ಕರ್ನಾಟಕ

ಪ್ರವಾಹ ಕಡಿಮೆ ಮಾಡಲು ಪೂಜೆ ಮೋರೆ ಹೋಗಲು ತಿಳಿಸಿದ ರೇವಣ್ಣ

Pinterest LinkedIn Tumblr


ಹಾಸನ: ಪೂಜೆ – ಪುನಸ್ಕಾರ, ವಾಸ್ತು, ಜ್ಯೋತಿಷ್ಯ, ದಿನಭವಿಷ್ಯ, ಸಂಖ್ಯಾಶಾಸ್ತ್ರ ಎಲ್ಲದರಲ್ಲೂ ಅಪಾರ ನಂಬಿಕೆ ಹೊಂದಿರುವ ಲೋಕೋಪಯೋಗಿ ಸಚಿವ ಎಚ್​ಡಿ ರೇವಣ್ಣ ಆಗಾಗ ತಮ್ಮ ಆಚರಣೆಗಳಿಂದಲೇ ಸುದ್ದಿಯಾಗುತ್ತಾರೆ. ರಾಜ್ಯಾದ್ಯಂತ ಅದರಲ್ಲಿಯೂ ಮಲೆನಾಡಿನ ಭಾಗದಲ್ಲಿ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಸಿದ್ಧ ಸೂತ್ರವೊಂದನ್ನು ರೇವಣ್ಣ ನೀಡಿದ್ದಾರೆ.

ಹಾಸನದ ರಾಮನಾಥಪುರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ರೇವಣ್ಣ, ಪೂಜೆ ಮಾಡಿಸುವ ಮೂಲಕ ಪ್ರವಾಹವನ್ನು ತಲೆಯಬಹುದು ಎಂಬ ಯೋಚನೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆರ್ಭಟಿಸುತ್ತಿರುವ ಮಳೆಯನ್ನು ಶಾಂತಗೊಳಿಸಲು ಶೃಂಗೇರಿ ಶ್ರೀಗಳು ಪೂಜೆ ಸಲ್ಲಿಸುವುದರ ಬಗ್ಗೆ ಸಚಿವ ರೇವಣ್ಣ ಸಹಮತ ವ್ಯಕ್ತಪಡಿಸಿದ್ದಾರೆ.

ಪೂಜೆ ಮಾಡಿಸುವುದರಿಂದ ಪ್ರವಾಹವನ್ನು ತಡೆಯಬಹುದೇ ಎಂದು ವೈಜ್ಞಾನಿಕವಾಗಿ ಚಿಂತಿಸಲು ಸಾಧ್ಯವಿಲ್ಲ. ಆದರೆ ನಂಬಿಕೆಗಳನ್ನು ತಪ್ಪು ಎಂದೂ ಹೇಳಲು ಸಾಧ್ಯವಿಲ್ಲ. ಆದರೆ ನೈಸರ್ಗಿಕ ವಿಕೋಪಗಳಾದಾಗ ಸಚಿವರಾದವರು ವಾಸ್ಥವದ ನೆಲೆಗಟ್ಟಿನಲ್ಲಿ ಯೋಚಿಸಬೇಕೆ ಹೊರತು, ಅಗೋಚರ ಶಕ್ತಿಗಳಾಗಲೀ, ನಂಬಿಕೆಗಳ ಮೇಲಾಗಲೀ ಅಲ್ಲ ಎಂಬ ಅಭಿಪ್ರಾಯ ಕೆಲವರಿಂದ ಕೇಳಿಬಂದಿದೆ.

ಪ್ರವಾಹ ಭೀತಿಯನ್ನು ಎದುರಿಸಲು, ಸಂತ್ರಸ್ತರನ್ನು ರಕ್ಷಿಸಲು ಬೇಕಾದ ಸಕಲ ಪ್ರಯತ್ನಗಳನ್ನು ಕರ್ನಾಟಕ ರಾಜ್ಯ ಸರ್ಕಾರ ಮಾಡುತ್ತಿದೆ. ಜತೆಗೆ ಕೇಂದ್ರದ ಎನ್​ಡಿಆರ್​ಎಫ್​ ಪಡೆ ಕೂಡ ಎಡೆಬಿಡದೆ ಪ್ರಯತ್ನದಲ್ಲಿ ತೊಡಗಿದೆ. ಕೆಲವೆಡೆ ಹೋಮ ಹವನಗಳ ಮೂಲಕವೂ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇದು ಎಷ್ಟರಮಟ್ಟಿಗೆ ಪ್ರಯೋಜನಕ್ಕೆ ಬರಲಿದೆ ಎಂಬುದು ತರ್ಕಕ್ಕೆ ನಿಲುಕದ್ದು.

ಶೃಂಗೇರಿ ಶ್ರೀಗಳ ಮಾರ್ಗದರ್ಶನದಲ್ಲಿ ಸ್ಥಳೀಯರ ಒಪ್ಪಿಗೆ ಪಡೆದು ಪುಣ್ಯ ಕ್ಷೇತ್ರ ರಾಮನಾಥಪುರ ಅಭಿವೃದ್ಧಿ ಮಾಡಲಾಗುವುದು ಎಂದು ರೇವಣ್ಣ ಹೇಳಿದರು. ಕಾವೇರಿ ನದಿ ಪ್ರವಾಹ ತಡೆಯಲು ಶಾಶ್ವತ ತಡೆಗೋಡೆ ನಿರ್ಮಾಣದ ಬಗ್ಗೆ ಯೋಚಿಸಲಾಗುವುದು,
ಹಾನಿಯಾಗಿರೋ ರಸ್ತೆಗಳನ್ನ ಯುದ್ದೋಪಾದಿಯಲ್ಲಿ ಸರಿಪಡಿಸಲಾಗುವುದು ಎಂದು ರೇವಣ್ಣ ಹೇಳಿದರು.

ಜತೆಗೆ ಮಳೆಯಿಂದ ಹಾನಿಯಾದ ಸಂತ್ರಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು,
ಅಲ್ಲಿಯವರೆಗೆ ಗಂಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು. ಬೆಳೆಹಾನಿ ನಷ್ಟ ಕುರಿತಂತೆ ಅಧಿಕಾರಿಗಳ ಮಾಹಿತಿ ಪಡೆದು ನಂತರ ಸೂಕ್ತ ಪರಿಹಾರ ನೀಡಲಾಗುವುದು.
ಸೂರು ಕಳೆದುಕೊಂಡವರಿಗೂ ವ್ಯವಸ್ಥೆ ಕಲ್ಪಿಸಲಾಗುವುದು, ಸಕಲೇಪುರದ ಕಾಫಿ ಬೆಳೆಹಾನಿಯ ಬಗ್ಗೆಯೂ ಕಾಫಿಬೋರ್ಡ್ ಮಾಹಿತಿ ಪಡೆದು ಪರಿಹಾರ ನೀಡಲಾಗುವುದು, ಎಂದು ಮಳೆ ಪರಿಹಾರ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

Comments are closed.