ಕರ್ನಾಟಕ

ಸಿದ್ದು-ರಾಹುಲ್ ಗೌಪ್ಯ ಮಾತುಕತೆ: ಮೈತ್ರಿಗೆ ಆಕ್ಷೇಪ, ಡಿಕೆಶಿ & ಪರಂ ವಿರುದ್ಧ ದೂರು

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​ ಕಾರ್ಯಕಾರಿಣಿ ಸಭೆ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಪ್ರತ್ಯೇಕವಾಗಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಗೌಪ್ಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರಮುಖ ಚರ್ಚೆ ಮಾಡಿದ್ದಾರೆ.

ಲೋಕಸಭಾ ಚುನಾವಣೆ ಮೈತ್ರಿ ಬಗ್ಗೆ ಚರ್ಚೆ ಮಾಡಿದ ರಾಹುಲ್ ಗಾಂಧಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿಗೆ ಹಲವು ಕಡೆ ವಿರೋಧ ಇರುವುದನ್ನ ಗಮನಕ್ಕೆ ತಂದಿದ್ಧಾರೆ. ಅಲ್ಲದೇ ಹಳೆ ಮೈಸೂರು ಭಾಗದಲ್ಲಿ ಮೈತ್ರಿ ಮಾಡಿಕೊಂಡರೇ ಬಿಜೆಪಿಗೆ ಸಂಘಟನೆಗೆ ನಾವೇ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ಧಾರೆ ಎನ್ನಲಾಗಿದೆ.

ಉತ್ತರ ಕರ್ನಾಟಕದಲ್ಲಿ ಮೈತ್ರಿಯಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲಿಯೂ ಬಿಜೆಪಿಗೆ ನಾವೇ ಪ್ರತಿಸ್ಪರ್ಧಿ. ಉತ್ತರದಲ್ಲಿ ಜೆಡಿಎಸ್​ಗೆ ಅವಕಾಶ ಕೊಟ್ರೆ ಗೆಲ್ಲದಿದ್ದರೂ ಸಂಘಟನಾ ದೃಷ್ಟಿಯಿಂದ ಜೆಡಿಎಸ್ ಪಕ್ಷಕ್ಕೆ ಲಾಭವಾಗುತ್ತೆ. ಆದರೆ, ಮೈತ್ರಿಯಿಂದ ಕಾಂಗ್ರೆಸ್ ಗೆ ನಷ್ಟವೇ ಆಗುತ್ತದೇ ಎಂದು ರಾಹುಲ್​ ಜತೆ ಸಿದ್ದರಾಮಯ್ಯ ಚರ್ಚಿಸಿದ್ಧಾರೆ.

ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್​ಗೆ ನೇರ ಪೈಪೋಟಿ ನಾವೇ, ಹೀಗಾಗಿ ಅವರಿಗೆ ಕ್ಷೇತ್ರ ಬಿಟ್ಟು ಕೊಡುವುದರಿಂದ ಜೆಡಿಎಸ್​ಗೆ ನೇರ ಲಾಭವಾಗಲಿದೆ. ಆ ಭಾಗದಲ್ಲಿ ಮೂರನೇ ಸ್ಥಾನದಲ್ಲಿ ಇರುವ ಬಿಜೆಪಿ ಎರಡನೇ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಆತಂಕ ವ್ಯಕ್ತಪಡಿಸಿದ್ದಾರೆ.

ಮೈತ್ರಿ ಭವಿಷ್ಯದಲ್ಲಿ ಬರುವ ಚುನಾವಣೆಗಳ ದೃಷ್ಟಿಯಿಂದ ಪಕ್ಷಕ್ಕೆ ಮಾರಕವಾಗಲಿದೆ. ಇದೇ ಅಭಿಪ್ರಾಯವನ್ನ ಬೂತ್ ಮಟ್ಟದ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೈತ್ರಿ ಮುನ್ನಾ ನಾವು ಹಲವು ಬಾರಿ ಯೋಚಿಸಬೇಕು ಎಂದಿದ್ದಾರೆ.

ಇದೆ ವೇಳೆ ಡಿಸಿಎಂ ಪರಮೇಶ್ವರ್ , ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ರಾಹುಲ್​ಗೆ ದೂರು ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ಬಂದ ಬಳಿಕ ಡಿಕೆಶಿ ಮತ್ತು ಪರಮೇಶ್ವರ್ ಪಕ್ಷದ ಪರವಾಗಿ ನಿಲ್ಲುತ್ತಿಲ್ಲ. ಮೈತ್ರಿ ಸರ್ಕಾರದಲ್ಲಿ ನಮ್ಮ ಸರ್ಕಾರ ಜಾರಿ ಮಾಡಿದ ಯೋಜನೆಗಳಿಗೆ ಹಿನ್ನಡೆ ಆದರೂ ಮಾತನಾಡುತ್ತಿಲ್ಲ ಎಂದು ದೂರಿದ್ಧಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣಾ ಮೈತ್ರಿಗೆ ಆಕ್ಷೇಪ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಸಚಿವ ಡಿ.ಕೆ ಶಿವಕುಮಾರ್​ , ಪರಮೇಶ್ವರ್ ವಿರುದ್ಧ ಹೈಕಮಾಂಡ್ ಮುಂದೆ ಗರಂ ಆಗಿದ್ಧಾರೆ. ಅಲ್ಲದೇ ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ‌ಮೈತ್ರಿ ಬಗ್ಗೆ ತೀರ್ಮಾನ ಮಾಡುವುದು ಸೂಕ್ತ. ಜಾತ್ಯತೀತ ಪಕ್ಷಗಳು ಸೇರಿ ಮೋದಿಯನ್ನ ಸೋಲಿಸುವುದಷ್ಟೇ ನಮ್ಮ ಗುರಿ. ಹೀಗಾಗಿ, ಲೋಕಸಭಾ ಚುನಾವಣೆಗೆ ಸಮಯವಿದ್ದು, ನೋಡಿ ಮೈತ್ರಿ ನಿರ್ಧಾರ ಮಾಡೋಣ ಎಂದಿದ್ಧಾರೆ ಮಾಜಿ ಸಿಎಂ ಸಿದ್ದರಾಮಯ್ಯ.

Comments are closed.