆ’ ಎಂದು ಶಿಂಧ್ಯಾ ಹೇಳಿದರು.

ನಾಯಕರನ್ನೆಲ್ಲ ಶಾಸಕರ ಭವನದಿಂದ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕರೆದೊಯ್ದರು. ಬಳಿಕ ಅಲ್ಲಿಂದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಿದರು ಎಂದು ತಿಳಿಸಿದರು.

Comments are closed.