ಕರ್ನಾಟಕ

ಮಳೆಹಾನಿ ಪರಿಹಾರ: 43 ಕೋಟಿ ಬಿಡುಗಡೆ

Pinterest LinkedIn Tumblr


ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಳೆನಾಡಿನಲ್ಲಿ ಭಾರೀ ಮಳೆ ಮತ್ತು ಇತರೆ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಆಗಿರುವ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ಸರ್ಕಾರ 43 ಕೋಟಿ ರೂ. ಬಿಡುಗಡೆ ಮಾಡಿದೆ.

ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 5 ಕೋಟಿ ರೂ.ಗಿಂತ ಕಡಿಮೆ ಅನುದಾನ ಇರುವ ರಾಜ್ಯದ 17 ಜಿಲ್ಲೆಗಳಿಗೆ ಈ ಪರಿಹಾರ ಮೊತ್ತ ಹಂಚಿಕೆ ಮಾಡಲಾಗಿದ್ದು, ಮಳೆಯಿಂದ ಮಾನವ ಪ್ರಾಣಹಾನಿ, ಜಾನುವಾರು ಹಾನಿ, ಸಾರ್ವಜನಿಕ ಆಸ್ತಿ ಹಾನಿ, ವಾಸದ ಮನೆ ಹಾನಿ ಸೇರಿದಂತೆ ಮೂಲ ಸೌಕರ್ಯಗಳಿಗೆ ಹಾನಿಯಾಗಿದ್ದು, ಇಲ್ಲಿ ತುರ್ತು ಪರಿಹಾರ ಕೈಗೊಳ್ಳಲು ಹಾಗೂ ಮಳೆ ಬಾರದೆ ಇರುವ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಲಿರುವುದರಿಂದ ಈ ಕಾರ್ಯಗಳಿಗೆ ಅನುದಾನ ಬಳಸಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾರ್ಗಸೂಚಿ ಪ್ರಕಾರ ಈ ಮೊತ್ತ ವೆಚ್ಚ ಮಾಡಬೇಕು. ಬಿಡುಗಡೆಯಾಗಿರುವ ಉದ್ದೇಶಕ್ಕೆ ಮಾತ್ರ ಖರ್ಚು ಮಾಡಬೇಕು ಎಂದು ಹೇಳಿರುವ ಸರ್ಕಾರ ಹಣ ಬಳಕೆಯಲ್ಲಿ ಲೋಪವಾದಲ್ಲಿ ಜಿಲ್ಲಾಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಒಟ್ಟು 43 ಕೋಟಿ ರೂ. ಅನುದಾನದ ಪೈಕಿ ಬಳ್ಳಾರಿಗೆ 2 ಕೋಟಿ ರೂ., ಬೆಳಗಾವಿ- 3 ಕೋಟಿ ರೂ., ಚಾಮರಾಜನಗರ- 2 ಕೋಟಿ ರೂ., ಚಿಕ್ಕಬಳ್ಳಾಪುರ- 2 ಕೋಟಿ ರೂ., ಚಿಕ್ಕಮಗಳೂರು- 2 ಕೋಟಿ ರೂ., ಚಿತ್ರದುರ್ಗ- 3 ಕೋಟಿ ರೂ., ದಾವಣಗೆರೆ- 3 ಕೋಟಿ ರೂ., ಧಾರವಾಡ- 5 ಕೋಟಿ ರೂ., ಗದಗ- 2 ಕೋಟಿ ರೂ., ಹಾಸನ- 2 ಕೋಟಿ ರೂ., ಕೋಲಾರ- 2 ಕೋಟಿ ರೂ., ಮಂಡ್ಯ- 3 ಕೋಟಿ ರೂ., ಮೈಸೂರು- 2 ಕೋಟಿ ರೂ., ರಾಯಚೂರು- 3 ಕೋಟಿ ರೂ., ರಾಮನಗರ- 2 ಕೋಟಿ ರೂ., ತುಮಕೂರು- 3 ಕೋಟಿ ರೂ. ಹಾಗೂ ವಿಜಯಪುರ ಜಿಲ್ಲೆಗೆ 2 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

Comments are closed.