ಕರ್ನಾಟಕ

ಎದುರುಗೊಂಡರು ಪರಸ್ಪರ ಮಾತನಾಡದ ಸಿದ್ದರಾಮಯ್ಯ-ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿಯವರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಇಂದು ಎದುರಾಬದುರಾ ಬಂದರೂ ಪರಸ್ಪರ ಮಾತನ್ನಾಡದೇ ಇಬ್ಬರೂ ಮುಂದೆ ನಡೆದಿದ್ದಾರೆ. ಈ ಮೂಲಕ ಇಬ್ಬರ ನಡುವಿನ ಶೀತಲ ಸಮರ ಇನ್ನೂ ಹಾಗೆಯೇ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಬೆಳಗ್ಗೆ ಮಾಣಿಕ್ಷಾ ಪೆರೇಡ್​ ಮೈದಾನದಲ್ಲಿ ಧ್ವಜಾರೋಹಣ ಮಾಡಿ ರಾಜ್ಯದ ಜನರನ್ನುದ್ದೇಶಿಸಿ ಮಾತನಾಡಿದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಸಂಗೊಳ್ಳಿ ರಾಯಣ್ಣ ಜಯಂತೋತ್ಸವಕ್ಕೆ ಆಗಮಿಸಿದರು. ನಗರದ ಚಾಲುಕ್ಯ ಸರ್ಕಲ್​ ಬಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್​ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ವೇಳೆಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು. ಮಾಲಾರ್ಪಣೆಯ ನಂತರ ನೆರೆದಿದ್ದ ಜನರನ್ನುದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದರು.

ಭಾಷಣದ ನಂತರ ಸಿದ್ದರಾಮಯ್ಯ ಹೊರಟು ನಿಂತಾಗ ಕುಮಾರಸ್ವಾಮಿ ಸ್ಥಳಕ್ಕಾಗಮಿಸಿದರು. ಆದರೆ ಸಿದ್ದರಾಮಯ್ಯ ಬರುತ್ತಿರುವುದನ್ನು ನೋಡಿ ಕೆಲ ಕಾಲ ಕಾರಿನಿಂದ ಇಳಿಯದೇ ಕಾರಲ್ಲೇ ಕೂತರು. ಈ ಮೂಲಕ ಸಿದ್ದರಾಮಯ್ಯ ವಿರುದ್ಧ ಇರುವ ಆಕ್ರೋಶವನ್ನು ಎಚ್​ಡಿಕೆ ತೋರಿಸಿದರು ಎಂಬ ಮಾತುಗಳು ಕಾರ್ಯಕ್ರಮ ಆಯೋಜಕರಿಂದ ಕೇಳಿ ಬರುತ್ತಿವೆ. ಕಾರಿನಿಂದ ಇಳಿದು ಸಿದ್ದರಾಮಯ್ಯ ಅವರನ್ನು ಮಾತನಾಡಿಸ ಬಹುದಿತ್ತು ಆದರೂ ಬೇಕೆಂದೇ ಮಾತನಾಡಿಸಲಿಲ್ಲ ಎಂದು ಆರೋಪಗಳು ಕೇಳಿ ಬಂದಿವೆ.

ಸಿದ್ದರಾಮಯ್ಯ ಕೂಡ ಕುಮಾರಸ್ವಾಮಿಯವರನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ತಮ್ಮ ಎಂದಿನ ಗತ್ತಿನಲ್ಲೇ ಸ್ಥಳದಿಂದ ಹೊರಟರು. ಇಬ್ಬರೂ ನಾಯಕರು ಪರಸ್ಪರ ಮುಖಾಮುಖಿಯಾದರೂ ಮಾತನಾಡಿಸಲಿಲ್ಲ. ಕನಿಷ್ಟ ಶಿಶ್ಟಾಚಾರಕ್ಕಾದರೂ ಉಭಯ ಕುಶಲೋಪರಿ ಮಾಡಬಹುದಿತ್ತು, ಆದರೆ ಇಬ್ಬರೂ ನಾಯಕರಿಗೆ ತಮ್ಮ ಪ್ರತಿಷ್ಠೆಯೇ ಮುಖ್ಯವಾದಂತೆ ಈ ಘಟನೆ ಭಾಸವಾಗುತ್ತಿದೆ.

ಸಿದ್ದರಾಮಯ್ಯ ಸ್ಥಳದಿಂದ ತೆರಳಿದ ನಂತರವಷ್ಟೇ ಕುಮಾರಸ್ವಾಮಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಂಗೊಳ್ಳಿ ರಾಯಣ್ಣ ಸರ್ಕಲ್​ನಲ್ಲಿ 221ನೇ ರಾಯಣ್ಣ ಜಯಂತೋತ್ಸವದಲ್ಲಿ ಸಿದ್ದರಾಮಯ್ಯ, ಎಚ್​ಡಿಕೆ ಅಷ್ಟೇ ಅಲ್ಲದೇ, ಪರಿಷತ್​ ಸಭಾಪತಿ ಬಸವರಾಜ್​ ಹೊರಟ್ಟಿ, ಮಾಜಿ ಸಚಿವ ಎಚ್​ಎಂ ರೇವಣ್ಣ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ವಂದನೆ ಸಲ್ಲಿಸಿದರು.

Comments are closed.