ಕರ್ನಾಟಕ

ಬೆಂಗಳೂರು; ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ, ಮಗು ಸಾವು

Pinterest LinkedIn Tumblr

ಬೆಂಗಳೂರು/ ಹೊಸೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗರ್ಭಿಣಿ ಅವಧಿಗೆ ಮುನ್ನ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.

27 ವರ್ಷದ ತುಂಬು ಗರ್ಭಿಣಿ ನಿನ್ನೆ ತಂಜಾವೂರು ಎಕ್ಸ್ ಪ್ರೆಸ್ ರೈಲಿನಲ್ಲಿ ತಮಿಳು ನಾಡಿನ ನಾಗಪಟ್ಟಿಣಂನಿಂದ ಬೆಂಗಳೂರಿಗೆ ಬರುತ್ತಿದ್ದರು. ಹೊಸೂರು ತಲುಪುವ ಹೊತ್ತಿಗೆ ರೈಲಿನ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅವಧಿಗೆ ಮುನ್ನ ಹುಟ್ಟಿದ ಮಗು ಒಂದು ಗಂಟೆ ಕಳೆದ ನಂತರ ಹೊಸೂರಿನ ಆಸ್ಪತ್ರೆಯಲ್ಲಿ ಅಸುನೀಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ರೈಲ್ವೆ ವಲಯದ ಅಧಿಕಾರಿ, ನಾಗಪಟ್ಟಿಣಂ ಮೂಲದ ಶರಣ್ಯ ಎಂಬ ಮಹಿಳೆ ತನ್ನ ಪತಿಯೊಂದಿಗೆ ರೈಲು ಸಂಖ್ಯೆ 16231ರ ಎಸ್ 4 ಬೋಗಿಯಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಮಹಿಳೆ 6 ತಿಂಗಳ ಗರ್ಭಿಣಿಯಾಗಿದ್ದರು. ರೈಲು ಹೊಸೂರಿಗೆ ಬರುತ್ತಿದ್ದ ವೇಳೆ ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ಗರ್ಭಪಾತವಾಯಿತು. ನಸುಕಿನ ಜಾವ 4.25ರ ಸುಮಾರಿಗೆ ರೈಲಿನ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು ಎಂದು ಹೇಳಿದರು.

ರೈಲು ನಿಲ್ದಾಣಕ್ಕೆ ಬಂದು ತಲುಪುವ ಮೊದಲೇ ಮತ್ತೊಬ್ಬ ಪ್ರಯಾಣಿಕರು ನಿಲ್ದಾಣದ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರಿಂದ ಮೂರು ನಿಮಿಷಗಳಲ್ಲಿಯೇ ಆಂಬ್ಯುಲೆನ್ಸ್ ಬಂದು ತಲುಪಿತ್ತು. ಹೊಸೂರಿನಲ್ಲಿ ಸುಮಾರು 21 ನಿಮಿಷ ರೈಲನ್ನು ನಿಲ್ಲಿಸಲಾಗಿತ್ತು.

ಈ ಬಗ್ಗೆ ಮಾಹಿತಿ ನೀಡಿದ ಹೊಸೂರು ರೈಲ್ವೆ ನಿಲ್ದಾಣದ ಕರ್ತವ್ಯನಿಯೋಜಿತ ನಿಲ್ದಾಣ ವ್ಯವಸ್ಥಾಪಕ ಎಸ್ ಕುಮಾರನ್, ರೈಲ್ವೆ ನಿಲ್ದಾಣಕ್ಕೆ ಬಂದು ತಲುಪುವ ಹೊತ್ತಿಗೆ ತಾಯಿ ಮತ್ತು ಮಗು ಇಬ್ಬರೂ ಎಚ್ಚರವಾಗಿದ್ದರು. ಆಂಬ್ಯುಲೆನ್ಸ್ ಕೂಡಲೇ ಬಂದು ತಾಯಿ ಮಗುವನ್ನು ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗು ಕೇವಲ 600 ಗ್ರಾಂ ತೂಕವಿತ್ತಷ್ಟೆ, ಹೀಗಾಗಿ ಇನ್ಕ್ಯುಬೇಟರ್ ನಲ್ಲಿ ಇಡಲಾಗಿತ್ತು. ಆದರೆ ಕೇವಲ ಒಂದು ಗಂಟೆಯಲ್ಲಿ ಮಗು ತೀರಿಹೋಯಿತು. ತಾಯಿ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.

ಚಿಕಿತ್ಸೆ ಪಡೆದ ತಾಯಿ ಸಂಜೆ 4 ಗಂಟೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. ಮಗು ಅತ್ಯಂತ ಕಡಿಮೆ ತೂಕ ಹೊಂದಿದ್ದರಿಂದ ಮತ್ತು ಉಸಿರುಗಟ್ಟಿ ಹೋಗಿದ್ದರಿಂದ ಬದುಕುಳಿಯಲಿಲ್ಲ ಎಂದು ವೈದ್ಯರು ಹೇಳಿದರು.

Comments are closed.